ಬೆಂಗಳೂರು: ಇನ್ಮುಂದೆ ಪ್ರತಿದಿನ ಸರಾಸರಿ 5 ಲಕ್ಷ ಡೋಸ್ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಸಭೆಯಲ್ಲಿ ಹೊಸ ಕಾರ್ಯತಂತ್ರ ರೂಪಿಸುವ ಬಗ್ಗೆ ಚರ್ಚೆಯಾಗಿದೆ. ಆಗಸ್ಟ್ ತಿಂಗಳಲ್ಲಿ 1.10 ಕೋಟಿ ಕೇಂದ್ರದಿಂದ ಲಸಿಕೆ ಬಂದಿದೆ. ಸಿಎಂ ಜೊತೆ ನಾನು ದೆಹಲಿಗೆ ಹೋಗಿ ಬಂದಿದ್ದೆ. ಕೇಂದ್ರ ಆರೋಗ್ಯ ಸಚಿವರು ಕೊಟ್ಟ ಭರವಸೆಯಂತೆ ರಾಜ್ಯಕ್ಕೆ ಲಸಿಕೆ ಬರುತ್ತಿದೆ. ಪ್ರತಿದಿನ 5 ಲಕ್ಷ ಲಸಿಕೆ ಹಾಕಲು ಉದ್ದೇಶಿಸಲಾಗಿದೆ. ಪ್ರತಿ ಬುಧವಾರ ಲಸಿಕಾ ಉತ್ಸವ ಮಾಡುತ್ತೇವೆ. ಆ ಮೂಲಕ ವಾರದಲ್ಲಿ ಒಂದು ದಿನ 10 ಲಕ್ಷ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಹೀಗಾಗಿ ಒಂದು ತಿಂಗಳಲ್ಲಿ 1 ಕೋಟಿ ಲಸಿಕಾಕರಣ ಗುರಿ ಮುಟ್ಟುತ್ತೇವೆ ಎಂದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ 1 ಕೋಟಿ ಲಸಿಕಾಕರಣ ಆಗಿದೆ. ಇಲ್ಲಿಯವರೆಗೆ 4 ಕೋಟಿ ಲಸಿಕೆ ಹಾಕಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಕೆಯಿದೆ. ಬೀದರ್, ಯಾದಗಿರಿ, ಕಲಬುರಗಿಯಲ್ಲಿ ಜನರು ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಇಲ್ಲಿ ಲಸಿಕೆ ವಿತರಣೆ ಹೆಚ್ಚಳ ಮಾಡುತ್ತೇವೆ ಎಂದರು.
ಸ್ಲಂ, ಗಡಿ ಭಾಗಗಳಲ್ಲಿ ಹೆಚ್ಚಿನ ಲಸಿಕೆ:
ಬೆಂಗಳೂರಿನ ಕೊಳಗೇರಿಗಳಲ್ಲಿ ಲಸಿಕಾ ಮೇಳ ಮಾಡಲಿದ್ದೇವೆ. ಸ್ಲಂ ಜನರಿಗೆ ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡುತ್ತೇವೆ. ಗಡಿಭಾಗದ ಜಿಲ್ಲೆಗಳಲ್ಲಿ ಲಸಿಕೆ ಹೆಚ್ಚಳ ಮಾಡುತ್ತೇವೆ. ಕೇರಳ ಗಡಿಯ 20 ಕಿ.ಮೀ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಹಾಕಲಾಗುತ್ತಿದೆ. ಅಲ್ಲಿರುವ ಜನರಿಗೆ ಲಸಿಕೆ ಹಾಕಲು ಮೊದಲ ಆದ್ಯತೆ ನೀಡಲಾಗುತ್ತದೆ ಎಂದರು.
ಡಿಸೆಂಬರ್ 31 ರೊಳಗೆ ರಾಜ್ಯದಲ್ಲಿ ನಾಲ್ಕು ಕೋಟಿ ವಯಸ್ಕರಿಗೆ ಎರಡು ಡೋಸ್ ಲಸಿಕೆ ಹಾಕಿಸುವ ಗುರಿ ಹೊಂದಲಾಗಿದೆ. ಮಕ್ಕಳ ಲಸಿಕೆ ಬಗ್ಗೆ ಪರವಾನಗಿ ಸಿಗಬೇಕಿದೆ. ಅನುಮತಿ ಸಿಕ್ಕರೆ ಮಕ್ಕಳಿಗೂ ಲಸಿಕೆ ನೀಡಲಾಗುವುದು ಎಂದರು.
ಎರಡನೇ ಡೋಸ್ ಕೊರತೆ:
ರಾಜ್ಯದಲ್ಲಿ ಎರಡನೇ ಡೋಸ್ ಕಡಿಮೆ ಆಗಿರುವ ಬಗ್ಗೆ ಸಚಿವರೇ ಒಪ್ಪಿಕೊಂಡಿದ್ದಾರೆ. ಇಡೀ ರಾಜ್ಯದಲ್ಲಿ ಶೇ.20ರಷ್ಟು ಎರಡನೇ ಡೋಸ್ ಕೊಡಲಾಗಿದೆ. ಬೆಂಗಳೂರಿನಲ್ಲಿ ಶೇ.27 ರಷ್ಟು ಎರಡನೇ ಡೋಸ್ ನೀಡಲಾಗಿದೆ ಎಂದರು.
ಎರಡನೇ ಡೋಸ್ ಪಡೆದವರು ತಪ್ಪು ದೂರವಾಣಿ ಸಂಖ್ಯೆ ನೀಡುತ್ತಿದ್ದಾರೆ. ಮೊದಲ ಡೋಸ್ ಪಡೆಯುವಾಗ ಒಂದು ನಂಬರ್ ಕೊಡ್ತಾರೆ. 2 ನೇ ಡೋಸ್ ವೇಳೆ ಮತ್ತೊಂದು ನಂಬರ್ ನೀಡ್ತಾರೆ. ಜನರ ಈ ನಡೆ ಸಮಸ್ಯೆ ತಂದಿದೆ. ಇದರಿಂದ ಎರಡನೇ ಡೋಸ್ ಪಡೆದವರ ನಿಖರ ಅಂಕಿ ಅಂಶ ಸಿಗುತ್ತಿಲ್ಲ. ಹೀಗಾಗಿ ಎರಡನೇ ಡೋಸ್ ಪಡೆದವರು ಬೇರೆ ದೂರವಾಣಿ ಸಂಖ್ಯೆ ನೀಡಬಾರದು ಎಂದು ಮನವಿ ಮಾಡಿದರು.
ಕೋವಿಡ್ ಮೂರನೇ ಅಲೆ ಕೆಲವು ರಾಜ್ಯಗಳಲ್ಲಿ ಪ್ರಾರಂಭವಾಗಿದೆ. ರಾಜ್ಯದಲ್ಲಿ ಮೂರನೇ ಅಲೆ ಭಾದಿಸಬಾರದು ಎಂಬ ಕಾರಣಕ್ಕೆ ಆರೋಗ್ಯ ಇಲಾಖೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಅಲೆ ಎದುರಾಗದಂತೆ ನಾವು ತಡೆಯಬೇಕಿದೆ. ರಾಜ್ಯಕ್ಕೆ ಮೂರನೇ ಅಲೆ ಕಾಲಿಟ್ಟಿಲ್ಲ. ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳುತ್ತೇವೆ ಎಂದರು.
ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಧಾರ್ಮಿಕ ಸಾಮರಸ್ಯ ಇರಬೇಕು. ಯಾವುದೇ ಹಬ್ಬಗಳಿಗೆ ಸರ್ಕಾರದ ವಿರೋಧವಿಲ್ಲ. ಎಲ್ಲರ ಹಿತವನ್ನ ಸರ್ಕಾರ ಕಾಪಾಡಬೇಕು. ಆದರೆ ಈಗ ಪರಿಸ್ಥಿತಿ ಸರಿಯಿಲ್ಲ. ಈ ಸಂಬಂಧ ಮಾರ್ಗಸೂಚಿಗಳನ್ನು ಮಾಡಿದ್ದು, ಪಾಲನೆ ಮಾಡಬೇಕು ಎಂದರು.
ಶಾಲೆ ಆರಂಭದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ:
ಶಿಕ್ಷಣ ಕ್ಷೇತ್ರದಲ್ಲಿ ಗಟ್ಟಿ ನಿರ್ಧಾರ ಕೈಗೊಂಡಿದ್ದೇವೆ. 9ನೇ ತರಗತಿ ನಂತರದ ಶಿಕ್ಷಣಕ್ಕೆ ಅವಕಾಶ ಕೊಟ್ಟಿದ್ದೇವೆ. 6 ರಿಂದ 8 ರವರೆಗೆ ತರಗತಿ ಆರಂಭವಾಗಬೇಕು. ಇಂದು ಸಂಜೆ ಸಿಎಂ ನೇತೃತ್ವದ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದರು.
ಪೋಷಕರಿಂದಲೂ ಶಾಲೆ ಪ್ರಾರಂಭಕ್ಕೆ ಒತ್ತಡವಿದೆ. ಪ್ರಸ್ತುತ ಶಾಲೆ ತೆರೆದಿರುವುದರಿಂದ ಸಮಸ್ಯೆಯಾಗಿಲ್ಲ. ಹಾಗಾಗಿ 6-8 ತರಗತಿ ತೆರೆಯುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಸ್ಪಷ್ಟಪಡಿಸಿದರು.