ಬೆಂಗಳೂರು: ಜನರನ್ನು ಎತ್ತಿ ಕಟ್ಟಿ ವೈಷಮ್ಯ ಹರಡುವ ಕಾರ್ಯವನ್ನು ಭಾರತೀಯ ಜನತಾ ಪಕ್ಷ(ಬಿಜೆಪಿ) ನಿಲ್ಲಿಸಬೇಕು ಎಂದು ಮಾಜಿ ಸಚಿವ ಡಾ. ಹೆಚ್. ಸಿ ಮಹದೇವಪ್ಪ ಒತ್ತಾಯಿಸಿದ್ದಾರೆ.
ಬೆಂಗಳೂರಿನ ಶಿವಾನಂದ ವೃತ್ತ ಸಮೀಪವಿರುವ ಸಿದ್ದರಾಮಯ್ಯ ಸರ್ಕಾರಿ ನಿವಾಸ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ-ಆರ್.ಎಸ್.ಎಸ್ ಜನಜಾಗೃತಿ ಮಾಡಿದ ಯಾವ ಇತಿಹಾಸವೂ ಇಲ್ಲ. ಜನರನ್ನು ಎತ್ತಿಕಟ್ಟಿ ವೈಷಮ್ಯ ಹರಡುವುದನ್ನು ಬಿಜೆಪಿ ಮೊದಲು ನಿಲ್ಲಿಸಿದರೆ ಅದೇ ದೊಡ್ಡ ಜನಜಾಗೃತಿ ಎಂದಿದ್ದಾರೆ.
ಮಡಿಕೇರಿಗೆ ಸಿದ್ದರಾಮಯ್ಯ ಏಕಾಏಕಿ ಹೋಗಿಲ್ಲ. ಜಿಲ್ಲಾಡಳಿತಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮಾಹಿತಿ ಕೊಟ್ಟೇ ಹೋಗಿದ್ದರು. ಸಂಪತ್ ಕಾಂಗ್ರೆಸ್ ಕಾರ್ಯಕರ್ತನಾದರೆ ಶಾಸಕ ಅಪ್ಪಚ್ಚು ರಂಜನ್ ಅವರು ಯಾಕೆ ಬಿಡಿಸಿಕೊಂಡು ಬಂದರು? ಕಾಂಗ್ರೆಸ್ ಕಾರ್ಯಕರ್ತನಾದರೆ ಅವನನ್ನು ಬಿಡಿಸಲು ಅಪ್ಪಚ್ಚು ರಂಜನ್ಗೆ ಯಾಕೆ ಆಸಕ್ತಿ? ಯಾಕೆ ಅವನಿಗೆ ಟೆಂಡರ್ಗಳನ್ನೆಲ್ಲ ಕೊಟ್ಟಿದ್ದರು?. ಲಕ್ಷಾಂತರ, ಕೋಟ್ಯಾಂತರ ಕಾರ್ಯಕರ್ತರಿಗೆ ಇಲ್ಲದ ಆಕ್ರೋಶ ಇವನೊಬ್ಬನಿಗೆ ಮಾತ್ರ ಯಾಕೆ ಬಂತು?. ಗೊತ್ತಿದ್ದರೂ ಸರ್ಕಾರ ಸುಮ್ಮನೆ ಯಾಕೆ ಕೂತಿದೆ? ಎಂದು ಪ್ರಶ್ನಿಸಿದರು.
ಕಾಂಟ್ರಾಕ್ಟ್ ಅವನಿಗೆ ಯಾಕೆ ಕೊಡ್ತಾರೆ: ಮಡಿಕೇರಿ ಚಲೋ ವಿಚಾರ ಮಾತನಾಡಿ, ಸಿದ್ದರಾಮಯ್ಯ ಅವರ ಪ್ರವಾಸ ಇತ್ತು. ಜಿಲ್ಲಾಡಳಿತಕ್ಕೂ ಪ್ರವಾಸದ ಮಾಹಿತಿ ಇತ್ತು. ಪ್ರತಿಪಕ್ಷದ ನಾಯಕರು ಶ್ಯಾಡೋ ಆಫ್ ಸಿಎಂ ಇದ್ದಂಗೆ. ನೆರೆ ಬಗ್ಗೆ ಅಧ್ಯಯನ ಮಾಡಲು ಹೊರಟಿದ್ರು. ಸರ್ಕಾರದಿಂದ ಪರಿಹಾರ ಕೊಡಿಸಲು ಹೊರಟಿದ್ರು. ಹೀಗಾಗಿ ಪೊಲೀಸ್, ಗುಪ್ತಚರ ಸರಿಯಾದ ಭದ್ರತೆ ಮಾಡಬೇಕಿತ್ತು. ಅದು ಪೊಲೀಸ್ ಕರ್ತವ್ಯ. ಇಂತಹ ಸಂದರ್ಭದಲ್ಲಿ ಮೊಟ್ಟೆ ಎಸೆದಿದ್ದಾರೆ. ಇದು ಹೇಡಿಗಳ ಕೆಲಸ. ಈಗ ಕಾಂಗ್ರೆಸ್ ಕಾರ್ಯಕರ್ತರು ಅಂತಿದ್ದಾರೆ. ಹಾಗಾದ್ರೆ ಶಾಸಕ ಅಪ್ಪಚ್ಚು ರಂಜನ್ ಯಾಕೆ ಬಿಡಿಸಿಕೊಂಡು ಬಂದ್ರು. ಶಾಸಕರು ಕಾಂಟ್ರಾಕ್ಟ್ ಅವನಿಗೆ ಯಾಕೆ ಕೊಡ್ತಾರೆ ಎಂದು ಹರಿಹಾಯ್ದರು.
ಮಡಿಕೇರಿ ಚಲೋ ಕಾರ್ಯಕ್ರಮ: ಸಂಪತ್ ಕಾಂಗ್ರೆಸ್ ಕಾರ್ಯಕರ್ತ ಎಂಬ ವಿಚಾರ ಕುರಿತು ಮಾತನಾಡಿ, ಇಷ್ಟು ಕಾಂಗ್ರೆಸ್ ಕಾರ್ಯಕರ್ತರು ಇದ್ದಾರೆ. ಅವನಿಗೆ ಮಾತ್ರ ಯಾಕೆ ಆಕ್ರೋಶ ಬಂತು. ಇದರಲ್ಲಿ ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಸಿದ್ದರಾಮಯ್ಯ ಕಂಡು ಬಿಜೆಪಿಗೆ ಭಯ ಶುರುವಾಗಿದೆ. ಸಿದ್ದರಾಮೋತ್ಸವ ಬಳಿಕ ಯಡಿಯೂರಪ್ಪ ಅವರಿಗೆ ಮತ್ತೆ ಉನ್ನತ ಸ್ಥಾನ ಕೊಟ್ಟಿದ್ದಾರೆ. ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಸಿಎಂ ಸ್ಥಾನದಿಂದ ಇಳಿಸಿದ್ರು. ಈಗ ಮಡಿಕೇರಿ ಚಲೋ ಕಾರ್ಯಕ್ರಮ ಹಾಕಿಕೊಂಡಿದ್ದೇವೆ ಎಂದು ಹೇಳಿದರು.
ಬಿಜೆಪಿ ವಿರುದ್ಧ ಮಹದೇವಪ್ಪ ವಾಗ್ದಾಳಿ: ಬಿಜೆಪಿ ಜನ ಜಾಗೃತಿ ಮಾಡಿದ ಯಾವ ಇತಿಹಾಸವೂ ಇಲ್ಲ. ಬಿಜೆಪಿ ಹೇಳುವುದು ಬರಿ ಸುಳ್ಳು. ಸುಳ್ಳನ್ನೇ ಸತ್ಯ ಮಾಡುವುದೇ ಕೆಲಸ. ದ್ವೇಷ, ವೈಷಮ್ಯ ಬೆಳೆಸುವುದೇ ಬಿಜೆಪಿ ಎಂದು ಬಿಜೆಪಿ ವಿರುದ್ಧ ಮಹದೇವಪ್ಪ ವಾಗ್ದಾಳಿ ನಡೆಸಿದರು.
ಚಿಕ್ಕಬಳ್ಳಾಪುರಕ್ಕೆ ತೆರಳಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪೂರ್ವ ನಿಯೋಜಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಚಿಕ್ಕಬಳ್ಳಾಪುರಕ್ಕೆ ಪ್ರಯಾಣ ಬೆಳೆಸಿದರು. ಮೊಟ್ಟೆ ಎಸೆದ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತ ಎಂಬ ವಿಚಾರಕ್ಕೆ ಕೇಳಿದ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡದೇ ತೆರಳಿದರು.
ಓದಿ: ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹಿಂದೂ ಸಂಘಟನೆಗಳ ತಯಾರಿ..