ಬೆಂಗಳೂರು: ಗೋವಾದಲ್ಲಿ ಪೊಲೀಸರ ದೌರ್ಜನ್ಯಕ್ಕೆ ಮುದ್ದೇಬಿಹಾಳ ಮೂಲದ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಗೋವಾದಲ್ಲಿ ಕನ್ನಡಿಗರ ಬದುಕು ಸಂಕಷ್ಟದಲ್ಲಿರುವುದಕ್ಕೆ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಕರಣವೊಂದರಲ್ಲಿ ಕನ್ನಡಿಗ ಕುಟುಂಬಕ್ಕೆ ಗೋವಾದ ಪೊಲೀಸರು ಕಿರುಕುಳ ನೀಡಿದ್ದರು ಎಂಬುದು ಅವರ ಡೆತ್‌ನೋಟ್‌ನಲ್ಲೇ ಇದೆ ಎನ್ನಲಾಗಿದೆ. ಕಳ್ಳತನದಂಥ ಬಂಡ ಬಾಳು ಬದುಕಿದ್ದಿದ್ದರೆ ಆ ಕುಟುಂಬ ಆತ್ಮಹತ್ಯೆಯಂಥ ನಿರ್ಧಾರಕ್ಕೆ ಬರುತ್ತಿರಲಿಲ್ಲ. ಕನ್ನಡಿಗರೆಂಬ ಕಾರಣಕ್ಕೆ ಈ ಕುಟುಂಬದ ಮೇಲೆ ದೌರ್ಜನ್ಯ ನಡೆದಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದಿದ್ದಾರೆ.
ಮೂವರ ಆತ್ಮಹತ್ಯೆ ನಂತರ ಪೊಲೀಸರೂ ಅನುಮಾನಾಸ್ಪದವಾಗಿ ವರ್ತಿಸಿದ್ದಾರೆ. ತರಾತುರಿಯಲ್ಲಿ ಪಂಚನಾಮೆ ನಡೆಸಿದ್ದಾರೆ ಎಂಬ ಆರೋಪ ಸ್ಥಳೀಯ ಕನ್ನಡ ಸಂಘಟನೆಗಳಿಂದ ವ್ಯಕ್ತವಾಗಿದೆ. ಈ ಬಗ್ಗೆ ಗೋವಾ ಮುಖ್ಯಮಂತ್ರಿ ಕೂಡಲೇ ಗಮನ ಹರಿಸಬೇಕು. ಪೊಲೀಸ್ ಕಿರುಕುಳದ ನಿಟ್ಟಿನಲ್ಲಿ ತನಿಖೆ ನಡೆಯಬೇಕು. ಈ ಮೂಲಕ ಕನ್ನಡಿಗರ ಸುರಕ್ಷತೆಯನ್ನು ಖಾತ್ರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಸಿಲಿಕಾನ್ ಸಿಟಿ ಜನರನ್ನು ಬೆಚ್ಚಿ ಬೀಳಿಸಿದ ಭಯಂಕರ ಶಬ್ದ: ಇದು ಭೂಕಂಪನವೇ? ಇಲ್ಲಿದೆ ಉತ್ತರ..