ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸ್ಪರ್ಧೆ ಮಾಡಬೇಕೆಂದು ಪಕ್ಷದ ಎಲ್ಲಾ ಶಾಸಕರು ಒತ್ತಾಯ ಮಾಡಿರುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ರಾಜಸಭೆಗೆ ನಿಲ್ಲುವ ಬಗ್ಗೆ ಇದುವರೆಗೂ ಒಪ್ಪಿಗೆ ಕೊಟ್ಟಿಲ್ಲವಾದರೂ ಶಾಸಕರ ಒತ್ತಾಯವಿದೆ ಎಂದರು. ಗೌಡರ ದುಡಿಮೆ ಹಾಗೂ ದೇಶದ ಪರಿಸ್ಥಿತಿ ಹಿನ್ನೆಲೆ ರಾಜ್ಯಸಭೆಗೆ ಅವರ ಅವಶ್ಯಕತೆಯಿದೆ. ದೇವೇಗೌಡರು ಅನುಭವಿ ರಾಜಕಾರಣಿ. ಅವರು ದೆಹಲಿಗೆ ಹೋಗಬೇಕೆಂಬುದು ಶಾಸಕರ ಒತ್ತಡವಿದೆ ಎಂದರು.
ಕಾಂಗ್ರೆಸ್ನಿಂದ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬಹುದು. ಬಿಜೆಪಿಯಿಂದ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬಹುದು. ಮೂರನೇ ಅಭ್ಯರ್ಥಿಯನ್ನು ಹಾಕುವುದಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಶಾಸಕರ ಸಂಖ್ಯೆಯ ಕೊರತೆ ಇದೆ. ಎರಡೂ ಪಕ್ಷಗಳನ್ನು ನೋಡಿದಾಗ ನಮ್ಮಲ್ಲಿ ಶಾಸಕರ ಸಂಖ್ಯಾ ಬಲ ಜಾಸ್ತಿ ಇದೆ. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲೂ ಅಭ್ಯರ್ಥಿಗಳನ್ನು ಹಾಕಿದಾಗ ನಾವು ಯೋಚನೆ ಮಾಡುತ್ತೇವೆ ಎಂದರು.
ಬಿಜೆಪಿ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಈ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳಲಿ. ನಾನು ಮುಖ್ಯಮಂತ್ರಿ ಸ್ಥಾನವನ್ನು ಅತ್ಯಂತ ಸಂತೋಷದಿಂದ ಬಿಟ್ಟು ಬಂದಿದ್ದೇನೆ. ನಾನು ಬಿಜೆಪಿ ಸರ್ಕಾರ ತೆಗೆಯಬೇಕೆಂದು ಯಾವ ಆಸಕ್ತಿ ಇಟ್ಟುಕೊಂಡಿಲ್ಲ. ಸರ್ಕಾರ ತನ್ನ ಲೋಪವನ್ನು ಬದಲಾಯಿಸಿಕೊಳ್ಳಲಿ ಅಂತ ಸಲಹೆ ನೀಡಿದ್ದೆ. ಆ ಸರ್ಕಾರದ ಬಗ್ಗೆ ನಾನೇಕೆ ಯೋಚನೆ ಮಾಡಲಿ ಎಂದು ಹೇಳಿದರು.
ಮಂತ್ರಿಯಾಗಬೇಕು ಎಂದು ನಮ್ಮ ಸರ್ಕಾರ ತೆಗೆದರು. ಈಗ ಎಲ್ಲವನ್ನು ನಾನು ನೋಡುತ್ತಿದ್ದೇನೆ. ಅವರೇ ಬಿಜೆಪಿ ಸರ್ಕಾರವನ್ನು ತೆಗೆಯಲು ಹೊರಟಿರುವ ಬಗ್ಗೆ ನೀವೇ ಹೇಳುತ್ತಿದಿರಾ. ಸಮಾಜಘಾತುಕ ಶಕ್ತಿಗಳನ್ನು ಹತ್ತಿರ ಇಟ್ಟುಕೊಂಡರೆ ಅಪಾಯ ಹೆಚ್ಚು ಎಂದರು.
ಆನ್ಲೈನ್ ಪಾಠಕ್ಕೆ ವಿರೋಧ!
ಬೆಂಗಳೂರು ನಗರದಲ್ಲಿ ಇಂಟರ್ನೆಟ್ ಸಿಗುತ್ತಿಲ್ಲ. ಇನ್ನು ಹಳ್ಳಿಗಳಲ್ಲಿ ಮಕ್ಕಳು ಆನ್ಲೈನ್ನಲ್ಲಿ ಓದಿ ಅಂದರೆ ಹೇಗೆ? ಸರ್ಕಾರ ಜನರ ಅಭಿಪ್ರಾಯಕ್ಕೆ ಮಣಿಯಬೇಕು. ವಿದ್ಯಾರ್ಥಿಗಳನ್ನು ಬೀದಿಗೆ ತಂದು ನಿಲ್ಲಿಸಬೇಡಿ ಎಂದು ಈಗಾಗಲೇ ಸಲಹೆ ಕೊಟ್ಟಿದ್ದೇನೆ ಎಂದು ಹೇಳಿದರು.
ಮನವಿ ಮಾಡಿದ ಜೆಡಿಎಸ್ ನಾಯಕರು!
ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಜೆಡಿಎಸ್ ನಾಯಕರು ಪದ್ಮನಾಭನಗರದಲ್ಲಿರುವ ಗೌಡರ ನಿವಾಸಕ್ಕೆ ತೆರಳಿ, ದೇವೇಗೌಡರ ಮನವೊಲಿಸಲು ಯತ್ನಿಸಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ ಸೇರಿದಂತೆ ಹಲವು ನಾಯಕರು ಗೌಡರ ನಿವಾಸಕ್ಕೆ ತೆರಳಿದ್ದು, ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ. ಪಕ್ಷದ ಮುಖಂಡರ ಜೊತೆ ಸಮಾಲೋಚನೆ ನಡೆಸಿದ ದೇವೇಗೌಡರು, ಸ್ಪರ್ಧೆಗೆ ಒಲವು ತೋರಿದ್ದಾರೆ ಎಂದು ಹೇಳಲಾಗುತ್ತಿದೆ.