ಬೆಂಗಳೂರು : ಸಾಂಕ್ರಾಮಿಕ ರೋಗದಂತೆ ಬಾಧಿಸುತ್ತಿರುವ ಹೆಚ್1ಎನ್1 ಜ್ವರ ರಾಜ್ಯದ ಜನರ ನಿದ್ದೆಗೆಡಿಸಿದೆ. ಬೆಂಗಳೂರು, ದಕ್ಷಿಣಕನ್ನಡ, ಉಡುಪಿ, ದಾವಣಗೆರೆ, ಬೆಂಗಳೂರು ಗ್ರಾಮಾಂತರ, ತುಮಕೂರಿನಲ್ಲಿ ಇದರ ತೀವ್ರತೆ ಹೆಚ್ಚಾಗಿದೆ. ಈವರೆಗೆ ರಾಜ್ಯದಲ್ಲಿ ಮೂವರು ಹೆಚ್1ಎನ್1ಗೆ ಬಲಿಯಾಗಿದ್ದಾರೆ. ಅಷ್ಟೇ ಅಲ್ಲ, 2038 ಶಂಕಿತರಲ್ಲಿ 215 ಜನರಿಗೆ ಹೆಚ್1ಎನ್1 ಸೋಂಕು ತಗುಲಿರೋದು ದೃಢಪಟ್ಟಿದೆ.
ಹೆಚ್1ಎನ್1 ಜ್ವರದ ಲಕ್ಷಣ : ಅತಿಯಾದ ತಲೆನೋವು, ಬಿಡದೆ ಬರುವ ಜ್ವರ, 1 ವಾರಕ್ಕೂ ಹೆಚ್ಚು ಕಾಲ ಉಳಿಯುವ ಕೆಮ್ಮು, ಗಟ್ಟಿಯಾದ ಕಫ ಬರುವಿಕೆ, ಮೈ ಬೆವರುವುದು ಹೆಚ್1ಎನ್1 ಜ್ವರದ ಲಕ್ಷಣ.
ತಡೆಗಟ್ಟುವುದು ಹೇಗೆ?: ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನ ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು. ಕೈಗಳನ್ನು ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು. ಅತಿಯಾಗಿ ಜನಸಂದಣಿ ಇರುವ ಸ್ಥಳದಲ್ಲಿ ಹೋಗುವುದನ್ನ ತಪ್ಪಿಸುವುದು, ಫ್ಲೂ ಜ್ವರದಿಂದ ಬಳಲುತ್ತಿರುವ ವ್ಯಕ್ತಿಗಳಿಂದ ದೂರವಿರುವುದು ಒಳಿತು. ಸಾಕಷ್ಟು ನೀರು ಕುಡಿಯುವುದು ಮತ್ತು ಪೌಷ್ಠಿಕ ಆಹಾರ ಸೇವಿಸುವುದು ಉತ್ತಮ. ವೈದ್ಯರ ಸಲಹೆ ಇಲ್ಲದೇ ಔಷಧಿ ತೆಗೆದುಕೊಳ್ಳುವುದನ್ನ ಮಾಡದೇ ಇದ್ದರೆ ಜ್ವರದಿಂದ ಪಾರಾಗಬಹುದು ಅಂತಾರೆ ಆರೋಗ್ಯ ತಜ್ಞರು.