ಬೆಂಗಳೂರು: ಆನೇಕಲ್ನ ಗುಡ್ಡನಹಳ್ಳಿಯ ಜನವಸತಿ ಪ್ರದೇಶದಲ್ಲಿ ಅಸಮರ್ಪಕ ತ್ಯಾಜ್ಯ ವಿಲೇವಾರಿ ಮಾಡಿ ಪರಿಸರವನ್ನು ಕಲುಷಿತಗೊಳಿಸಿರುವ ಪುರಸಭೆಯ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ವರದಿ ನೀಡುವಂತೆ ಹೈಕೋರ್ಟ್ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶಿಸಿದೆ.
ಸ್ಥಳೀಯರ ವಿರೋಧದ ನಡುವೆ ಗುಡ್ಡನಹಳ್ಳಿ ಜನವಸತಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದನ್ನು ಪ್ರಶ್ನಿಸಿ ಸ್ಥಳೀಯ ನಿವಾಸಿ ಆರ್.ನಾಗರಾಜ್ ಸೇರಿದಂತೆ ಎಂಟು ಮಂದಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲ ವೆಂಕಟೇಶ್ ಪಿ. ಕುಲಕರ್ಣಿ ವಾದಿಸಿ, ಗುಡ್ಡನಹಳ್ಳಿಯ ಸರ್ವೆ ನಂಬರ್ 170ರ 2.38 ಗುಂಟೆ ಪ್ರದೇಶದಲ್ಲಿ ಪುರಸಭೆ 2012ರಿಂದಲೂ ಘನತ್ಯಾಜ್ಯ ವಿಲೇವಾರಿ ಮಾಡುತ್ತಿದೆ. ಸಮೀಪದಲ್ಲೇ ಕೆರೆ, ಕಾಲೇಜು ಕಟ್ಟಡ ಹಾಗೂ ಜನವಸತಿ ಇದ್ದು, ತ್ಯಾಜ್ಯ ಘಟಕದಿಂದಾಗಿ ದುರ್ವಾಸನೆ ಬರುತ್ತಿದೆ. ಕಸಕ್ಕೆ ಆಗಾಗ್ಗೆ ಬೆಂಕಿ ಬೀಳುತ್ತಿದ್ದು, ಹೊಗೆ ಆವರಿಸುತ್ತಿದೆ. ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಜಾಗಕ್ಕೆ ಕಾಂಪೌಂಡ್ ಕೂಡ ನಿರ್ಮಿಸಿಲ್ಲ. ಇದರಿಂದಾಗಿ ಪರಿಸರ ಕಲುಷಿತಗೊಂಡಿದ್ದು, ಜನಜೀವನಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ವಿವರಿಸಿದರು.
ವಾದ ಆಲಿಸಿದ ಪೀಠ, ಗುಡ್ಡನಹಳ್ಳಿಯಲ್ಲಿರುವ ತ್ಯಾಜ್ಯ ಘಟಕದಿಂದ ಸಾರ್ವಜನಿಕರಿಗೆ ಹಾಗೂ ಪರಿಸರಕ್ಕೆ ತೊಂದರೆಯಾಗದಂತೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಕುರಿತು ಪುರಸಭೆ ಪ್ರಮಾಣಪತ್ರ ಸಲ್ಲಿಸಬೇಕು. ಹಾಗೆಯೇ ಜಿಲ್ಲಾಧಿಕಾರಿ ವರದಿಯಂತೆ ತ್ಯಾಜ್ಯ ವಿಲೇವಾರಿಗೆ ಬದಲಿ ಸ್ಥಳವನ್ನು ಅಂತಿಮಗೊಳಿಸಬೇಕು. ಇನ್ನು ಘನತ್ಯಾಜ್ಯ ನಿರ್ವಹಣೆ ನಿಯಮಗಳು-2016ನ್ನು ಪಾಲಿಸದ ಪುರಸಭೆಯ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿ ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸಬೇಕು. ಈ ಎಲ್ಲಾ ವರದಿಗಳನ್ನು ಮುಂದಿನ ಮೂರು ವಾರಗಳಲ್ಲಿ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಮಾರ್ಚ್ 15ಕ್ಕೆ ಮುಂದೂಡಿತು.