ಬೆಂಗಳೂರು: ಯಾರು ಯಾರನ್ನೂ ಮುಗಿಸಲು ಸಾಧ್ಯವಿಲ್ಲ. ಅದು ಭಗವಂತನ ಆಟ. ದೇವರು ಎಲ್ಲಾ ತೀರ್ಮಾನ ಮಾಡುತ್ತಾನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್. ಡಿ ದೇವೇಗೌಡರು ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ತೀರ್ಮಾನ ಮಾಡುವವರು ಎಲ್ಲೋ ಇದ್ದಾರೆ. ಇವರಿಂದ ಜೆಡಿಎಸ್ ಮುಗಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಮೇಕೆದಾಟು ಪಾದಯಾತ್ರೆ ಕಾಂಗ್ರೆಸ್ ಕೈಬಿಟ್ಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ದೇವೇಗೌಡರು, ಮೇಕೆದಾಟು ಯೋಜನೆ ವಿಚಾರ ಸುಪ್ರೀಂ ಕೋರ್ಟ್ ನಲ್ಲಿರುವುದರಿಂದ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ನ್ಯಾಯಾಲಯದಲ್ಲಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸುವುದು ಸರಿಯಲ್ಲ. ಸುಪ್ರೀಂ ಕೋರ್ಟ್ನಲ್ಲಿ ಜ. 25 ರಂದು ವಿಚಾರಣೆಗೆ ಬರುತ್ತಿದೆ. ಅಲ್ಲಿ ಏನು ಆಗುತ್ತದೋ ನೋಡೋಣ. ಮೇಕೆದಾಟು ಯೋಜನೆ ಕುರಿತಂತೆ ಎರಡು ರಾಷ್ಟ್ರೀಯ ಪಕ್ಷಗಳು ಜಾಹೀರಾತು ಕೊಟ್ಟಿರುವುದನ್ನು ಗಮನಿಸಿದ್ದೇನೆ. ಆ ಬಗ್ಗೆ ಚರ್ಚಿಸುವುದಿಲ್ಲ ಎಂದು ಹೇಳಿದರು.
ಸರ್ಕಾರಕ್ಕೆ ಗೌಡರ ಸಲಹೆ: ರಾಜ್ಯದಲ್ಲಿ ಕೋವಿಡ್ ಹೆಚ್ಚಳ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೌಡರು, ವಿಶ್ವ, ದೇಶ ಹಾಗೂ ನಮ್ಮ ರಾಜ್ಯದಲ್ಲೂ ಕೊರೊನಾ ಹೆಚ್ಚಳ ಆಗ್ತಿದೆ. ತಜ್ಞರು ಈಗಾಗಲೇ ಅನೇಕ ಸಲಹೆಗಳನ್ನು ನೀಡಿದ್ದಾರೆ. ಕೇರಳ, ಅಮೆರಿಕ, ಲಂಡನ್ ಸೇರಿದಂತೆ ಎಲ್ಲಾ ಕಡೆ ಕೋವಿಡ್ ಮತ್ತು ಒಮಿಕ್ರಾನ್ ವೇಗವಾಗಿ ಹರಡುತ್ತಿದ್ದು, ಈ ರೋಗ ಅತ್ಯಂತ ವೇಗವಾಗಿ ಹರಡುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಭೆ ಮಾಡುತ್ತಿದ್ದಾರೆ. ಪ್ರಧಾನಿ ಅವರು ತಮ್ಮ ಕೈಲಾದ ಕೆಲಸ ಮಾಡ್ತಿದ್ದಾರೆ. ತಜ್ಞರು ಹೇಳಿದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ದೇವೇಗೌಡರು ಸಲಹೆ ನೀಡಿದರು.
ಓದಿ: ಕೋವಿಡ್ ಸಂಬಂಧ ಪ್ರಧಾನಿ ವರ್ಚುವಲ್ ಸಭೆ: ಸಿಎಂ ಬೊಮ್ಮಾಯಿ ಭಾಗಿ