ಬೆಂಗಳೂರು : ಭಾನುವಾರ ರಾತ್ರಿ ಗುಡುಗು ಸಹಿತ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ರಸ್ತೆಗಳ ಮೇಲೆ 2-3 ಅಡಿ ನೀರು ನಿಂತ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ. ಸಂಗ್ರಹಗೊಂಡಿರುವ ಮಳೆ ನೀರಿನ ನಡುವೆಯೇ ವಾಹನಗಳು ಸಂಚರಿಸುತ್ತಿವೆ. ಕೆಲವು ವೃತ್ತಗಳಲ್ಲಿ ವಾಹನಗಳು ಮುಂದಕ್ಕೆ ಸಾಧ್ಯವಾಗದೆ ಪರ್ಯಾಯ ರಸ್ತೆಗಳಲ್ಲಿ ಸಂಚರಿಸುತ್ತಿವೆ. ವಿದ್ಯುತ್ ಪೂರೈಕೆ ಸ್ಥಗಿತವಾಗಿ ಹಲವು ಬಡಾವಣೆಗಳಲ್ಲಿನ ನಿವಾಸಿಗಳು ಪರದಾಡುತ್ತಿದ್ದಾರೆ. ಈ ನಡುವೆ ಮತ್ತೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಸತತ ಮಳೆಯಿಂದ ಬೆಂಗಳೂರು ನಗರ ಕೆರೆಗಳಂತಾಗಿದೆ. ಮಹದೇವಪುರ ವಲಯದ ಹೊರಮಾವು ಸಾಯಿ ಬಡಾವಣೆ, ನಾಗಪ್ಪರೆಡ್ಡಿ ಬಡಾವಣೆ, ರಾಮಮೂರ್ತಿ ನಗರ ಮುಖ್ಯ ರಸ್ತೆ, ಹೆಚ್ಎಎಲ್ ಭಾಗದ ತಗ್ಗು ಪ್ರದೇಶ, ಸರ್ಜಾಪುರ ಮುಖ್ಯರಸ್ತೆ, ರೈನ್ ಬೊ ಬಡಾವಣೆ, ಬೆಳ್ಳಂದೂರು ಇಕೋಸ್ಪೇಸ್ ಮುಖ್ಯರಸ್ತೆ, ಬೆಳೆಗೆರೆ, ವರ್ತೂರು ಭಾಗಗಳಲ್ಲಿ ಹಲವು ಅಪಾರ್ಟ್ಮೆಂಟ್ಗಳು ಜಲಾವೃತವಾಗಿವೆ.
ಸರ್ಜಾಪುರ ಮುಖ್ಯರಸ್ತೆಯ ಬೆಳ್ಳಂಡೂರು ಇಕೋಸ್ಪೇಸ್ ಬಳಿ 4 ಅಡಿಗೂ ಹೆಚ್ಚು ನೀರು ರಸ್ತೆಯಲ್ಲಿ ಹರಿಯುತ್ತಿದ್ದು ವಾಹನ ಸವಾರರು ತೀವ್ರ ಪರಾದಾಡುತ್ತಿದ್ದಾರೆ. ರಸ್ತೆಯಲ್ಲಿ ಮಳೆ ನೀರು ತುಂಬಿಕೊಂಡಿದ್ದು, ವಾಹನ ಸಂವಾರ ನಿಧಾನಗತಿಯ ಸಾಗುತ್ತಿದ್ದು ಟ್ರಾಫಿಕ್ ಜಾಮ್ ಉಂಟಾಗಿದೆ. ವೈಟ್ ಫೀಲ್ಡ್ನ ನಲ್ಲೂರಹಳ್ಳಿಯ ಡಿಎನ್ ಎ, ಜೈ ಫಾರ್ಚೂನ್ ಅಪಾರ್ಟ್ಮೆಂಟ್ಗಳು ಸಂಪೂರ್ಣ ಜಲಾವೃತವಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ನೀರು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ.
ವರ್ತೂರು, ಬೆಳೆಗೆರೆ, ಪಣತ್ತೂರು ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ನೀರು ತುಂಬಿಕೊಂಡಿದ್ದು ಬೋಟ್ಗಳ ಮುಖಾಂತರ ಜನರನ್ನು ಹೊರತರುತ್ತಿದ್ದಾರೆ. ಮಳೆ ಬಂದಾಗಷ್ಟೇ ಬರುವ ಅಧಿಕಾರಿ, ಜನಪ್ರತಿನಿಧಿಗಳು ರಾಜಾಕಾಲುವೆ ಒತ್ತುವರಿಯನ್ನು ತೆರವುಗೊಳಿಸಿ ಸಮಸ್ಯೆಗಳನ್ನು ಪರಿಹರಿಸಬೇಕಿದೆ. ಬೆಳ್ಳಂದೂರು ರಸ್ತೆ, ಮಲ್ಲೇಶ್ವರ, ನಾಗವಾರ, ಎಲೆಕ್ಟ್ರಾನಿಕ್ಸ್‌ಸಿಟಿ, ಬನ್ನೇರುಘಟ್ಟ, ಬೆಳ್ಳಂದೂರು, ಚಿಕ್ಕಜಾಲ, ಮಡಿವಾಳ ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಮಳೆಯಿಂದ ವಸಂತಪುರ, ನವೋದಯನಗರ, ಆರ್.ಆರ್. ನಗರದ ಬಲರಾಮ್ ಲೇಔಟ್, ರೇನ್‌ಬೋ ಲೇಔಟ್, ಸಾಯಿ ಲೇಔಟ್, ನಲ್ಲೂರುಹಳ್ಳಿ, ಹೆಚ್ ಎಸ್‌ಆರ್ ಬಡಾವಣೆ ಸೇರಿ ಹಲವು ಪ್ರದೇಶಗಳಲ್ಲಿ ನೀರು ನುಗ್ಗಿದೆ.
ಜುಲೈ 1ರಿಂದ ಸೆಪ್ಟೆಂಬರ್ 3ರ ವರೆಗೆ ವಾಡಿಕೆಗಿಂತ ಎರಡು ಪಟ್ಟು ಹೆಚ್ಚು ಮಳೆ : ಜುಲೈ 1ರಿಂದ ಸೆಪ್ಟೆಂಬರ್ 3ರ ವರೆಗೆ 303 ಮಿ.ಮೀ ಮಳೆಯಾಗಬೇಕಿತ್ತು. ಆದರೆ, 643 ಮಿ.ಮೀ ಮಳೆ ಬಿದ್ದಿದೆ. ಆಗಸ್ಟ್ 30ರಂದು ನಗರದಾದ್ಯಂತ 45.2 ಮಿ.ಮೀ ಅಧಿಕ ಮಳೆ ಸುರಿದಿದೆ. ಜುಲೈ 31ರಂದು 35.6 ಮಿ.ಮೀ ಮಳೆಯಾಗಿದೆ. ಯಲಹಂಕ, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ, ಬೆಂಗಳೂರು ದಕ್ಷಿಣ, ಅನೇಕಲ್ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಯೆಲ್ಲೋ ಅಲರ್ಟ್: ನಗರದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಇನ್ನೂ 4 ದಿನ ಮುಂದುವರಿಯಲಿದೆ. ಇಂದು ಮತ್ತು ಮತ್ತು ನಾಳೆ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಮಹಾಮಳೆಗೆ ಮುಳುಗಿದ ಮಹಾನಗರಿ: ಭಾರಿ ಮಳೆಗೆ ನದಿಯಂತಾದ ಬೆಂಗಳೂರು ರಸ್ತೆಗಳು