ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸೇವೆ ಪ್ರಯಾಣಿಕರ ಸ್ನೇಹಿಯಾಗಿದ್ದು, ಇದೀಗ ಮತ್ತೊಂದು ಮೈಲುಗಲ್ಲು ಸಾಧಿಸಲು ಮುಂದಾಗ್ತಿದೆ. ನಗರದ ಜನರ ಬಹುದಿನಗಳ ಕನಸು ನನಸಾಗುತ್ತಿದೆ. ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿವರೆಗಿನ ಒಟ್ಟು 7.5 ಕಿ.ಮಿ. ಉದ್ದದ 6 ಎತ್ತರಿಸಿದ ನಿಲ್ದಾಣಗಳಿರುವ ಮಾರ್ಗವು ನಾಳೆ ಉದ್ಘಾಟನೆಯಾಗಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ.
1,560 ಕೋಟಿ ರೂ. ವೆಚ್ಚದಲ್ಲಿ ಈ ಮಾರ್ಗ ನಿರ್ಮಾಣಗೊಂಡಿದ್ದು, ಭೂ ಸ್ವಾದೀನಕ್ಕಾಗಿ 360 ಕೋಟಿ ರೂ. ವೆಚ್ಚವಾಗಿದೆ. ಈ ಮಾರ್ಗದಲ್ಲಿ ಮೆಟ್ರೋ ಸೇವೆ ಆರಂಭವಾದರೆ ದಿನಕ್ಕೆ 75 ಸಾವಿರ ಪ್ರಯಾಣಿಕರು ಸಂಚರಿಸುವ ನಿರೀಕ್ಷೆ ಇದೆ. ಪೂರ್ವ-ಪಶ್ಚಿಮ ಕಾರಿಡರ್ ಮಾರ್ಗದ ಉದ್ದ 18.1 ಕಿ.ಮಿ.ಯಷ್ಟು ಹೆಚ್ಚಳವಾಗಿದೆ. ನಮ್ಮ ಮೆಟ್ರೋ ಯೋಜನೆಯ ಹಂತ-2 ಅಡಿ ನಾಯಂಡಹಳ್ಳಿಯಿಂದ ಕೆಂಗೇರಿಯವರೆಗೆ ರೀಚ್ 2ರ ವಿಸ್ತರಣಾ ಕಾಮಗಾರಿ ಇದಾಗಿದೆ.
ಪಾರ್ಕಿಂಗ್ ಸೌಲಭ್ಯ:
ಮೈಸೂರು ರಸ್ತೆ ನಿಲ್ದಾಣ, ನಾಯಂಡಹಳ್ಳಿ, ರಾಜರಾಜೇಶ್ವರಿನಗರ, ಜ್ಞಾನಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್ ಟರ್ಮಿನಲ್ ಹಾಗೂ ಕೆಂಗೇರಿ ನಿಲ್ದಾಣಗಳಿವೆ. ಇದರಲ್ಲಿ ನಾಯಂಡಹಳ್ಳಿ, ರಾಜರಾಜೇಶ್ವರಿನಗರ, ಜ್ಞಾನಭಾರತಿ ನಿಲ್ದಾಣಗಳಲ್ಲಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಕೆಂಗೇರಿ ಬಸ್ ಟರ್ಮಿನಲ್ ನಿಲ್ದಾಣದಲ್ಲಿ ಎರಡು ಅಂತಸ್ತಿನ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಕೆಂಗೇರಿ ಬಸ್ ಟರ್ಮಿನಲ್ ನಿಲ್ದಾಣ ಹೊರತುಪಡಿಸಿ ಉಳಿದ ಎಲ್ಲಾ ನಿಲ್ದಾಣಗಳನ್ನು ರಸ್ತೆದಾಟಲು ಪಾದಚಾರಿ ಮಾರ್ಗ ಕಲ್ಪಿಸಲಾಗಿದೆ.
ಇದೀಗ ನೇರಳೆ ಮಾರ್ಗ ಬೈಯಪ್ಪನಹಳ್ಳಿ-ಕೆಂಗೇರಿವರೆಗೆ ಮೆಟ್ರೋ ಸಂಚಾರ ಇರಲಿದ್ದು, ಬೈಯಪ್ಪನ ಹಳ್ಳಿಯಿಂದ ಕೆಂಗೇರಿಗೆ ಪ್ರಯಾಣಿಸಲು 56 ರೂ. ದರ ನಿಗದಿಪಡಿಸಲಾಗಿದೆ. ಮೈಸೂರು ರಸ್ತೆಯಿಂದ ಕೆಂಗೇರಿಗೆ 15 ನಿಮಿಷದ ಪ್ರಯಾಣ ಇರಲಿದೆ. ಮೆಟ್ರೋ ಜಾಲದ ಅತಿ ಉದ್ದದ ಮಾರ್ಗ, ಕೆಂಗೇರಿಯಿಂದ ಸಿಲ್ಕ್ ಇನ್ಸ್ಟಿಟ್ಯೂಟ್ವರೆಗೆ 60 ರೂಪಾಯಿ ದರವನ್ನು ನಿಗದಿಪಡಿಸಲಾಗಿದೆ.
ಮೆಟ್ರೋ ಫೀಡರ್ ಆರಂಭಿಸಿದ ಬಿಎಂಟಿಸಿ
ಮೆಟ್ರೋ ರೈಲು ನಿಗಮವು ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗಿನ ಸೇವೆಯನ್ನು ಆಗಸ್ಟ್ 29ರಿಂದ ಪ್ರಾರಂಭಿಸುತ್ತಿದೆ. ಹೀಗಾಗಿ ಪ್ರಯಾಣಿಕರ ಮೆಟ್ರೋ ಫೀಡರ್ ಸಾರಿಗೆ ಸೇವೆಯು ಆಗಸ್ಟ್ 30 ಲಭ್ಯವಾಗಲಿದೆ. ಮೈಸೂರು ರಸ್ತೆ ಭಾಗದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬೆಳಗ್ಗೆ 7ರಿಂದ 9 ಗಂಟೆವರೆಗೆ ಬಿಎಂಟಿಸಿಯು 35 ಬಸ್ಗಳಿಂದ 9 ಮಾರ್ಗಗಳಲ್ಲಿ 499 ಸುತ್ತುವಳಿಗಳೊಂದಿಗೆ ಮೆಟ್ರೋ ಫೀಡರ್ ಸೇವೆಗಳನ್ನು ಪ್ರಾರಂಭಿಸುತ್ತಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ಮತ್ತು ಬೇಡಿಕೆ ಗಮನದಲ್ಲಿಟ್ಟುಕೊಂಡು, ಮೆಟ್ರೋ ಫೀಡರ್ ಸೇವೆ ನೀಡಲಾಗುತ್ತಿದೆ.
ಫೀಡರ್ ಬಸ್ ಸೇವೆ ವಿವರ:
-ರಾಜರಾಜೇಶ್ವರಿನಗರ ಗೇಟ್ನಿಂದ ರಾಜರಾಜೇಶ್ವರಿನಗರದ ಕಡೆಗೆ : 22 ಮಾರ್ಗಗಳಲ್ಲಿ 43 ಬಸ್ಗಳಿಂದ 230 ಸುತ್ತು ಸೇವೆ
-ಬೆಂಗಳೂರು ವಿಶ್ವವಿದ್ಯಾಲಯ ಗ್ರೂಪ್ನಿಂದ ಬೆಂಗಳೂರು ವಿಶ್ವವಿದ್ಯಾಲಯದ ಕಡೆಗೆ : 14 ಮಾರ್ಗಗಳಲ್ಲಿ 43 ಬಸ್ಗಳಿಂದ 264 ಸುತ್ತು ಸೇವೆ
-ಕೆಂಗೇರಿ ಟಿಟಿಎಂಸಿಯಿಂದ ಉತ್ತರಹಳ್ಳಿ, ಕೆಂಗೇರಿ ಉಪನಗರದ, ಕುಂಬಳಗೊಡು ಕಡೆಗೆ ಫೀಡರ್ ಬಸ್ ಸೇವೆ
ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಮತ್ತೊಂದು ವಿಘ್ನ.. ಕರ್ನಾಟಕದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ತಮಿಳುನಾಡು