ಬೆಂಗಳೂರು: 7ನೇ ಪರಿಷ್ಕೃತ ವೇತನ ಹಾಗೂ ಓಪಿಎಸ್ ಜಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ತಮ್ಮ ಪಟ್ಟು ಬಿಗಿಗೊಳಿಸಿದ್ದು, ಮಾರ್ಚ್ 1ರಿಂದ ರಾಜ್ಯಾದ್ಯಂತ ಕರ್ತವ್ಯಕ್ಕೆ ಗೈರಾಗಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಬೆಂಗಳೂರಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತುರ್ತು ಕಾರ್ಯಕಾರಿಣಿ ಸಭೆ ನಡೆಸಿ ಸರ್ಕಾರಕ್ಕೆ ಅಂತಿಮ ಗಡುವು ನೀಡಿದ್ದಾರೆ. ಈ ಸಭೆಯಲ್ಲಿ ಪ್ರಮುಖವಾಗಿ ಏಳನೇ ವೇತನ ಆಯೋಗದ ಮದ್ಯಂತರ ವರದಿ ಪಡೆದು 40% ಫಿಟ್‌ಮೆಂಟ್ ಸೌಲಭ್ಯವನ್ನು ದಿನಾಂಕ 1.07.2022 ರಿಂದ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.
ರಾಜಸ್ತಾನ, ಛತ್ತೀಸಗಡ, ಜಾರ್ಖಂಡ್, ಪಂಜಾಬ್ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಎನ್ ಪಿ ಎಸ್ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆ ಜಾರಿಗೆ ತಂದಿರುವಂತೆ ಕರ್ನಾಟಕ ರಾಜ್ಯದಲ್ಲಿಯೂ ಎನ್ ಪಿ ಎಸ್ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿದ್ದಾರೆ. ಈ ಎರಡು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಏಳು ದಿನಗಳ ನೋಟಿಸ್ ನೀಡಿದ್ದು, ಬೇಡಿಕೆ ಈಡೇರಿಸದಿದ್ದರೆ ಮಾರ್ಚ್ 1 ರಿಂದ ರಾಜ್ಯದ ಸರ್ಕಾರಿ ನೌಕರರು, ನಿಗಮ ಮತ್ತು ಮಂಡಳಿಗಳು ಅನುದಾನಿತ ಸಂಸ್ಥೆಯ ಎಲ್ಲ ನೌಕರರು ಅನಿರ್ದಿಷ್ಟಾವಧಿ ವರೆಗೆ ಕರ್ತವ್ಯಕ್ಕೆ ಗೈರು ಹಾಜರಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬಜೆಟ್ ಅಧಿವೇಶನದಲ್ಲಿ ಏಳನೇ ಪರಿಷ್ಕೃತ ವೇತನ ಜಾರಿ ಹಾಗೂ ಎನ್‌ಪಿಎಸ್ ರದ್ದುಗೊಳಿಸುವ ಬಗ್ಗೆ ಯಾವುದೇ ಘೋಷಣೆ ಮಾಡದಿರುವ ಬಗ್ಗೆ ಸರ್ಕಾರಿ ನೌಕರರು ಬೊಮ್ಮಾಯಿ ಸರ್ಕಾರದ ವಿರುದ್ಧ ಕೆರಳಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ಹೇರಲು ಇದೀಗ ರಾಜ್ಯ ಸರ್ಕಾರಿ ನೌಕರರು ನಿರ್ಧರಿಸಿದ್ದಾರೆ. ರಾಜ್ಯದ ಎನ್ ಪಿ ಎಸ್ ನೌಕರರ ಜೀವನ ನಿರ್ವಹಣೆ ಹಾಗೂ ಸಂಧ್ಯಾ ಕಾಲದ ಬದುಕು ಅತ್ಯಂತ ಕಷ್ಟಕರವಾಗಿರುವುದರಿಂದ ಎನ್.ಪಿ.ಎಸ್. ನೌಕರರನ್ನು ಓಪಿಎಸ್ ವ್ಯಾಪ್ತಿಗೆ ತರುವುದು ಸರ್ಕಾರದ ಜವಾಬ್ದಾರಿ ಎಂದು ಒತ್ತಾಯಿಸಲಾಗಿದೆ.
ರಾಜ್ಯ ಸರ್ಕಾರಿ ನೌಕರರ ಸಂಘ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದ ಬಗ್ಗೆ ಸಿಎಂಗೆ ಪತ್ರ ಬರೆದಿದ್ದಾರೆ. ಸಂಘದ ಚುನಾಯಿತ ಪ್ರತಿನಿಧಿಗಳು ಹಾಗೂ ರಾಜ್ಯದ ಎಲ್ಲ ವೃಂದ ಸಂಘಗಳ ಅಧ್ಯಕ್ಷರು, ಜಿಲ್ಲಾಧ್ಯಕ್ಷರುಗಳು ಸಹಿ ಮಾಡಿದ ಪತ್ರವನ್ನು ಸಿಎಂಗೆ ನೀಡಲಿದ್ದಾರೆ.
ಇದನ್ನೂಓದಿ:ತುರ್ತು ನೆರವಿಗೆ ಸಾರ್ವಜನಿಕರು ಸುರಕ್ಷಾ ಆ್ಯಪ್ ಬಳಸಬಹುದು: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ