ಬೆಂಗಳೂರು: ನೋವೆಲ್ ಕೊರೋನಾ ವೈರಸ್ ಭೀತಿ ಬೆನ್ನಲ್ಲೇ ಈಗ ಉದ್ಯಾನ ನಗರಿ ಬೆಂಗಳೂರಿಗೆ ಮತ್ತೆ ಮಹಾಮಾರಿ ಹಂದಿ ಜ್ವರ ಕಾಲಿಟ್ಟಿದೆ. ನಗರದಲ್ಲಿ ಹೆಚ್1 ಎನ್1 ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬ ಮಾಹಿತಿ ಸಿಕ್ಕಿದೆ.
ಪ್ರಪಂಚವನ್ನೇ ನಡುಗಿಸಿರುವ ಕೊರೊನಾ ವೈರಸ್ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ. ಕೊರೊನಾದಿಂದ ಪಾರಾದರೆ ಸಾಕು ಅಂತ ಇದ್ದವರಿಗೆ, ಈಗ ಸದ್ದುಗದ್ದಲವಿಲ್ಲದೇ ಹೆಚ್1ಎನ್1 ಜ್ವರ ಪ್ರಕರಣಗಳು ಪತ್ತೆಯಾಗುತ್ತಿವೆ. ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಬಾಧಿಸುವ ಹೆಚ್1ಎನ್1(ಹಂದಿ ಜ್ವರ) ಬೇಸಿಗೆಗೂ ಮುನ್ನವೇ ಕಾಣಿಸಿಕೊಂಡಿದ್ದು, ಈವರೆಗೆ ರಾಜ್ಯದಲ್ಲಿ 74 ಪ್ರಕರಣಗಳು ದೃಢಪಟ್ಟಿವೆ ಅಂತಾರೆ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ್ ಕುಮಾರ್.
ಸದ್ಯ ಆರೋಗ್ಯ ಇಲಾಖೆಗೆ ಮತ್ತೊಂದು ಟೆನ್ಷನ್ ಶುರುವಾಗಿದ್ದು, ಹಂದಿಜ್ವರ ನಿಯಂತ್ರಣಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಕೊರೊನಾ ವೈರಸ್ ಪರೀಕ್ಷೆಯ ಜೊತೆಗೆ ಹೆಚ್1ಎನ್1 ಪರೀಕ್ಷೆಯನ್ನೂ ಮಾಡುವಂತೆ ಎಲ್ಲಾ ಜಿಲ್ಲಾ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ಹಂದಿಜ್ವರ ಹೆಚ್ಚಾಗಿ ಹರಡದಂತೆ ಗಮನ ಹರಿಸಲು ಆದೇಶಿಸಲಾಗಿದೆ ಎಂದು ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಯ ನಿರ್ದೇಶಕ ನಾಗರಾಜ್ ತಿಳಿಸಿದ್ದಾರೆ.
ಇದನ್ನು ಓದಿ:- ಬೇಸಿಗೆಯಲ್ಲಿ ಕಾಡಲಿದೆಯಾ ಹೆಚ್1ಎನ್1 ಮಹಾಮಾರಿ..? ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಹೀಗಿದೆ!
ಹೆಚ್1ಎನ್1 ಜ್ವರದ ಲಕ್ಷಣಗಳು: ಅತಿಯಾದ ತಲೆನೋವು, ಜ್ವರ, ಒಂದು ವಾರಕ್ಕೂ ಹೆಚ್ಚು ಕಾಲ ಉಳಿಯುವ ಕೆಮ್ಮು, ಗಟ್ಟಿಯಾದ ಕಫ ಬರುವಿಕೆ, ಮೈ ಬೆವರುವುದು ಹಂದಿಜ್ವರದ ಲಕ್ಷಣಗಳಾಗಿವೆ.