ಬೆಂಗಳೂರು : ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ ಒಂದೊಂದು ಕ್ಷೇತ್ರದಲ್ಲಿ ಜಯ ಸಾಧಿಸಿದೆ. ಈ ಫಲಿತಾಂಶದಿಂದ ಸಿಎಂಗೆ ತೀವ್ರ ಮುಖಭಂಗ ಎದುರಾದರೆ, ಕಾಂಗ್ರೆಸ್‌ಗೆ ಬಂಪರ್ ಲಾಭ ದೊರಕಿದೆ.
ಎರಡು ರಾಷ್ಟ್ರೀಯ ಪಕ್ಷಗಳ ತೀವ್ರ ಸೆಣಸಾಟದಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಬಲಿಯಾಗಿದೆ. ಹಾನಗಲ್ ಹಾಗೂ ಸಿಂದಗಿ ಎರಡು ಕ್ಷೇತ್ರಗಳಲ್ಲಿ ಠೇವಣಿ ನಷ್ಟ ಎದುರಿಸಿದೆ. ವಿಪರ್ಯಾಸ ಎಂದರೆ ಹಾನಗಲ್ ಕ್ಷೇತ್ರದಲ್ಲಿ ಜೆಡಿಎಸ್ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಪ್ರಾದೇಶಿಕ ಪಕ್ಷವಾಗಿ ಅಸ್ತಿತ್ವ ಕಂಡುಕೊಳ್ಳಲು ಹೋರಾಡುತ್ತಿರುವ ಜೆಡಿಎಸ್ ಪಕ್ಷಕ್ಕೆ ಇದೊಂದು ದೊಡ್ಡ ಹಿನ್ನಡೆಯಾಗಿದೆ. ಹಾನಗಲ್‌ನಲ್ಲಿ ಐದುನೂರು ಮತಗಳಿಗೆ ತೃಪ್ತಿಪಟ್ಟುಕೊಂಡರೇ, ಸಿಂದಗಿಯಲ್ಲಿ ತಾನು ಕಳೆದುಕೊಂಡ ಕ್ಷೇತ್ರದಲ್ಲಿ ಕೇವಲ ಐದು ಸಾವಿರ ಮತಗಳನ್ನು ಮಾತ್ರ ಪಡೆಯಲು ಜೆಡಿಎಸ್ ಶಕ್ತವಾಗಿದೆ.
ಬಿಜೆಪಿ- ಕಾಂಗ್ರೆಸ್‌ಗೆ ತಲಾ ಒಂದು ಸ್ಥಾನ : ಹಾನಗಲ್ ಶಾಸಕರಾಗಿದ್ದ ಸಿಎಂ ಉದಾಸಿ ಹಾಗೂ ಸಿಂದಗಿ ಶಾಸಕರಾಗಿದ್ದ ಎಂಸಿ ಮನಗೂಳಿ ನಿಧನದಿಂದ ತೆರವಾಗಿದ್ದ ಕ್ಷೇತ್ರಗಳಿಗೆ ಅಕ್ಟೋಬರ್ 30ರಂದು ಮತದಾನ ನಡೆದಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಅತ್ಯಂತ ಪ್ರತಿಷ್ಠೆಯ ಚುನಾವಣೆ ಇದಾಗಿದ್ದರೂ ಜೆಡಿಎಸ್ ತಾನು ಕಳೆದುಕೊಂಡ ಒಂದು ಕ್ಷೇತ್ರವನ್ನು ಮರಳಿ ಗಳಿಸಲು ಹೋರಾಟಕ್ಕಿಳಿದಿತ್ತು.
ಆದರೆ, ಒಟ್ಟಾರೆ ತನ್ನ ಒಂದು ಸ್ಥಾನವನ್ನು ಕಳೆದುಕೊಂಡು ಜೆಡಿಎಸ್ ಬಡವಾದರೆ, ಯಾವುದೇ ಸ್ಥಾನ ಕಳೆದುಕೊಳ್ಳದೆ ಇದ್ದ ಕಾಂಗ್ರೆಸ್ ಹೆಚ್ಚುವರಿಯಾಗಿ ಒಂದು ಸ್ಥಾನ ಗೆಲ್ಲುವ ಮೂಲಕ ಅದೃಷ್ಟ ಪರೀಕ್ಷೆ ಮಾಡಿಕೊಂಡಿದೆ.
ಇನ್ನೂ ಬಿಜೆಪಿ ತಾನು ಕಳೆದುಕೊಂಡ ಒಂದು ಸ್ಥಾನವನ್ನು ಗಳಿಸಿದೆಯಾದರೂ, ಕಳೆದುಕೊಂಡ ಹಾನಗಲ್ ಕ್ಷೇತ್ರವನ್ನು ಮರಳಿ ಪಡೆಯಲಾಗದೆ ಹೋಗಿದೆ. ಇದರ ಜೊತೆಜೊತೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತವರು ಜಿಲ್ಲೆಯ ಕ್ಷೇತ್ರದಲ್ಲಿಯೇ ಭಾರಿ ಹಿನ್ನಡೆ ಆಗುವ ಮೂಲಕ ಮುಖ್ಯಮಂತ್ರಿಗಳಿಗೆ ತೀವ್ರ ಮುಖಭಂಗ ಉಂಟು ಮಾಡಿದೆ.
ತವರು ಜಿಲ್ಲೆಯಲ್ಲಿ ಬಿಜೆಪಿ ಸೋಲು.. ಸಿಎಂಗೆ ಮುಜುಗರ : ಹಾನಗಲ್ ಕ್ಷೇತ್ರವನ್ನು ಅತ್ಯಂತ ಪ್ರತಿಷ್ಠೆಯಾಗಿ ಪರಿಗಣಿಸಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ತೀವ್ರ ಹಿನ್ನಡೆ ಎದುರಾಗಿದೆ. ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ನಂತರ ಎದುರಾದ ಮೊದಲ ಚುನಾವಣೆಯಲ್ಲಿ, ಅದರಲ್ಲೂ ತಾವು ಪ್ರತಿನಿಧಿಸುವ ಜಿಲ್ಲೆಯ ತಮ್ಮದೇ ಪಕ್ಷದ ಅಭ್ಯರ್ಥಿಯ ನಿಧನದಿಂದ ತೆರವಾದ ಕ್ಷೇತ್ರವನ್ನು ಗೆದ್ದುಕೊಳ್ಳುವಲ್ಲಿ ಹಿನ್ನಡೆ ಉಂಟಾಗಿದೆ.
ಸಂಪೂರ್ಣ ಆಡಳಿತ ಯಂತ್ರವನ್ನೇ ಹಾನಗಲ್ ಕ್ಷೇತ್ರಕ್ಕೆ ವರ್ಗಾಯಿಸಿದ್ದ ಮುಖ್ಯಮಂತ್ರಿಗಳು ಎಂಟು ದಿನಕ್ಕೂ ಹೆಚ್ಚು ಕಾಲ ಅಲ್ಲೇ ಠಿಕಾಣಿ ಹೂಡಿ ಗೆಲುವಿನ ಕಾರ್ಯತಂತ್ರ ಹೆಣೆದಿದ್ದರು. ಆದರೆ, ಅಂತಿಮವಾಗಿ ಅವರ ಪ್ರಯತ್ನ ಸಂಪೂರ್ಣ ವಿಫಲವಾಗಿದೆ. ನಾಯಕತ್ವವನ್ನು ಸಂಶಯಿಸುವ ಮಟ್ಟಕ್ಕೆ ಕೊಂಡೊಯ್ದಿದೆ.
ಕಾಂಗ್ರೆಸ್‌ಗೆ ಬಂಪರ್ : ಆಡಳಿತ ಪಕ್ಷದ ಅಲೆ, ಪ್ರಭಾವವನ್ನು ಮೀರಿ ಕಾಂಗ್ರೆಸ್ ಹಾನಗಲ್ ಕ್ಷೇತ್ರವನ್ನು ಗೆದ್ದುಕೊಂಡಿದೆ. ಬಿಜೆಪಿ ಹಾಗೂ ಜೆಡಿಎಸ್‌ನಿಂದ ತೆರವಾಗಿದ್ದ ಕ್ಷೇತ್ರಗಳಲ್ಲಿಗೆ ಅಭ್ಯರ್ಥಿಗಳನ್ನು ಇಳಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದ ಕಾಂಗ್ರೆಸ್, ನಿರೀಕ್ಷೆಗೂ ಮೀರಿದ ಯಶಸ್ಸು ಗಳಿಸಿದೆ.
ಜೆಡಿಎಸ್‌ನಿಂದ ತೆರವಾದ ಸಿಂದಗಿ ಕ್ಷೇತ್ರದಲ್ಲಿ ಆಪರೇಷನ್ ನಡೆಸಿ ಎಂಸಿ ಮನಗೂಳಿ ಪುತ್ರನನ್ನೇ ಅಭ್ಯರ್ಥಿಯಾಗಿಸಿದ್ದ ಕಾಂಗ್ರೆಸ್‌ಗೆ ಅಲ್ಲಿ ತಾನು ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ಕಡೆಯ ಕ್ಷಣಗಳಲ್ಲಿ ಹಾನಗಲ್‌ನಲ್ಲಿ ಕೂಡ ಗೆಲ್ಲುವ ನಿರೀಕ್ಷೆ ಗರಿಗೆದರಿತ್ತು. ಕೊನೆಗೂ ಒಂದು ಗೆಲುವು ಲಭಿಸಿದ್ದು ನಿರೀಕ್ಷೆ ಮಾಡಿದ್ದ ಸಿಂದಗಿಯಲ್ಲಿ ಅಲ್ಲದಿದ್ದರೂ, ಸಿಎಂ ತವರಿನಲ್ಲಿ ಗೆಲುವು ಸಿಕ್ಕಿದ್ದು ಕಾಂಗ್ರೆಸ್‌ಗೆ ಇನ್ನಷ್ಟು ಬಲ ಹೆಚ್ಚುವಂತೆ ಮಾಡಿದೆ.
ಕೋವಿಡ್ ಸಂದರ್ಭ ಸೇವೆ ಸಾರ್ಥಕ : ಹಾನಗಲ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶ್ರೀನಿವಾಸ್ ಮಾನೆ, ಗೆಲುವಿನ ಹಿಂದೆ ಕೋವಿಡ್ ಸಂದರ್ಭದಲ್ಲಿ ನೀಡಿದ ಸಹಕಾರ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಸಿಎಂ ಉದಾಸಿ ಕ್ಷೇತ್ರದ ಜನರನ್ನು ಭೇಟಿ ಮಾಡಲು ಸಾಧ್ಯವಾಗದ ಸಂದರ್ಭದಲ್ಲಿ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಿದ್ದ 2018ರ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ, ತಮ್ಮ ಸಾಮಾಜಿಕ ಕಳಕಳಿಯನ್ನು ದೊಡ್ಡ ಪ್ರಮಾಣದಲ್ಲಿ ಮೆರೆದಿದ್ದರು.
ಸಾಕಷ್ಟು ಜನ ಸೇವೆ ಮಾಡಿದವರು ಸಾಕಷ್ಟು ಮಂದಿಗೆ ಆರ್ಥಿಕ ಸಹಕಾರ ನೀಡಿದ್ದರು. 2023ರ ಚುನಾವಣೆಯಲ್ಲಿ ಬಹುತೇಕ ಇವರೇ ಗೆಲ್ಲಲಿದ್ದಾರೆ ಎಂಬ ಮಟ್ಟಿನ ಮಾತುಗಳು ಇವರ ಕಾರ್ಯದಿಂದ ಕೇಳಿ ಬರುತ್ತಿತ್ತು. ಕುಟುಂಬದ ಸದಸ್ಯರ ಬದಲು ಬೇರೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಿಜೆಪಿ ಯತ್ನಕ್ಕೂ ಇಲ್ಲಿ ದೊಡ್ಡ ಹಿನ್ನಡೆ ಉಂಟಾಗಿದೆ. ಅನುಕಂಪದ ಅಲೆ ಬಳಸದೆ ಒಂದೆರಡು ಚುನಾವಣೆ ಗೆದ್ದಿದ್ದ ಬಿಜೆಪಿಗೆ ಹಾನಗಲ್‌ನಲ್ಲಿ ಮಾತ್ರ ತೀವ್ರ ಹಿನ್ನಡೆ ಉಂಟಾಗಿದೆ.
ಜೆಡಿಎಸ್ ಲೆಕ್ಕಾಚಾರ ಉಲ್ಟಾ : ಜೆಡಿಎಸ್ ಈ ಸಾರಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ, ಅಲ್ಪಸಂಖ್ಯಾತರೇ ಹೆಚ್ಚಿರುವ ಹಾನಗಲ್ ಹಾಗೂ ಸಿಂದಗಿಯಲ್ಲಿ ನಿರೀಕ್ಷಿತ ಬೆಂಬಲ ವ್ಯಕ್ತವಾಗಿಲ್ಲ. ಬಿಜೆಪಿಗೆ ಅನುಕೂಲ ಮಾಡಿಕೊಡಲು ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂಬ ಆರೋಪವನ್ನು ಕಾಂಗ್ರೆಸ್ ಮಾಡಿತ್ತು. ಆದರೆ, ಕಾಂಗ್ರೆಸ್‌ಗೆ ಸೇರಬೇಕಾದ ಮತ ಒಡೆಯುವ ಕಾರ್ಯವೂ ಸಹ ಜೆಡಿಎಸ್‌ನಿಂದ ಆಗಿಲ್ಲ.
ಎರಡು ಕ್ಷೇತ್ರಗಳಿಗೆ ನಡೆದ ಉಪಚುನಾವಣೆ, ಅಂತಹ ಪ್ರತಿಷ್ಠೆಯನ್ನೇನೂ ಹೊಂದಿರದಿದ್ದರೂ, ಒಂದಿಷ್ಟು ಬದಲಾದ ಮನಸ್ಥಿತಿಗಳನ್ನು ಪರಿಚಯಿಸುವ ಕಾರ್ಯ ಮಾಡಿದೆ. ಬಿಜೆಪಿಯನ್ನು ಎಲ್ಲಾ ಕಡೆ ಜನ ಒಪ್ಪಿಲ್ಲ, ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಕೈಬಿಟ್ಟಿಲ್ಲ ಹಾಗೂ ಜೆಡಿಎಸ್ ಪಕ್ಷ ನಿಧಾನವಾಗಿ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ ಎಂಬ ಸಂದೇಶವನ್ನು ಸ್ಪಷ್ಟವಾಗಿ ತೋರಿಸಿದೆ.