ಬೆಂಗಳೂರು: ಉದ್ಯಮಿಯೊಬ್ಬರಿಂದ ಜಪ್ತಿ ಮಾಡಿದ್ದ 75 ಲಕ್ಷ ಹಣ ದೋಚಲು ಬಿಡದಿ ಠಾಣೆಯ ಇನ್ಸ್‌ಪೆಕ್ಟರ್ ಶಂಕರ್ ನಾಯಕ್ ಅವರು ಪ್ರಯತ್ನಿಸಿ ಸುಳ್ಳು ಪ್ರಕರಣ ಸೃಷ್ಟಿಸಿದ್ದ ಆರೋಪದಲ್ಲಿ 2ನೇ ಆರೋಪಿಯಾಗಿರುವ ಎನ್.ಎಸ್. ಲೋಕನಾಥ್ ಸಿಂಗ್‌ಗೆ ಹೈಕೋರ್ಟ್ ಜಾಮೀನು ನೀಡಿದೆ. ಪ್ರಕರಣಕ್ಕೆ ತಮ್ಮ ವಿರುದ್ಧ ಬ್ಯಾಟರಾಯನಪುರ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಮತ್ತು ಸಿಸಿಬಿ ಪೊಲೀಸರು ನಡೆಸುತ್ತಿರುವ ತನಿಖೆ ರದ್ದುಪಡಿಸುವಂತೆ ಕೋರಿ ಲೋಕನಾಥ್ ಸಿಂಗ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ಪೀಠ ಈ ಆದೇಶ ಮಾಡಿದೆ.
ಅಲ್ಲದೇ, ಅರ್ಜಿದಾರರು ಜಾಮೀನು ಭದ್ರತಾ ಖಾತರಿಯಾಗಿ ಎರಡು ಲಕ್ಷ ರೂ. ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಶ್ಯೂರಿಟಿ ಪಡೆಯಬೇಕು ಎಂದು ಪ್ರಕರಣದ ತನಿಖಾಧಿಕಾರಿಗೆ ನ್ಯಾಯಪೀಠ ನಿರ್ದೇಶಿಸಿದೆ. ಜತೆಗೆ, ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಬ್ಯಾಟರಾಯನಪುರ ಠಾಣಾ ಪೊಲೀಸರಿಗೆ ಮತ್ತು ಪ್ರಕರಣದ ದೂರುದಾರರಾಗಿರುವ ಬ್ಯಾಟರಾಯನಪುರ ಉಪ ವಲಯದ ಎಸಿಪಿ ಭರತ್ ಎಸ್. ರೆಡ್ಡಿ ಅವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ, ಲೋಕನಾಥ್ ಪರ ವಕೀಲರು ವಾದ ಮಂಡಿಸಿ, ಪ್ರಕರಣದ ಮೊದಲ ಆರೋಪಿ ಶಂಕರ್ ನಾಯಕ್ ಅವರು ಅರ್ಜಿದಾರನ ಮೂಲಕ 20 ಲಕ್ಷ ರೂ. ಬೇಡಿಕೆಯಿಟ್ಟಿದ್ದರು ಎಂಬ ಏಕೈಕ ಆಧಾರದ ಮೇಲೆ ಪ್ರಕರಣದಲ್ಲಿ ಅರ್ಜಿದಾರರನ್ನು (ಲೋಕನಾಥ್ ಅವರನ್ನು ) ಸಿಲುಕಿಸಲಾಗಿದೆ. ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಶಂಕರ್ ನಾಯಕ್ ಅವರ ವಿರುದ್ಧ ಬ್ಯಾಟರಾಯನಪುರ ಠಾಣಾ ಪೊಲೀಸರು ಅಧಿಕಾರ ವ್ಯಾಪ್ತಿ ಮೀರಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 7ರ ಅಡಿ ಪ್ರಕರಣ ದಾಖಲಿಸಿದ್ದಾರೆ. ಅದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಈ ಅಂಶವನ್ನು ಪರಿಗಣಿಸಿದ ನ್ಯಾಯಪೀಠ ಲೋಕನಾಥ್ ಬಿಡಗುಡೆಗೆ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಉದ್ಯಮಿ ಹರೀಶ್ ಅವರಿಗೆ ಸೇರಿದ್ದ 75 ಲಕ್ಷವನ್ನು 2022ರ ಸೆಪ್ಟೆಂಬರ್‌ನಲ್ಲಿ ಅವರ ಚಾಲಕ ಸಂತೋಷ್ ಕದ್ದೊಯ್ದಿದ್ದ. ಈ ವಿಚಾರ ಮಧ್ಯವರ್ತಿ ಲೋಕನಾಥ್ ಸಿಂಗ್‌ಗೆ ಗೊತ್ತಾಗಿತ್ತು. ಆತನೇ ಹರೀಶ್ ಅವರನ್ನು ಬ್ಯಾಟರಾಯನ ಪುರ ಠಾಣಾ ಇನ್ಸ್‌ಪೆಕ್ಟರ್ ಶಂಕರ್ ನಾಯಕ್ ಬಳಿ ಕರೆ ತಂದಿದ್ದ. ಆರೋಪಿಯನ್ನು ಹುಡುಕಿಕೊಡಲು 20 ಲಕ್ಷ ಲಂಚಕ್ಕೆ ಇನ್ಸ್‌ಪೆಕ್ಟರ್ ಬೇಡಿಕೆ ಇರಿಸಿದ್ದ. ನಂತರ, ಸುಳ್ಳು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ 75 ಲಕ್ಷ ರೂ. ಜಪ್ತಿ ಮಾಡಿದ್ದ. ಆದರೆ, ಹಣವನ್ನು ದೂರುದಾರರಿಗೆ ನೀಡದೇ ಸ್ವಂತಕ್ಕೆ ಬಳಸಿಕೊಂಡಿದ್ದಾನೆ ಎಂಬ ಆರೋಪ ಶಂಕರ್ ನಾಯಕ್ ಮೇಲಿತ್ತು. ಈ ಸಂಬಂಧ ಅವರ ವಿರುದ್ಧ ಬ್ಯಾಟರಾಯನಪುರ ಠಾಣಾ ಪೊಲೀಸರು 2023ರ ನ.22 ರಂದು ಎಫ್‌ಐಆರ್ ದಾಖಲಿಸಿದ್ದರು. ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದ ಲೋಕನಾಥ್ ಅವರನ್ನು ಪೊಲೀಸರು ಬಂಧಿಸಿದ್ದರು. ಸದ್ಯ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದಾರೆ.
ಇದನ್ನೂ ಓದಿ: ಡೇಟಿಂಗ್ ಆ್ಯಪ್‌ನಲ್ಲಿ ನಗ್ನವಾಗುವಂತೆ ಬ್ಲ್ಯಾಕ್‌ಮೇಲ್ ಮಾಡಿ ಸುಲಿಗೆ