ಬೆಂಗಳೂರು: ನೀವೂ ಯಾವುದಾದರೂ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಆಗಿದ್ದೀರಾ?, ನಿಮ್ಮ ವಾಹನಗಳ ನಂಬರ್ ಪ್ಲೇಟ್ ಮೇಲೆ ನಿಮ್ಮ ಹುದ್ದೆಯನ್ನು ಹಾಕಿದ್ದೀರಾ?, ಹಾಗಿದ್ದರೆ ಇದನ್ನು ಈಗಲೇ ತೆಗೆದುಬಿಡಿ. ಇಲ್ಲವೆಂದರೆ ದಂಡ ತೆರಬೇಕಾದೀತು. ಇನ್ನು ಮುಂದೆ ತಮ್ಮ ತಮ್ಮ ವಾಹನದ ಮೇಲೆ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಎಂದೆಲ್ಲ ನಾಮಫಲಕ ಹಾಕುವುದನ್ನು ತಡೆಯಲು ಸರ್ಕಾರ ಮುಂದಾಗಿದೆ.
ಕಾರಿನ ನಂಬರ್‌ಪ್ಲೇಟ್ ಮೇಲೆ ಅಧ್ಯಕ್ಷ, ಕಾರ್ಯದರ್ಶಿ, ಸಂಘಟನೆ ಹೆಸರು, ಸ್ಟಾರ್ ನಟರ ಹೆಸರು ಹಾಕಿದ್ದಲ್ಲಿ ಪ್ರಕರಣ ದಾಖಲಿಸಲಾಗುತ್ತದೆ. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯಿಂದಲೇ ಆದೇಶ ಹೊರಡಿಸಲಾಗಿದೆ. ಇದೇ ತಿಂಗಳ ಮೇ 24ರೊಳಗೆ ಎಲ್ಲಾ ನಾಮಫಲಕ ತೆರವು ಮಾಡಿ ವಾಹನವನ್ನು ರಸ್ತೆಗಿಳಿಸಬೇಕು. ನಿಯಮದ ಪ್ರಕಾರ, ವಾಹನದ ನಂಬರ್‌ಪ್ಲೇಟ್ ಮೇಲೆ ಯಾವುದೇ ಹೆಸರು, ಹುದ್ದೆಯನ್ನು ಹಾಕುವಂತಿಲ್ಲ.ಆದೇಶ ಪಾಲನೆಯ ಗಡುವಿನ ಬಳಿಕ ನಾಮಫಲಕ ತೆರವುಗೊಳಿಸದಿದ್ರೆ ಅಂತಹ ವಾಹನ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಆದೇಶ ಹೊರಡಿಸಿದ್ದಾರೆ.ಯಾವುದೇ ಖಾಸಗಿ ವಾಹನಗಳ ಮಾಲೀಕರುಗಳು ತಮ್ಮ ವಾಹನಗಳ ಮೇಲೆ ಸರ್ಕಾರಿ ಲಾಂಛನ ಅಥವಾ ಹೆಸರುಗಳನ್ನು ಅಳವಡಿಸಬೇಕಾದಲ್ಲಿ ಸರ್ಕಾರದಿಂದ ಅನುಮತಿ ಪಡೆದುಕೊಳ್ಳಬೇಕು ಹೇಳಲಾಗಿದೆ.
![govt-orders-remove-the-nameplates-from-vehicles](https://etvbharatimages.akamaized.net/etvbharat/prod-images/15354330_yyy.jpg)
ವಾಹನಗಳ ನೋಂದಣಿ ಫಲಕಗಳ ಮೇಲೆ ಅನಧಿಕೃತವಾಗಿ ರಾಷ್ಟ್ರೀಯ ಹಕ್ಕುಗಳ ಆಯೋಗ/ ರಾಜ್ಯ ಮಾನವ ಹಕ್ಕುಗಳ ಆಯೋಗಗಳ ಹೆಸರುಗಳನ್ನು ಹೋಲುವಂತಹ ರಾಷ್ಟ್ರೀಯ ರಾಜ್ಯ ಮಾನವ ಹಕ್ಕುಗಳ ಒಕ್ಕೂಟ/ ಸಂಸ್ಥೆ ಇತ್ಯಾದಿ ಹೆಸರುಗಳನ್ನು, ಚಿಕ್ಕ ಲಾಂಛನಗಳನ್ನು ಹಾಗೂ ಸಂಘ-ಸಂಸ್ಥೆಗಳ ಹೆಸರು ಅಳವಡಿಸಿಕೊಂಡಿರುವುದನ್ನು ತೆರವುಗೊಳಿಸಲು ಸೂಚಿಸಿ ಆದೇಶಿಸಲಾಗಿದೆ.
ಇದನ್ನೂ ಓದಿ: ಸರ್ಕಾರಿ ಇಲಾಖೆಗಳಿಂದಲೇ ಸಾವಿರಾರು ಕೋಟಿ ವಿದ್ಯುತ್ ಶುಲ್ಕ ಬಾಕಿ ; ನೋಟಿಸ್‌ಗೂ ಕ್ಯಾರೇ ಮಾಡ್ತಿಲ್ಲ