ಬೆಂಗಳೂರು : ಎಚ್ 3 ಎನ್ 2 ಹೊಸ ವೈರಸ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಜ್ಞರ ಜೊತೆಗೆ ಇಂದು ವಿಶೇಷ ಸಭೆ ನಡೆಸಿದ್ದಾರೆ. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ತಜ್ಞ ವೈದ್ಯರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. ಹೊಸ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದ್ದು, ಈ ಕಾರಣದಿಂದ ಸಚಿವರು ಸಭೆ ಕರೆದಿದ್ದರು.
ಯಾವ ರೀತಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂಬುದರ ಬಗ್ಗೆ ಸಮಾಲೋಚನೆ ನಡೆಸಿದ ಸಚಿವರು, ಎಚ್ 3 ಎನ್ 2 ವೈರಸ್ ಅಪಾಯಕಾರಿ ಅಲ್ಲ. ಆದರೆ, ಮುಂಜಾಗ್ರತಾ ಕ್ರಮ ವಹಿಸುವುದು ಅಗತ್ಯ. ಇದುವರೆಗೆ ರಾಜ್ಯದಲ್ಲಿ 26 ಪ್ರಕರಣಗಳು ವರದಿಯಾಗಿವೆ. ಎಚ್ 3 ಎನ್ 2 ದೇಶದಲ್ಲಿ ಹೆಚ್ಚು ಸೋಂಕು ವರದಿಯಾಗುತ್ತಿರುವ ಕಾರಣದಿಂದ ಜನರು ಗಾಬರಿಯಾಗಿದ್ದಾರೆ. ಈ ಸಂಬಂಧ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಗಾಬರಿಪಡುವ ಯಾವುದೇ ಸ್ಥಿತಿ ಇಲ್ಲ. ಆದರೂ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
ನಮ್ಮ ಆಸ್ಪತ್ರೆಗಳಲ್ಲಿ ವೈದ್ಯರು, ನರ್ಸ್ ಎಲ್ಲರೂ ಮಾಸ್ಕ್ ಧರಿಸುತ್ತಿದ್ದರು. ಈಗ ಮಾಸ್ಕ್ ಧರಿಸುತ್ತಿಲ್ಲ. ಎಲ್ಲ ಹೆಲ್ತ್ ಕೇರ್ ಸಿಬ್ಬಂದಿ ಸ್ಟಾಫ್ ಕಡ್ಡಾಯವಾಗಿ ಇನ್ನು ಮುಂದೆ ಮಾಸ್ಕ್ ಧರಿಸಬೇಕು ಎಂದು ಸೂಚನೆ ನೀಡಿದರು. ವರ್ಷದಲ್ಲಿ ಒಂದು ಬಾರಿ ನಮ್ಮ ಆರೋಗ್ಯ ಸಿಬ್ಬಂದಿ ಕಡ್ಡಾಯವಾಗಿ ಸರ್ಕಾರದಿಂದ ಕೊಡುವ ವ್ಯಾಕ್ಸಿನ್ ತೆಗೆದುಕೊಳ್ಳಬೇಕು ಎಂದು ಇದೇ ವೇಳೆ ಹೇಳಿದರು.
ಕೇಂದ್ರ ಸರ್ಕಾರ ಪ್ರತಿವಾರ ಸ್ಯಾರಿ, ILR ಹೀಗೆ 25 ಟೆಸ್ಟ್ ಮಾಡಲು ಸೂಚಿಸಿದೆ. 15 ವರ್ಷದ ಕೆಳಗಿನ ಮಕ್ಕಳಿಗೆ ಈ ವೇರಿಯೆಂಟ್ ಅಪಾಯ ಇದೆ. ಮಕ್ಕಳು ಶಾಲೆಗಳಲ್ಲಿ ಒಟ್ಟಿಗೆ ಕುಳಿತು ಕೊಳ್ಳುವುದರಿಂದ ಅಪಾಯ ಹೆಚ್ಚು. 65 ವರ್ಷ ಮೇಲ್ಪಟ್ಟ ವಯೋವೃದ್ದರು, ಗರ್ಭಿಣಿಯರಿಗೂ ಇದರ ಅಪಾಯ ಇದೆ ಎಂದು ತಿಳಿಸಿದರು. ಶುಚಿತ್ವಕ್ಕೆ ಹೆಚ್ಚು ಮಹತ್ವ ಕೊಡಬೇಕು, ಸೀನುವಾಗ ಕೆಮ್ಮುವಾಗ ಮಾಸ್ಕ್ ಹಾಕಬೇಕು, ಸಾರ್ವಜನಿಕ ಅಂತರ ಕಾಪಾಡಬೇಕು ಎಂದು ಸಲಹೆ ನೀಡಿದರು.
ನಮ್ಮ ಅಂಕಿ-ಅಂಶ ಗಮನಿಸಿದಾಗ ಆತಂಕ ಇಲ್ಲ. ಜನವರಿಯಿಂದ HINI 20, h3n2 26, ಇನ್ಪುಯೆನ್ಸಾ b 10, ಅಡಿನೋ ವೈರಸ್ 60 ಕೇಸ್ ಪತ್ತೆಯಾಗಿದೆ ಎಂದು ವಿವರಿಸಿದರು. ಸೋಂಕು ಬಂದಿರುವವರು ಆ್ಯಂಟಿ ಬಯೋಟಿಕ್ಸ್ ತೆಗೆದುಕೊಳ್ಳುತ್ತಿದ್ದಾರೆ, ಇದು ಸರಿಯಲ್ಲ. ತಮ್ಮ ವೈಯಕ್ತಿಕ ಚಿಕಿತ್ಸೆ ಪಡೆಯಬೇಡಿ, ವೈದ್ಯಕೀಯ ಚಿಕಿತ್ಸೆ ಪಡೆಯಿರಿ. ಸದ್ಯ ನಮ್ಮಲ್ಲಿ ಯಾವುದೇ ಔಷಧ ಕೊರತೆ ಇಲ್ಲ ಎಂದು ತಿಳಿಸಿದರು.
ನಾವು ಈಗ ಬೇಸಿಗೆಗೆ ಕಾಲಿಡುತ್ತಿದ್ದು, ತಾಪಮಾನ ಫೆಬ್ರವರಿಯಿಂದ ಹೆಚ್ಚಾಗಿದೆ. ಬಿಸಿಲಿನ ತಾಪಮಾನಕ್ಕೆ ಜನ ಬಳಲುತ್ತಿದ್ದಾರೆ. ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ವರೆಗೆ ಬಿಸಿಲಿನಲ್ಲಿ ಹೋಗೋದು ಕಡಿಮೆ ಮಾಡಿ. ದಿನನಿತ್ಯ ಬೇಸಿಗೆಯಲ್ಲಿ ಹೆಚ್ಚು ನೀರನ್ನು ಸೇವಿಸಬೇಕು, ಕನಿಷ್ಠ 2-3 ಲೀಟರ್ ನಿರು ಸೇವಿಸಬೇಕು, ಎಳನೀರು, ಮಜ್ಜಿಗೆ ಸೇವಿಸುವುದು ಉತ್ತಮ ಎಂದು ತಿಳಿಸಿದರು.
ಇವತ್ತು H3N2 ಗೆ ಪ್ರತ್ಯೇಕ ಕೋವಿಡ್ ಮಾರ್ಗಸೂಚಿ ಹೊರಡಿಸುತ್ತಿದ್ದು, ಕೋವಿಡ್ ರೀತಿಯಲ್ಲೇ ಇದರ ರೋಗಲಕ್ಷಣಗಳು ಇರುತ್ತವೆ. ಕೋವಿಡ್‌ಗೆ ಕೊಡುತ್ತಿದ್ದ ಚಿಕಿತ್ಸೆಯನ್ನೇ ಮುಂದುವರೆಸುತ್ತಿದ್ದೇವೆ ಈ ವೇರಿಯಂಟ್ ಗೆ ಎಂದು ಸುಧಾಕರ್ ಹೇಳಿದರು. ಬೆಂಗಳೂರಿನಲ್ಲಿ ಈ ಸೋಂಕು ಕಡಿಮೆ ಇದೆ. h3n2 ಎರಡು ಕೇಸ್ ಇದೆ. ಆದರೂ, ಅಗತ್ಯವಾಗಿ ಗುಂಪು ಸೇರುವುದು ಕಡಿಮೆ ಮಾಡಬೇಕು.
ಆರೋಗ್ಯ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೋವಿಡ್ ಮಾದರಿಯಲ್ಲಿ ಇದರ ತಪಾಸಣೆ ಕೂಡ ನಡೆಯುತ್ತದೆ. ತಪಾಸಣೆಗೆ ಹೆಚ್ಚು ದರ ಪಡೆಯಲಾಗುತ್ತಿದೆ. ಇದನ್ನು ನಿಯಂತ್ರಣ ಮಾಡಲು ಸಮಿತಿ ರಚನೆ ಮಾಡುತ್ತೇವೆ. ಸಮಿತಿ ವರದಿಯ ಬಳಿಕ ಕಡಿಮೆ ದರದಲ್ಲಿ ಜನರಿಗೆ ಲಭ್ಯ ಆಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಇದನ್ನೂ ಓದಿ :ಹೆಚ್ 3 ಎನ್ 2 ಪ್ರಭೇದ ಪತ್ತೆ, ಕ್ರಮಗಳ ಕುರಿತು ಅಧಿಕಾರಿಗಳು, ತಜ್ಞರ ಸಭೆ : ಸಚಿವ ಡಾ ಕೆ ಸುಧಾಕರ್