ಬೆಂಗಳೂರು: ನಾನು ಎಲ್ಲರಿಗಾಗಿ, ಎಲ್ಲರೂ ನನಗಾಗಿ ಎಂಬುದೇ ಸಹಕಾರಿ ಕ್ಷೇತ್ರದ ಮೂಲ ಮಂತ್ರವಾಗಿದೆ. ಪ್ರತಿ ಹಳ್ಳಿಗೂ ಸಹಕಾರ ಕ್ಷೇತ್ರವನ್ನು ತಲುಪಿಸುವ ಕೆಲಸ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನೂತನ ಅಧ್ಯಕ್ಷ ಮಾಜಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.
ಮಹಾಮಂಡಲದ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ನಡೆದ ಚುನಾವಣೆಗೆ ಇವರಿಬ್ಬರೇ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರಿಂದ ಚುನಾವಣಾಧಿಕಾರಿ ಮನೋಜ್ಚಂದ್ರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದ್ದಾರೆ.
ರಾಜ್ಯದಲ್ಲಿರುವ ಸಹಕಾರಿ ಸಂಘಗಳ ಸ್ಥಿತಿಗತಿಗಳ ಬಗ್ಗೆ ಸರ್ವೆ ಮಾಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಕೋವಿಡ್ ನಂತರ ಸಹಕಾರ ಸಂಘಗಳು ಯಾವ ಹಂತದಲ್ಲಿವೆ ಎಂಬುದನ್ನು ಸರ್ವೆ ಮಾಡಿಸಲಾಗುವುದು. ಯಾವ ಸಂಘಗಳು ನಷ್ಟದಲ್ಲಿವೆ. ಯಾವ ಸಂಘಗಳು ಲಾಭದಲ್ಲಿವೆ ಎಂಬುದು ಈ ಮೂಲಕ ಗೊತ್ತಾಗಲಿದೆ ಎಂದರು.
ಸಹಕಾರಿ ಸಂಘಗಳ ವಾಸ್ತವ ಸ್ಥಿತಿಗತಿಯನ್ನು ವರದಿ ಸಲ್ಲಿಸಿ ಅವುಗಳ ಅಭಿವೃದ್ಧಿಗೆ ಶ್ರಮಿಸುವುದು ನಮ್ಮ ಉದ್ದೇಶ. ಸಹಕಾರ ಕ್ಷೇತ್ರದ ಅಭಿವೃದ್ದಿಯಾಗಬೇಕು ಹಾಗೂ ಆ ಕ್ಷೇತ್ರ ಉಳಿಯಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ಸಹಕಾರ ಕ್ಷೇತ್ರ ವ್ಯಾಪಿಸಿದೆ. ಮಹಾಮಂಡಲ ಸಹಕಾರ ಕ್ಷೇತ್ರದ ಮಾತೃ ಸಂಸ್ಥೆ ತಮ್ಮನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುವುದಾಗಿ ಅವರು ತಿಳಿಸಿದರು.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಜಿ.ಟಿ.ದೇವೇಗೌಡ ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಅವರಿಗೆ ಒಳ್ಳೆಯ ಆಡಳಿತ ಅನುಭವವಿದೆ. ಮುಂದಿನ 5 ವರ್ಷದಲ್ಲಿ ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಲಿದ್ದಾರೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.