ಬೆಂಗಳೂರು: ಗ್ರಾಪಂ ಚುನಾವಣೆಯಲ್ಲಿ ಗೆದ್ದ ಸದಸ್ಯರೊಬ್ಬರು ಕೇಂದ್ರ ಸರ್ಕಾರದ ಹೆಚ್ಎಎಲ್ ಕಂಪನಿ ಉದ್ಯೋಗಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಕೇಂದ್ರ ಸರ್ಕಾರದ ಹೆಚ್ಎಎಲ್ನಲ್ಲಿ ಏರ್ ಕ್ರಾಫ್ಟ್ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದ 50 ವರ್ಷದ ಆವಲಹಳ್ಳಿಯ ಚೀಮಸಂದ್ರ ನಿವಾಸಿಯಾದ ದೇವರಾಜ್ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆಟೋ ಚಿಹ್ನೆಯ ಮೂಲಕ ಗೆದ್ದಿದ್ದಾರೆ. ಹಾಗಾಗಿ ನಾಳೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಆವಲಹಳ್ಳಿ ಗ್ರಾಮ ಪಂಚಾಯಿತಿ ಆವಲಹಳ್ಳಿ ಗ್ರಾಮದ ವಾರ್ಡ್ ನಂ.6ರಲ್ಲಿ ದೇವರಾಜ್ ಮತ್ತು ಪತ್ನಿ ಜೋತಿ ಕಣದಲ್ಲಿದ್ದರು. ಇಂದು ಇಬ್ಬರೂ ಜಯಶೀಲರಾಗಿದ್ದಾರೆ. ಈ ಸಂದರ್ಭ ಹೆಚ್ಎಎಲ್ನ ನೂರಾರು ಸಹೊದ್ಯೋಗಿಗಳು ಬಂದು ಸಿಹಿ ಹಂಚಿ ಶುಭ ಕೋರಿದರು.
ದೇವರಾಜ ಹೆಚ್ಎಎಲ್ನ ಉನ್ನತ ಉದ್ಯೋಗದಲ್ಲಿದ್ದು, ಪತ್ನಿ ಜ್ಯೋತಿ ಈ ಹಿಂದೆ ಆವಲಹಳ್ಳಿ ಪಂಚಾಯಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಹೆಚ್ಎಎಲ್ನ ಉದ್ಯೋಗಿ ದೇವರಾಜ್ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಸಾರ್ವಜನಿಕರ ಸೇವೆಗೆ ತನ್ನನ್ನು ತೊಡಗಿಸಿಕೊಳ್ಳುವುದಾಗಿ ಹೇಳಿದ್ದಾರೆ. ನಂತರ ಹೆಚ್ಎಎಲ್ನ ನೌಕರರ ಸೊಸೈಟಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದರು.