ಬೆಂಗಳೂರು: ಕೊರೊನಾ ಸೋಂಕು ತಗಲುವ ಆತಂಕದಿಂದ ಎಲ್ಲರೂ ಸರ್ಜಿಕಲ್ ಮಾಸ್ಕ್, ಎನ್ -95 ಮಾಸ್ಕ್ ಧರಿಸುವ ಅಗತ್ಯವಿಲ್ಲ, ಹತ್ತಿ ಬಟ್ಟೆಯಿಂದ ಮಾಸ್ಕ್ ಅನ್ನು ಮನೆಯಲ್ಲೇ ಸಿದ್ದಪಡಿಸಿಕೊಂಡು ಉಪಯೋಗಿಸಿದರೂ ಸಾಕು ಎಂದು ಆರೋಗ್ಯ ಇಲಾಖೆ ಅಧಿಕೃತವಾಗಿ ಮಾಹಿತಿ ನೀಡಿದೆ.
ಹೌದು, ರಾಜ್ಯದ ಜನರಲ್ಲಿ ಮಾಸ್ಕ್ ಗಳನ್ನು ಧರಿಸಬೇಕಾ ಬೇಡವಾ ಎನ್ನುವ ಗೊಂದಲ ಇನ್ನೂ ಮುಂದುವರೆದಿದೆ, ಸ್ವತಃ ಮುಖ್ಯಮಂತ್ರಿಗಳೇ ಮಾಸ್ಕ್ ಎಲ್ಲರೂ ಧರಿಸುವ ಅಗತ್ಯವಿಲ್ಲ ಎಂದರೂ ಪೊಲೀಸ್ ಇಲಾಖೆ ಮಾತ್ರ ಮಾಸ್ಕ್ ಕಡ್ಡಾಯ ಎನ್ನುತ್ತಿದೆ ಜೊತೆಗೆ ಅಂಗಡಿ ಮುಂಗಟ್ಟುಗಳಲ್ಲಿಯೂ ಮಾಸ್ಕ್ ಹಾಕಿಕೊಂಡು ಬರುವಂತೆ ಒತ್ತಡ ಹೇರಲಾಗುತ್ತಿದೆ ಹಾಗಾಗಿ ಈ ಗೊಂದಲಕ್ಕೆ ಆರೋಗ್ಯ ಇಲಾಖೆ ತೆರೆ ಎಳೆದಿದ್ದು ಅಂಗಡಿಗೆ ಹೋಗಿಯೇ ಮಾಸ್ಕ್ ಖರೀದಿಸುವ ಅಗತ್ಯವಿಲ್ಲ, ಸೋಂಕಿತರ ಸಮೀಪಲ್ಲಿ ಇರಿವವರು ಮಾತ್ರ ಎನ್-95 ಮಾಸ್ಕ್ ಧರಿಸಬೇಕು ಇನ್ನುಳಿದಂತೆ ಜನರು ಹೊರಗಡೆ ಓಡಾಡುವವರು ಕರವಸ್ತ್ರ ಇಲ್ಲವೇ ಹತ್ತಿಬಟ್ಟೆಯನ್ನು ಮಾಸ್ಕ್ ರೀತಿ ಸಿದ್ದೊಡಿಸಿಕೊಂಡು ಬಳಸಿದರೆ ಸಾಕು ಎಂದು ಸ್ಪಷ್ಟಪಡಿಸಿದೆ.
ಈ ಸಂಬಂಧ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಕುರಿತು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಸಿದ್ಧಪಡಿಸಬಹುದಾದ ಮುಖಗವಸುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಲಾಗುತ್ತಿದೆ. ಮನೆಯಲ್ಲಿಯೇ ಮಾಡಿ ಧರಿಸಬಹುದಾದ ಮುಖಗವಸುಗಳ ಬಗ್ಗೆ ಕೈಪಿಡಿಯನ್ನು ಆರೋಗ್ಯ ಇಲಾಖೆ ನೀಡಿದ್ದು, ಜನರು ಅನಗತ್ಯವಾಗಿ ಮಾಸ್ಕ್ ಗಳಿಗೆ ಮುಗಿಬೀಳದೇ ಮನೆಯಲ್ಲೇ ಮಾಸ್ಕ್ ಸಿದ್ದಪಡಿಸಿಕೊಳ್ಳುವಂತೆ ಸಲಹೆ ನೀಡಿದೆ.
1. ವಿವರಣೆ : ವೈದ್ಯಕೀಯ ಅಥವಾ ಮತ್ಯಾವುದೇ ಕಾರಣಗಳಿಗಾಗಿ ಉಸಿರಾಡುವಾಗ ಮತ್ತು ಮಾತನಾಡುವಾಗ ಬಾಯಿ ಮತ್ತು ಮೂಗನ್ನು ತೆಳು ಪದರದ (03 ಪದರ) ಬಟ್ಟೆಯಿಂದ ಮುಚ್ಚಿಕೊಳ್ಳುವುದನ್ನು ಮುಖಗವಸು ಎಂದು ಸ್ಥೂಲವಾಗಿ ವಿವರಿಸಬಹುದು ಇವುಗಳನ್ನು ವೈದ್ಯಕೀಯ ಕಾರಣಗಳಿಗಾಗಿ ವೈಜ್ಞಾನಿಕವಾಗಿ ಸಿದ್ದಪಡಿಸಲಾಗುವುದರಿಂದ ಅಂತಹ ಮುಖಗವಸುಗಳನ್ನು ಇಲ್ಲಿ ಪ್ರಸ್ತಾಪಿಸಿರುವುದಿಲ್ಲ.
2. ಉಪಯುಕ್ತತೆ : ಸಾಮಾನ್ಯವಾಗಿ ಮುಖಗವಸನ್ನು ಬಳಸುವುದರಿಂದ ಹೊಗೆ, ಧೂಳು, ಬ್ಯಾಕ್ಟಿರಿಯಾ ಮತ್ತು ವೈರಾಣುಗಳಿಂದ ವ್ಯಕ್ತಿಯು ತನ್ನನ್ನು ತಾನು ರಕ್ಷಿಸಿಕೊಳ್ಳಬಹುದು. ಆದರೆ ಬ್ಯಾಕ್ಟಿರಿಯಾ ಮತ್ತು ವೈರಾಣುಗಳಿಂದ ರಕ್ಷಣೆ ಪಡೆಯಬೇಕಾದರೆ ವೈದ್ಯಕೀಯ ದೃಢೀಕೃತ ಮುಖಗವಸುಗಳನ್ನು ಮಾತ್ರ ಬಳಸಬೇಕಾಗುತ್ತದೆ. ಇಲ್ಲಿ ಪ್ರಸ್ತಾಪಿಸಲಾಗುತ್ತಿರುವುದು, ವೈದ್ಯಕೀಯ ಕಾರಣಗಳನ್ನು ಹೊರತುಪಡಿಸಿ ಸ್ವಯಂ ಪ್ರೇರಿತರಾಗಿ ಧರಿಸಬಹುದಾದ ಮುಖಗವಸುಗಳ ಕುರಿತಂತೆ ಆಗಿರುತ್ತದೆ. ಈಗಾಗಲೇ ಸಿದ್ದ ಉಡುಉಡುಪುಗಳ ಕಾರ್ಖಾನೆಗಳಲ್ಲಿ ಕೆಲಸಗಾರರಿಗೆ ಧೂಳಿನಿಂದ ರಕ್ಷಣೆ ಪಡೆಯಲು ಮುಖಗವಸುಗಳನ್ನು ನೀಡುತ್ತಿದ್ದಾರೆ. ಅದೇ ರೀತಿ ಧೂಳಿನಿಂದ ಮತ್ತು ವಾಹನಗಳ ಹೊಗೆಯಿಂದಾಗಿ ಹೆಚ್ಚಿನ ವಾಯುಮಾಲಿನ್ಯವಿರುವಂತಹ ನಗರಗಳಲ್ಲಿ, ಮುಖಗವಸು ಬಳಸುವುದರಿಂದ ಸ್ವಲ್ಪಮಟ್ಟಿಗಾದರೂ ಉಸಿರಾಟಕ್ಕೆ ಅನುಕೂಲವಾಗಿ ಶ್ವಾಸಕೋಶದ ಆರೋಗ್ಯ ಸುಧಾರಿಸಬಹುದೆಂಬ ಅಭಿಪ್ರಾಯವಿರುತ್ತದೆ.
3. ತಯಾರಿಕೆ: ಮನೆಯಲ್ಲಿ ಬಳಸದಿರುವ ಹಾಗೂ ಹರಿದಿಲ್ಲದಿರುವ ದುಪ್ಪಟ್ಟ, ಬನಿಯನ್, ಟೀ-ಶರ್ಟ್, ಕರವಸ್ತ್ರ, ಮುಂತಾದ ಶುದ್ದ ಹತ್ತಿ ಬಟ್ಟೆಗಳು ಮಾತ್ರ ಮುಖಗವಸು ತಯಾರಿಕೆಗೆ ಸೂಕ್ತವಾಗಿರುತ್ತವೆ. ಯಾವುದೇ ಸಿಂಥೆಟಿಕ್ ಅಥವಾ ಅರೆ ಸಿಂಥೆಟಿಕ್ ಬಟ್ಟೆಗಳನ್ನು ಉಪಯೋಗಿಸುವುದು ಯೋಗ್ಯವಾಗಿರುವುದಿಲ್ಲ.
4. ಅಳತೆ: ದೊಡ್ಡವರಿಗೆ: 9"X7" ಮಕ್ಕಳು : 7'x5"
5. ಸಿದ್ದಪಡಿಸುವಿಕೆ: ಮನೆಯಲ್ಲೇ ಇರುವ ಹೊಲಿಗೆಯಂತ್ರದಿಂದ ಹೊಲಿದು ಸಿದ್ಧಪಡಿಸಬಹುದು ಅಥವಾ ಕೈ ಹೊಲಿಗೆಯಿಂದಲೂ ಸಿದ್ದಪಡಿಸಬಹುದು. ಸಿದ್ಧಪಡಿಸುವಾಗ ವಸ್ತ್ರದಲ್ಲಿ ಎರಡು ಮಡಿಕೆ, ಮೂರು ನೆರಿಗೆಗಳು ಇರುವಂತೆ ಹೊಲಿಯಬೇಕು. ನಾಲ್ಕು ಮೂಲೆಗಳಿಗೂ ಕಟ್ಟಲು ಅನುಕೂಲವಾಗುವಂತೆ ದಾರಗಳನ್ನು ಇಡಬೇಕು,
6. ಬಳಸುವ ಸಂದರ್ಭ: ಅಪರಿಚಿತರೊಡನೆ ಸಂಪರ್ಕಿಸುವಾಗ, ವ್ಯಾಪರ ಮಳಿಗೆಗಳಿಗೆ ಭೇಟಿ ನೀಡುವಾಗ, ಕಛೇರಿ ಅಥವಾ ಕಾರ್ಯನಿರತ ಸ್ಥಳಗಳಲ್ಲಿ ಅಥವಾ ಕೋವಿಡ್-19ರ ಪ್ರಾಥಮಿಕ ಯಾ ದ್ವಿತೀಯ ಸಂಪರ್ಕಿತರೊಂದಿಗೆ, ಅನಿರೀಕ್ಷಿತವಾಗಿ ಯಾ ಅಪೇಕ್ಷಿತವಾಗಿ ಸಂಪರ್ಕಕ್ಕೊಳಪಟ್ಟಾಗ.
7. ಅನುಕೂಲ: ಮನೆಯಲ್ಲಿಯೇ ಮುಖಗವಸುಗಳನ್ನು ಸಿದ್ಧಪಡಿಸುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಒತ್ತಡವನ್ನು ಕಡಿಮೆಮಾಡಬಹುದು. ನಿಯಮಿತವಾಗಿ ಬಳಸುವುದರಿಂದ ಈಗಾಗಲೇ ತಿಳಿಸಿದ ಹಾಗೆ ಧರಿಸಿದವರಿಗೂ ಹಾಗೂ ಸಂಪರ್ಕಿತರಿಗೂ ಆರೋಗ್ಯದಲ್ಲಿ ಸುಧಾರಣೆಯಾಗಬಹುದು. ಮುಖಗವಸುಗಳನ್ನು ಪ್ರತಿನಿತ್ಯ ಬಳಸಿದ ನಂತರ ಬಿಸಿ ನೀರಿನಲ್ಲಿ ತೊಳೆದು ಇಸೀ ಮಾಡಿದ ನಂತರ ಮರುಬಳಕೆ ಮಾಡಬಹುದು.ಆದ್ದರಿಂದ 2 ಮುಖಗವಸುಗಳನ್ನು ತಯಾರಿಸಿಟ್ಟುಕೊಳ್ಳುವುದು ಅಪೇಕ್ಷಣೀಯ.
8. ಜಾಗೃತೆ: ಒಬ್ಬ ವ್ಯಕ್ತಿ ಬಳಸಿದ ಮುಖಗವಸನ್ನು ಮತ್ತೊಬ್ಬರು ಬಳಸಬಾರದು. ತಪ್ಪಾಗಿ ಬಳಸಿದಾಗ ದೇಹಕ್ಕೆ ಅಗತ್ಯವಿರುವ ಶುದ್ದಗಾಳಿ ಮತ್ತು ಆಮ್ಲಜನಕದ ಕೊರತೆಯುಂಟಾಗಿ ಕೆಲವರಿಗೆ ತಲೆನೋವು ಮುಂತಾದ ಅಡ್ಡಪರಿಣಾಮಗಳಾಗಬಹುದು. ಮುಖಗವಸನ್ನು ತೊಳೆಯದ ಕೈನಿಂದ ಯಾವುದೇ ಕಾರಣಕ್ಕೂ ಮುಟ್ಟಬಾರದು. ಬಳಸುತ್ತಿರುವ ಮುಖಗವಸಿನ ಒಳಪದರ ಹಾಗೂ ಮೇಲ್ಪದರಗಳನ್ನು ಅದಲು ಬದಲು ಮಾಡಿ ಧರಿಸುವಂತಿಲ್ಲ. ಈ ಬಗ್ಗೆ ಜಾಗರೂಕರಾಗಿರತಕ್ಕದ್ದು.
9. ಗ್ರಂಥಮೂಲ: ವಿವರವಾದ ಆಂಗ್ಲಭಾಷೆಯ ಮಾರ್ಗಸೂಚಿಗಳಿಗೆ ಸಾರ್ವಜನಿಕರು ದಯಮಾಡಿ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂತರ್ಜಾಲವನ್ನಾಗಲೀ ಅಥವಾ ಸದರಿ ಮಾರ್ಗಸೂಚಿಯ ಯಥಾವತ್ತು ಕನ್ನಡ ತರ್ಜುಮೆಯ ಪಠ್ಯಕ್ಕಾಗಿ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂತರ್‌ಜಾಲಕ್ಕೆ ಭೇಟಿ ನೀಡಬಹುದಾಗಿದೆ.