ಬೆಂಗಳೂರು: ಬಜೆಟ್‌ನಲ್ಲಿ ಘೋಷಣೆಯಾದ ಇಪ್ಪತ್ತು ದಿನಗಳಲ್ಲಿ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆಗೆ ಸರ್ಕಾರ ಆದೇಶ ಹೊರಡಿಸಿದೆ. 2022-23 ನೆ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೈನುಗಾರಿಕೆ ಚಟುವಟಿಕೆಗಳಿಗೆ ನೆರವಾಗಲು ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪಿಸುವುದಾಗಿ ಪ್ರಕಟಿಸಿದ್ದರು. ಈ ಯೋಜನೆಗೆ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಹಾಗೂ ಜಿಲ್ಲಾ ಹಾಲು ಒಕ್ಕೂಟಗಳು ಒಟ್ಟಾರೆ 260 ಕೋಟಿ ಮತ್ತು ಸರ್ಕಾರ 100 ಕೋಟಿ ಷೇರು ಬಂಡವಾಳ ಒದಗಿಸಲಿದೆ ಎಂದು ಬಜೆಟ್‌ನಲ್ಲಿ ಘೋಷಿಸಿದ್ದರು. ಅದರಂತೆ ಸರ್ಕಾರ ಈ ಆದೇಶ ಹೊರಡಿಸಿದೆ.
ಮುಂಬರುವ ದಿನಗಳಲ್ಲಿ ಈ ಯೋಜನೆಯಡಿ ಪ್ರತಿ ತಾಲೂಕಿಗೆ ಒಂದು ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಭವಿಷ್ಯದಲ್ಲಿ 20 ಸಾವಿರ ಕೋಟಿ ವಾರ್ಷಿಕ ವಹಿವಾಟು ಗುರಿಯನ್ನು ಹೊಂದಲಾಗಿದೆ. ಈ ಮೂಲಕ ಅಪೆಕ್ಸ್ ಬ್ಯಾಂಕ್‌ಗೆ ಸರಿಸಮನಾಗಿ ಇದನ್ನು ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆ ಸರ್ಕಾರದ್ದಾಗಿದೆ.
ಇದರಡಿ ರಾಜ್ಯದ ಹಾಲು ಉತ್ಪಾದಕರಿಗೆ ಸರಳ ಷರತ್ತುಗಳೊಂದಿಗೆ ಹೈನುಗಾರಿಕೆ ಮತ್ತು ಹೈನುಗಾರಿಕೆ ಕಸುಬು ಕೈಗೊಳ್ಳಲು ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಇನ್ನು ಬ್ಯಾಂಕ್‌ಗಳಲ್ಲಿ ಹಾಲು ಉತ್ಪಾದಕರ ಸದಸ್ಯರು 1000 ರೂ. ಮುಖ ಬೆಲೆಯ ಕನಿಷ್ಠ 1 ಷೇರು ಹಾಗೂ ಹಾಲು ಉತ್ಪಾದಕರ ಸಂಘಗಳು ತಲಾ 10 ಸಾವಿರ ರೂ. ಮುಖಬೆಲೆಯ ಕನಿಷ್ಠ 1 ಷೇರು, ಅದೇ ರೀತಿ ರಾಜ್ಯದ ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳು 1 ಕೋಟಿ ಮೊತ್ತದ ಕನಿಷ್ಠ 1 ಷೇರು ಮತ್ತು ಕರ್ನಾಟಕ ಹಾಲು ಮಹಾಮಂಡಳ 50 ಕೋಟಿ ಮೊತ್ತದ ಕನಿಷ್ಠ 1 ಷೇರು ಬಂಡವಾಳ ಒದಗಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಇದನ್ನೂ ಓದಿ: ಸರ್ಕಾರಿ ಶಾಲೆಯಲ್ಲಿ ಹೊಸ ಪ್ರಯೋಗ.. ಮೊದಲ ಬಾರಿಗೆ ಪಾಠ ಮಾಡಲು ಬಂದ ರೋಬೋ ಮೇಡಂ