ಬೆಂಗಳೂರು: ಹಾಸನ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಜಿಲ್ಲೆಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಇದಕ್ಕೂ ಮುನ್ನ ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಭೇಟಿ ಮಾಡಿ ಸುದೀರ್ಘ ಸಮಾಲೋಚನೆ ನಡೆಸಿದ್ದ ಹಾಸನ ಕಾಂಗ್ರೆಸ್ ಮುಖಂಡರು ಸಂಜೆ ಸಿದ್ದರಾಮಯ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆ, ಪ್ರಗತಿ ಹಾಗೂ ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಹೆಚ್ಚಿನ ಸ್ಥಾನ ಗಳಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಮುಖಂಡರು ಚರ್ಚಿಸಿದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದ 63 ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಕ್ಷೇತ್ರಗಳನ್ನು ಗೆದ್ದುಕೊಳ್ಳುವ ನಿಟ್ಟಿನಲ್ಲಿ ಕಾರ್ಯತಂತ್ರ ಹೆಣೆದಿರುವ ಕಾಂಗ್ರೆಸ್ ಪಾಲಿಗೆ ಹಾಸನ ಜಿಲ್ಲೆ ಕೂಡ ಅತ್ಯಂತ ಪ್ರಮುಖವಾಗಿದೆ. ಏಳು ವಿಧಾನಸಭೆ ಕ್ಷೇತ್ರಗಳ ಪೈಕಿ ಆರರಲ್ಲಿ ಜೆಡಿಎಸ್ ಹಾಗೂ ಒಂದರಲ್ಲಿ ಬಿಜೆಪಿ ಶಾಸಕರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಇಲ್ಲಿ ಖಾತೆ ತೆರೆದಿಲ್ಲ. ಈ ಹಿನ್ನೆಲೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೈಗೊಳ್ಳಬಹುದಾದ ಕಾರ್ಯತಂತ್ರಗಳ ಕುರಿತು ಜಿಲ್ಲಾ ಕಾಂಗ್ರೆಸ್ ನಾಯಕರು ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಸಿದ್ದರಾಮಯ್ಯರನ್ನು ಭೇಟಿಯಾದ ಸಂದರ್ಭ ಪಕ್ಷದ ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಗೋಪಾಲ ಸ್ವಾಮಿ ಮತ್ತಿತರರು ಇದ್ದರು.
ಪ್ರಸಾದ್ಗೆ ಅಭಿನಂದನೆ:
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರಸಾದ್ ಅವರನ್ನು ಸಿದ್ದರಾಮಯ್ಯ ಅವರು ತಮ್ಮ ನಿವಾಸದಲ್ಲಿ ಅಭಿನಂದಿಸಿದರು. ಗೆಲುವಿನ ನಂತರ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಪ್ರಸಾದ್ಗೆ ಇದೇ ಸಂದರ್ಭ ಸಿದ್ದರಾಮಯ್ಯ ಶುಭ ಹಾರೈಸಿದರು.