ಬೆಂಗಳೂರು: ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸುವವರಿಗೆ ನಿರಾಕರಣೆ ಮಾಡುವ ಬದಲು ಮಂಜೂರು ಮಾಡಿ ತನಿಖೆಗೆ ಸಹಕರಿಸಲು ಷರತ್ತುಗಳನ್ನು ವಿಧಿಸುವುದು ಸೂಕ್ತ ಎಂದು ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ಮಹಮ್ಮದ್ ಅಸ್ಮತುಲ್ಲಾ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ರಾಚಯ್ಯ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿ, ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸಿದ ಬಳಿಕ, ಅರ್ಜಿದಾರರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಸೂಕ್ತ ಆಧಾರಗಳಿಲ್ಲ. ಆದರೂ, ಅರ್ಜಿದಾರರು ಮುಖ್ಯಸ್ಥರಾಗಿರುವ ಸಂಸ್ಥೆಗೆ ದೊಡ್ಡಮಟ್ಟದ ಹಣ ವರ್ಗಾವಣೆಯಾಗಿದೆ. ಈ ಕುರಿತಂತೆ ತನಿಖೆ ನಡೆಸಬೇಕಾಗಿದೆ. ಹೀಗಾಗಿ ಅರ್ಜಿದಾರರಿಗೆ ಅಗತ್ಯ ಷರತ್ತುಗಳನ್ನು ವಿಧಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದಲ್ಲಿ ವಿಚಾರಣೆ ಹಾಗೂ ತನಿಖೆಗೂ ಸಹಕಾರಿಯಾಗಲಿದೆ ಎಂದು ನ್ಯಾಯಪೀಠ ತಿಳಿಸಿದೆ.
ಜೊತೆಗೆ, ನಿರೀಕ್ಷಣಾ ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ನಿಗದಿತ ಅವಧಿಯಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸುವಂತೆ ನಿರ್ದೇಶನ ನೀಡಬೇಕು. ಆಗ ತನಿಖೆಯ ಉದ್ದೇಶವೂ ಈಡೇರಲಿದೆ ಎಂದು ನ್ಯಾಯಪೀಠ ಹೇಳಿದೆ.
ಅಲ್ಲದೆ ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ಮುಂದಿನ 15 ದಿನಗಳಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. 5 ಲಕ್ಷ ರೂ.ಗಳ ಬಾಂಡ್, ಇಬ್ಬರು ಶ್ಯೂರಿಟಿ, ಸಾಕ್ಷ್ಯಗಳನ್ನು ನಾಶ ಮಾಡಬಾರದು ಹಾಗೂ ಪ್ರತಿ ತಿಂಗಳಲ್ಲಿ ಮೊದಲ ಶನಿವಾರ ತನಿಖೆ ನಡೆಸುತ್ತಿರುವ ಪೊಲೀಸ್ ಠಾಣೆಗೆ ಭೇಟಿ ನೀಡಿ ಸಹಿ ಹಾಕಬೇಕು ಎಂದು ಷರತ್ತುಗಳನ್ನು ವಿಧಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರು ಸಿಜಿಆರ್‌ಸಿಎಂಎಲ್ ಕಂಪನಿಯ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾಗಿದ್ದರು. ಹೈದರಾಬಾದ್ ಮೂಲದ ವಿನ್ವೆ ಅಗ್ರಿ ಟ್ರೇಡರ್ಸ್ ಸಂಸ್ಥೆಯಿಂದ 17 ಕೋಟಿ ರೂ.ಗಳನ್ನು ಅವರ ಖಾತೆಗೆ ಸ್ವೀಕರಿಸಿದ್ದರು. ಆದರೆ, ಈ ಮೊತ್ತವನ್ನು ರೈತರಿಗೆ ಸಾಲ ಮಂಜೂರು ಮಾಡುವುದಾಗಿ ನಂಬಿಸಿ ಕಂಪನಿಗೆ ಪಡೆದುಕೊಂಡಿದ್ದರು ಎಂದು ಆರೋಪಿಸಲಾಗಿತ್ತು.
ಪ್ರಕರಣದಲ್ಲಿ ಇತರೆ ಆರೋಪಿಗಳು ರಾಷ್ಟ್ರೀಕೃತ ಬ್ಯಾಂಕ್‌ನ ಸಿಬ್ಬಂದಿಯಾಗಿದ್ದರು. ಐದನೇ ಆರೋಪಿಯು ದೂರುದಾರರು ಸೇರಿದಂತೆ ಸುಮಾರು 35 ಮಂದಿಯನ್ನು ಸಂಪರ್ಕಿಸಿ ರಾಷ್ಟ್ರೀಕೃತ ಬ್ಯಾಂಕ್‌ನಿಂದ 5 ಲಕ್ಷ ರೂ.ಗಳ ಸಾಲ ಕೊಡಿಸಲಾಗುವುದು. ಈ 5 ಲಕ್ಷದಲ್ಲಿ ಎರಡು ಲಕ್ಷ ರೂ.ಗಳು ಸಬ್ಸಿಡಿಯಾಗಿರಲಿದೆ ಎಂದು ಭರವಸೆ ನೀಡಿದ್ದರು.
ಇದನ್ನು ನಂಬಿದ್ದ ರೈತರು, ತಮ್ಮ ಜಮೀನಿನ ದಾಖಲೆ, ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಮತ್ತು 9 ಖಾಲಿ ಚೆಕ್‌ಗಳನ್ನು ಆರೋಪಿಗಳಿಗೆ ನೀಡಿದ್ದರು. ಇದಾದ ಬಳಿಕ ಎಲ್ಲ ರೈತರಿಗೆ 50 ಸಾವಿರದಿಂದ ಒಂದು ಲಕ್ಷದವರೆಗೂ ಹಣ ಪಡೆದುಕೊಂಡಿದ್ದರು. ಇದಾದ ಬಳಿಕ ದೂರುದಾರರು ಸೇರಿದಂತೆ ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್‌ನಿಂದ 42ರಿಂದ 48 ಲಕ್ಷ ರೂ.ವರೆಗೂ ಸಾಲ ಪಡೆದುಕೊಂಡಿದ್ದು, ಹಿಂದಿರುಗಿಸುವಂತೆ ನೋಟಿಸ್ ಜಾರಿ ಮಾಡಲಾಗಿತ್ತು.
ಈ ನಡುವೆ ರಾಷ್ಟ್ರೀಕೃತ ಬ್ಯಾಂಕ್‌ನಿಂದ ಅರ್ಜಿದಾರರ ಕಂಪನಿಗೆ 17 ಕೋಟಿ ರೂ.ಗಳ ವರ್ಗಾವಣೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದರು. ಈ ಸಂಬಂಧ ಪೊಲೀಸರು ಐಪಿಸಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರ ಸಿಜಿಆರ್‌ಸಿಎಂಎಲ್ ಕಂಪನಿಯ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರು, ಅವರ ವಿರುದ್ಧದ ಆರೋಪಕ್ಕೆ ಯಾವುದೇ ಆಧಾರವಲ್ಲ. ಸಾಲ ಪಡೆಯುವುದು ಮತ್ತು ಹಣದ ವರ್ಗಾವಣೆಗಾಗಿ ರಾಷ್ಟ್ರೀಕೃತ ಬ್ಯಾಂಕ್ಗೆ ಭೇಟಿಯೇ ನೀಡಿಲ್ಲ ಎಂದು ವಾದ ಮಂಡಿಸಿದ್ದರು.
ಅಲ್ಲದೆ, ಅರ್ಜಿದಾರರನ್ನು ಇತರೆ ಆರೋಪಿಗಳ ಹೇಳಿಕೆಗಳ ಆಧಾರದಲ್ಲಿ ಪೊಲೀಸರು ಆರೋಪಿಯನ್ನಾಗಿಸಿಕೊಂಡಿದ್ದಾರೆ. ಅರ್ಜಿದಾರರನ್ನು ಎಫ್‌ಐಆರ್‌ನಲ್ಲಿ ಆರೋಪಿಯನ್ನಾಗಿ ಸೇರ್ಪಡೆ ಮಾಡಿಲ್ಲ. ಅಲ್ಲದೆ, ಆರ್ಜಿದಾರರ ವಿರುದ್ಧದ ಆರೋಪ ಜೀವಾವಧಿ ಶಿಕ್ಷೆಗೆ ಗುರುಪಡಿಸುವಂತಹ ಆರೋಪಗಳಿಲ್ಲ. ನ್ಯಾಯಾಲಯ ವಿಧಿಸುವ ಎಲ್ಲ ಷರತ್ತುಗಳನ್ನು ಪಾಲನೆ ಮಾಡಲು ಸಿದ್ಧರಿದ್ದಾರೆ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಕೋರಿದ್ದರು.
ಅಲ್ಲದೆ, ಅರ್ಜಿದಾರರಿಗೆ ರಾಷ್ಟ್ರೀಕೃತ ಬ್ಯಾಂಕ್‌ನಿಂದ ಯಾವುದೇ ಹಣ ವರ್ಗಾವಣೆಯಾಗಿಲ್ಲ. ಆದರೆ, ವಿನ್ವೆ ಅಗ್ರಿ ಟ್ರೇಡರ್ಸ್ ಕಂಪನಿಯಿಂದ ಬಂದಿದೆ. ಆದರೆ, ಅರ್ಜಿದಾರರ ಘನತೆಗೆ ಧಕ್ಕೆ ಮಾಡುವುದಕ್ಕಾಗಿ ಈ ರೀತಿಯ ಸುಳ್ಳು ದೂರು ದಾಖಲಿಸಲಾಗಿದೆ. ಅವರನ್ನು ಪೊಲೀಸರು ಬಂಧಿಸಿದಲ್ಲಿ ಸಮಾಜದಲ್ಲಿ ಅವರಿಗಿರುವ ಗೌರವ ಹಾಳಾಗಲಿದೆ ಎಂದು ಕೋರಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರಿ ವಕೀಲರು, ಆರೋಪಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧ ಅಗತ್ಯ ಸಾಕ್ಷ್ಯಾಧಾರಗಳಿವೆ. ಅಲ್ಲದೆ, 17 ಕೋಟಿ ರೂ.ಗಳ ಪ್ರಕರಣವಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ನ ಸಿಬ್ಬಂದಿಯೂ ಪ್ರಕರಣದಲ್ಲಿ ಬಾಗಿಯಾಗಿದ್ದಾರೆ. ಹೀಗಾಗಿ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿದ್ದರು.
ಇದನ್ನೂ ಓದಿ: ಕೆಎಸ್‌ಪಿಸಿಬಿ ಅಧ್ಯಕ್ಷ ಸ್ಥಾನ ಬದಲಾವಣೆ ಆದೇಶ ಅಮಾನತ್ತಿನಲ್ಲಿಟ್ಟರುವ ಹೈಕೋರ್ಟ್