ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮಳೆ ಹಿನ್ನೆಲೆಯಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯ ವಾರ್ ರೂಮ್ಗೆ ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್, ಸೋಮವಾರ ತಡರಾತ್ರಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೋಮವಾರ ಮಧ್ಯರಾತ್ರಿ ಮಳೆ ಸುರಿದ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಬರುವ ದೂರುಗಳು ಹಾಗೂ ವಾರ್ ರೂಮ್ ಸಿಬ್ಬಂದಿ ಕಾರ್ಯವೈಖರಿಯನ್ನು ಶಿವಕುಮಾರ್ ಅವರು ಖುದ್ದು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳಿಗೆ ಕೆಲವು ಮಾರ್ಗದರ್ಶನ ನೀಡಿದರು.
ಪಾಲಿಕೆ ಆಧಿಕಾರಿಗಳು, ಸಿಬ್ಬಂದಿಗೆ ಸೂಚನೆಗಳು: ಸಂಭವನೀಯ ಅನಾಹುತಗಳನ್ನು ತಪ್ಪಿಸಲು ಅಧಿಕಾರಿಗಳು/ಇಂಜಿನಿಯರ್ಗಳು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ರಾಜಧಾನಿ ಬೆಂಗಳೂರಿನ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಎಚ್ಚರಿಕೆ ವಹಿಸಬೇಕು. ಅವರ ಸುರಕ್ಷತೆ ಬಗ್ಗೆ ಸಿಬ್ಬಂದಿ ಗಮನ ಹರಿಸಬೇಕು. ಸಹಾಯವಾಣಿ ಕೇಂದ್ರದಲ್ಲಿ (Helpline Centre) ಸಂಬಂಧಪಟ್ಟ ಅಧಿಕಾರಿಗಳು ಸದಾ ಜಾಗರೂಕರಾಗಿ ಇರಬೇಕು ಎಂದು ಸೂಚಿಸಿದ್ದಾರೆ.
ಸಾರ್ವಜನಿಕರಿಂದ ಬಂದ ದೂರುಗಳಿಗೆ ತಕ್ಷಣ ಸ್ಪಂದಿಸಬೇಕು. ರಸ್ತೆ ಸಂಚಾರಕ್ಕೆ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಬೇಕು. ಪದೇ ಪದೆ ಅನಾಹುತ ಸಂಭವಿಸುವ ಕಡೆ ಹೆಚ್ಚು ಗಮನ ಕೊಡಬೇಕು. ಯಾವುದೇ ಪ್ರಾಣಾಪಾಯಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕ್ಷಿಪ್ರ ನೆರವು ಒದಗಿಸಬೇಕು. ಕಾಲುವೆಗಳಲ್ಲಿ, ಸರಾಗವಾಗಿ ನೀರು ಹರಿದು ಹೋಗಬೇಕು. ಇದಕ್ಕೆ ಇರುವ ಅಡಚಣೆಗಳನ್ನು ತೆರವುಗೊಳಿಸಬೇಕು ಎಂದು ತಿಳಿಸಿದ್ದಾರೆ.
ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ರೌಂಡ್ಸ್ ಮಾಡಿ, ರಸ್ತೆ ಮತ್ತು ಅಂಡರ್ ಪಾಸ್ಗಳಲ್ಲಿ ನಿಂತಿರುವ ನೀರನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಪರಿಹಾರ ಕಾರ್ಯಗಳಿಗೆ ಯಾವುದೇ ಹಣಕಾಸಿನ ತೊಂದರೆ ಇರುವುದಿಲ್ಲ. ನಾನು ಯಾವುದೇ ಸಂದರ್ಭದಲ್ಲಿ ಬೇಕಾದರೂ ದಿಢೀರ್ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ಅಸಡ್ಡೆ, ಬೇಜವಾಬ್ದಾರಿ ತೋರಿದ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರಿನ ವಿವಿಧ ಭಾಗಗಳಲ್ಲಿ ನಿರಂತರವಾಗಿ ಎರಡು ಗಂಟೆಗಳ ಕಾಲ ಮಳೆ ಬಂದಿದೆ. ಕೆಲವೆಡೆ ಸಂಚಾರ ಸಮಸ್ಯೆ ಎದುರಾಗಿದೆ. ಉಳಿದಂತೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಅವರ ದೂರು ಸ್ವೀಕಾರ ಹಾಗೂ ಅವುಗಳಿಗೆ ನಮ್ಮ ಅಧಿಕಾರಿಗಳು ಹೇಗೆ ಸ್ಪಂದಿಸುತ್ತಿದ್ದಾರೆ ಎಂದು ಪರಿಶೀಲನೆ ಮಾಡಲು ವಾರ್ ರೂಮ್ಗೆ ಭೇಟಿ ನೀಡಿದ್ದೇನೆ ಎಂದರು.
ಪಾಲಿಕೆ ವಲಯ ಆಯುಕ್ತರು, ಜಂಟಿ ಆಯುಕ್ತರಿಗೆ ಮೇಳೆ ಬೀಳುತ್ತಿರುವ ಸ್ಥಳಗಳಿಗೆ ಭೇಟಿ ನೀಡಲು ಸೂಚನೆ ನೀಡಿದ್ದೇವೆ. ಅವರು ಹೆಚ್ಚು ಮಳೆ ಸುರಿದ ಪ್ರದೇಶಗಳಲ್ಲಿ ಪರಿಶೀಲನೆ ಮಾಡುತ್ತಿದ್ದಾರೆ. ಯಾವ ಕಾಲುವೆಗಳಲ್ಲಿ ಎಷ್ಟು ಪ್ರಮಾಣದ ನೀರು ಹರಿದು ಹೋಗುತ್ತಿದೆ ಎಂಬ ಮಾಹಿತಿ ಇಲ್ಲಿ ದಾಖಲಾಗುತ್ತಿದೆ. ನೂರಾರು ದೂರುಗಳು ಬರುತ್ತಿದ್ದು, ಇಲ್ಲಿನ ಸಿಬ್ಬಂದಿ ಅವುಗಳಿಗೆ ಸ್ಪಂದಿಸುತ್ತಿದ್ದಾರೆ. ನಾನು ಕೂಡ ಮೂರ್ನಾಲ್ಕು ದೂರುಗಳನ್ನು ಸ್ವೀಕರಿಸಿದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ನಮ್ಮ ಅಧಿಕಾರಿಗಳು ಜಾಗರೂಕರಾಗಿ ಕೆಲಸ ಮಾಡುತ್ತಿದ್ದಾರೆ.
ಏರ್ಪೋರ್ಟ್ ಬಳಿ ಸಂಚಾರಿ ಸಮಸ್ಯೆ ಎದುರಾಗಿದೆ. ಅಲ್ಲಿಗೆ ಪಾಲಿಕೆ ಆಯುಕ್ತರು ಹೋಗಿದ್ದಾರೆ. ರಾಜರಾಜೇಶ್ವರಿ ನಗರದ ಕಡೆ ಹೆಚ್ಚಿನ ಪ್ರಮಾಣದ ನೀರು ಹರಿದು ಹೋಗುತ್ತಿದೆ. ಉಳಿದಂತೆ ಎಲ್ಲೂ ಯಾವುದೇ ತೊಂದರೆ ಆಗಿಲ್ಲ. ಮಳೆ ಬರುತ್ತಿರುವುದು ಸಂತೋಷದ ವಿಚಾರ. ಮಳೆ ಬರಲಿ. ಮುಂಜಾಗೃತಾ ಕ್ರಮವಾಗಿ ಅಧಿಕಾರಿಗಳು ಕೆಲಸ ಮಾಡಲಿದ್ದಾರೆ. ಕೆ.ಆರ್ ವೃತ್ತ ಸೇರಿದಂತೆ ಇತರೆ ಕಡೆಗಳಲ್ಲಿ ನಾನು ಒಂದು ರೌಂಡ್ ಹಾಕಿಕೊಂಡು ಬಂದಿದ್ದೇನೆ. ಕೆ.ಆರ್ ವೃತ್ತದ ಬಳಿ ಕಳೆದ ಬಾರಿಯ ಅನಾಹುತ ಆಗಬಾರದು ಎಂದು ಅಂಡರ್ ಪಾಸ್ ಮುಚ್ಚಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ರಾಜ್ಯ ರಾಜಧಾನಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ 50 - 78 ದಾಖಲು: ಸಿಲಿಕಾನ್ ಸಿಟಿ ಪ್ರಸ್ತುತ ಸೇಫ್ ಸಿಟಿ..!