ಬೆಂಗಳೂರು: ಫೇಸ್‌ಬುಕ್‌ನಲ್ಲಿ ಸೌದಿ ಅರೇಬಿಯಾ ರಾಜ ಮತ್ತು ಇಸ್ಲಾಂ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ಪ್ರಕಟಿಸಿದ್ದಾರೆ ಎಂಬ ಆರೋಪದಲ್ಲಿ ದೇಶದ್ರೋಹ ಶಿಕ್ಷೆಗೆ ಗುರಿಯಾಗಿರುವ ಮಂಗಳೂರಿನ ಶೈಲೇಶ್ ಕುಮಾರ್ ಎಂಬವರು ಮೇಲ್ಮನವಿ ವಿಚಾರಣೆಯ ವೇಳೆ ತನ್ನ ಇಚ್ಛೆಯ ವಕೀಲರನ್ನು ನೇಮಿಸಿಕೊಳ್ಳಬಹುದೇ? ಹೌದಾದರೆ, ಭಾರತ ಸರ್ಕಾರವು ಅವರಿಗೆ ವಕೀಲರ ನೆರವು ಒದಗಿಸಲಿದೆಯೇ? ಎಂಬುದರ ಕುರಿತು ವಿವರಣೆ ನೀಡುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
ಸೌದಿಯಲ್ಲಿ ಬಂಧಿತನಾಗಿರುವ ಶೈಲೇಶ್ ಕುಮಾರ್ ಪತ್ನಿ ಕವಿತಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನೇತೃತ್ವದ ಏಕಸದಸ್ಯ ಪೀಠ ಈ ಮಾಹಿತಿ ತಿಳಿಸಲು ಸೂಚನೆ ನೀಡಿ ವಿಚಾರಣೆ ಮುಂದೂಡಿತು. ವಿಚಾರಣೆಯಲ್ಲಿ ಕೇಂದ್ರ ಸರ್ಕಾರದ ಪರ ವಕೀಲರು ಜುಲೈ 1ರಂದು ತನಿಖಾಧಿಕಾರಿಯು ರಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಕಳುಹಿಸಿರುವ ಪತ್ರವಾಗಿದ್ದು, ಭಾರತೀಯ ರಾಯಭಾರ ಕಚೇರಿಯು ಜುಲೈ 6ರಂದು ಸೌದಿ ಅರೇಬಿಯಾದ ವಿದೇಶಾಂಗ ಇಲಾಖೆಗೆ ಬರೆದಿರುವ ಪತ್ರಗಳೂ ಇದರಲ್ಲಿ ಸೇರಿವೆ.
ಎಲ್ಲ ನಿರ್ಬಂಧಗಳ ನಡುವೆ ಅತ್ಯಂತ ಗಂಭೀರವಾಗಿ ರಾಜತಾಂತ್ರಿಕ ಮಟ್ಟದಲ್ಲಿ ಪ್ರಕರಣವನ್ನು ಪರಿಗಣಿಸಲಾಗಿದೆ ಎಂದು ಅವರು ವಿವರಿಸಿದರು. ಇದನ್ನು ಆಲಿಸಿದ ನ್ಯಾಯಪೀಠ, ಮೂರು ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರದ ವಕೀಲರಿಗೆ ತಿಳಿಸಿತು.
1. ಶಿಕ್ಷೆಗೆ ಒಳಗಾಗಿರುವ ವ್ಯಕ್ತಿಯು ಮೇಲ್ಮನವಿಯ ವಿಚಾರಣೆಯ ವೇಳೆ ತನ್ನ ಇಚ್ಛೆಯ ವಕೀಲರನ್ನು ನೇಮಿಸಿಕೊಳ್ಳಬಹುದೇ? ಹೌದಾದರೆ, ಭಾರತ ಸರ್ಕಾರವು ಅವರಿಗೆ ವಕೀಲರ ನೆರವು ಒದಗಿಸಲಿದೆಯೇ?
2. ಸೌದಿ ಅರೇಬಿಯಾದ ಸ್ಥಳೀಯ ಕಾನೂನಿನ ಅಡಿ ಶಿಕ್ಷೆ ಕಾಯಂಗೊಳಿಸುವ ಪ್ರಕ್ರಿಯೆಯ ವ್ಯಾಪ್ತಿ ಏನು? ತನಿಖೆಯಲ್ಲಿ ಕಂಡುಬರುವ ಮಾಹಿತಿಯನ್ನು ಅಲ್ಲಿನ ನ್ಯಾಯಾಲಯದ ಮುಂದೆ ಇಡಬಹುದೇ?
3. ಭಾರತದಲ್ಲಿ ಪೊಲೀಸ್ ವಿಚಾರಣೆ ನಡೆಯುತ್ತಿದ್ದು, ಅದು ಪೂರ್ಣಗೊಳ್ಳುವವರೆಗೆ ವಿಚಾರಣೆಯನ್ನು ಮುಂದೂಡುವಂತೆ ಭಾರತೀಯ ರಾಯಭಾರ ಕಚೇರಿಯನ್ನು ಕೋರಬಹುದೇ? ಎಂಬುದರ ಕುರಿತು ಮಾಹಿತಿ ನೀಡಲು ಕೋರಿ ವಿಚಾರಣೆ ಮುಂದೂಡಿದೆ. ಈ ವೇಳೆ, ರಾಜ್ಯ ಸರ್ಕಾರದ ಪರ ವಕೀಲರು ಮೆಮೊ ಸಲ್ಲಿಸಿದ್ದು, ಇದರ ಜೊತೆಗೆ 12 ದಾಖಲೆಗಳನ್ನು ಸಲ್ಲಿಸಿದ್ದಾರೆ. ಸರಿಯಾದ ರೀತಿಯಲ್ಲಿ ಕೆಲವು ಬೆಳವಣಿಗೆಗಳು ಆಗುತ್ತಿವೆ. ಆದರೆ, ಅದರ ತೀವ್ರತೆ ಸಮಾಧಾನಕರವಾಗಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದ್ದು, ಕೇಂದ್ರ ಸರ್ಕಾರದ ಪಾತ್ರದ ಬಗ್ಗೆ ತನಿಖಾಧಿಕಾರಿ ಸಲ್ಲಿಸಿರುವ ದಾಖಲೆಗಳನ್ನು ಕೇಂದ್ರದ ಸಂಬಂಧಿತ ಅಧಿಕಾರಿ ಪರಿಶೀಲಿಸಬೇಕು ಎಂದು ಪೀಠ ಸೂಚನೆ ನೀಡಿದೆ.
ವಿಚಾರಣೆ ಮುಂದುವರೆಸಿ, ಯಾವ ಯಾವ ಮಾಹಿತಿಯನ್ನು ಸೌದಿ ಅರೇಬಿಯಾದಿಂದ ಕೋರಲಾಗಿದೆ ಎಂದು ಪ್ರಶ್ನಿಸಿತು. ಶಿಕ್ಷೆ ಕಾಯಂ ಆದೇಶದ ಕುರಿತಾದ ಮೇಲ್ಮನವಿಯ ವಿಚಾರಣೆ ಪೂರ್ಣಗೊಂಡಿದೆಯೇ? ಅಥವಾ ಬಾಕಿ ಇದೆಯೇ? ಎಂದು ಪ್ರಶ್ನಿಸಿತು. ಇದಕ್ಕೆ ಮಧುಕರ್ ಅವರು ಮೇಲ್ಮನವಿಯ ವಿಚಾರಣೆ ಬಾಕಿ ಇದೆ ಎಂದರು. ಆಗ ನ್ಯಾಯಮೂರ್ತಿಗಳು, ಪ್ರಕರಣವನ್ನು ಬಾಕಿ ಉಳಿಸುವಂತೆ ಕೋರಲಾಗಿದೆಯೇ? ಎಂದದ್ದಕ್ಕೆ ಆ ಕೋರಿಕೆಯನ್ನು ನಾವು ಮಾಡಬೇಕಿದೆ ಎಂದುತ್ತರಿಸಿದರು. ಆಗ ಮತ್ತಮ್ಮೆ ಪೀಠವು, ಯಾವಾಗ ಮಾಡುತ್ತೀರಿ? ಎಂದಿತು. ಇದಕ್ಕೆ ಮಧುಕರ್ ಅವರು ಈ ನ್ಯಾಯಪೀಠ, ಆದೇಶ ಮಾಡಿರುವುದನ್ನೂ ಸಂಬಂಧಿತರ ಗಮನಕ್ಕೆ ತರಲಾಗಿದೆ.
ರಿಯಾದಿಂದ ತನಿಖಾಧಿಕಾರಿಯು ತನಿಖೆಯ ಪ್ರಗತಿ ಉಲ್ಲೇಖಿಸಿ ಪತ್ರ ಬರೆದಿದ್ದು, ಎರಡು ಐಪಿ ಅಡ್ರೆಸ್ಗಳಿಗೆ ಸಂಬಂಧಿಸಿದಂತೆ ಮಾಹಿತಿ ಕೋರಿದ್ದಾರೆ. ಈ ಮಾಹಿತಿಯನ್ನು ನಾವು ರವಾನಿಸಿದ್ದೇವೆ (ಟ್ರಾನ್ಸ್ಮಿಟೆಡ್). ಮೇಲ್ಮನವಿಯ ಆದೇಶ ಖಚಿತವಾದರೆ ಅದೇ ಅಂತಿಮವಾಗುತ್ತದೆ. ಹೀಗಾಗಿ, ಅದನ್ನು ಬಾಕಿ ಉಳಿಸುವುದಕ್ಕೆ ಕೋರುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂಬುದಾಗಿ ವಿವರಣೆ ನೀಡಿದರು. ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.
ಇದನ್ನೂ ಓದಿ: ಮತ ಹಾಕಿದ್ದು ತಿಳಿಯುವುದು ಹೇಗೆ?: ಸ್ಪಷ್ಟನೆ ನೀಡಲು ಚುನಾವಣಾ ಆಯೋಗಕ್ಕೆ ಸುಪ್ರೀಕೋರ್ಟ್ ತಾಕೀತು