ಬೆಂಗಳೂರು: ಮೈಸೂರಿನ ವಿಜಯನಗರದಲ್ಲಿ ಡಿನೋಟಿಫಿಕೇಶನ್ ಕುರಿತು ತಮ್ಮ ವಿರುದ್ಧದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದು ಪಡಿಸಬೇಕೆಂದು ಕೋರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಡಿನೋಟಿಫಿಕೇಶನ್ ಬಗ್ಗೆ ಸಲ್ಲಿಸಿದ್ದ ಬಿ ರಿಪೋರ್ಟ್ ರದ್ದುಪಡಿಸಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿರುವುದನ್ನು ಸಿದ್ದರಾಮಯ್ಯ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ.
ಪ್ರಕರಣದ ವಿವರ:
1988ರಲ್ಲಿ ಮೈಸೂರಿನ ವಿಜಯನಗರ 2ನೇ ಹಂತದ ಬಡಾವಣೆ ನಿರ್ಮಾಣಕ್ಕೆ ಹಿನಾಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ 535 ಎಕರೆ ಪ್ರದೇಶವನ್ನು ಮೈಸೂರು ನಗರಾಭಿವೃದ್ಧಿ ಮಂಡಳಿ ವಶಪಡಿಸಿಕೊಂಡಿತ್ತು. 10 ವರ್ಷಗಳ ಬಳಿಕ ಬಡಾವಣೆ ರಚಿಸಿ ನಿವೇಶನ ಹಂಚಿಕೆಯಾದ ನಂತರ ಸಿದ್ದರಾಮಯ್ಯ ಆಪ್ತ ಪಾಪಣ್ಣ ಅವರು ತಮ್ಮ ಸಂಬಂಧಿಕರಿಗೆ ಸೇರಿದ 30 ಗುಂಟೆ ಜಮೀನನ್ನು ಕೈ ಬಿಡುವಂತೆ ಮುಡಾಗೆ ಅರ್ಜಿ ಸಲ್ಲಿಸಿದ್ದರು.
ನಂತರ ಮುಡಾ ಜಾಗವನ್ನು ಡಿನೋಟಿಫೈ ಮಾಡಿತ್ತು. ಡಿನೋಟಿಫೈ ಮಾಡಿದ್ದಾರೆನ್ನಲಾದ ಜಮೀನಿನಲ್ಲಿ ಪಾಪಣ್ಣ ಚಿಕ್ಕಮ್ಮ ಸಾಕಮ್ಮ ಎಂಬುವವರಿಗೆ ಸೇರಿದ್ದ 10 ಗುಂಟೆ ನಿವೇಶನವನ್ನು ಸಿದ್ದರಾಮಯ್ಯ ಖರೀದಿಸಿದ್ದಲ್ಲದೇ ಪಕ್ಕದ ಜಮೀನನ್ನು ಅತಿಕ್ರಮಿಸಿ ಮನೆ ಕಟ್ಟಿ ಬೇರೆಯವರಿಗೆ ಮಾರಾಟ ಮಾಡಿದ್ದರು. ಡಿನೋಟಿಫೈ ಮಾಡಿದ ಜಾಗವನ್ನು ಸಿದ್ದರಾಮಯ್ಯ ಮಾರಾಟ ಮಾಡಿದ್ದಾರೆಂದು ಗಂಗರಾಜು ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದ ಬಗ್ಗೆ ಕಳೆದ ವರ್ಷ 2018ರಲ್ಲಿ ನವೆಂಬರ್ 3ರಂದು ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದರು. ಹೀಗಾಗಿ ಇದನ್ನು ಪ್ರಶ್ನಿಸಿ ಗಂಗರಾಜು ಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ಕಳೆದ ತಿಂಗಳು(ಸೆ. 23) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ್ ಪೀಠದಲ್ಲಿ ನಡೆದಿದ್ದು, ಖುದ್ದು ಹಾಜರಾಗುವಂತೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಸಮನ್ಸ್ ಜಾರಿಗೊಳಿಸಿತ್ತು.