ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಶೇ.17 ರಷ್ಟು ವೇತನ ಹೆಚ್ಚಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮತಿ ನೀಡಿದ ಬೆನ್ನಲ್ಲೇ ಆರ್ಥಿಕ ಇಲಾಖೆ ಅಧಿಕಾರಿಗಳನ್ನ ಭೇಟಿ ಮಾಡಿದ ರಾಜ್ಯ ಸರ್ಕಾರಿ ನೌಕರರ ಸಂಘ ವೇತನ ಹೆಚ್ಚಳ ಪ್ರಮಾಣವನ್ನು ಶೇ. 20 ಕ್ಕೆ ಹೆಚ್ಚಿಸುವಂತೆ ಮನವಿ ಮಾಡಿದೆ.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಿ ನೌಕರರ ವೇತನವನ್ನು ಶೇ. 17 ರಷ್ಟು ಹೆಚ್ಚಿಸುವ ನಿರ್ಧಾರ ಕೈಗೊಂಡಿದ್ದು, ತಕ್ಷಣವೇ ಆದೇಶ ಹೊರಡಿಸುವಂತೆ ಸೂಚನೆ ನೀಡಿದ್ದಾರೆ.
ವೇತನ ಹೆಚ್ಚಳ ಆದೇಶ ಹೊರ ಬೀಳುವ ಮುನ್ನ ಆರ್ಥಿಕ ಇಲಾಖೆ ಅಧಿಕಾರಿ ಜಾಫರ್ ಭೇಟಿ ಮಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ವೇತನ ಹೆಚ್ಚಳ ಪ್ರಮಾಣವನ್ನು ಶೇ 17 ರಿಂದ ಶೇ 20ರಷ್ಟು ವೇತನ ಹೆಚ್ಚಿಸಲು ಮನವಿ ಮಾಡಿದರು. ಏಳನೇ ವೇತನ ಆಯೋಗ ಜಾರಿಯಾದಲ್ಲಿ ಸರ್ಕಾರಿ ನೌಕರರಿಗೆ ಶೇ. 30 ರಷ್ಟು ವೇತನ ಹೆಚ್ಚಳವಾಗಲಿದೆ. ಮಧ್ಯಂತರ ವರದಿ ಪಡೆದು ವೇತನ ಹೆಚ್ಚಿಸಿದರೂ ನಮಗೆ ಶೇ.20 ಕ್ಕಿಂತ ಹೆಚ್ಚು ವೇತನ ಹೆಚ್ಚಳವಾಗಲಿದೆ. ಹಾಗಾಗಿ, 2022 ರ ಜುಲೈ 1 ರಿಂದ ಅನ್ವಯವಾಗುವಂತೆ ಶೇ.17 ಕ್ಕೆ ಬದಲಾಗಿ ಶೇ.20 ರಷ್ಟು ವೇತನ ಹೆಚ್ಚಿಸಿ ಆದೇಶ ಹೊರಡಿಸುವಂತೆ ಮನವಿ ಮಾಡಿದರು.
ಇದನ್ನೂ ಓದಿ: ವೇತನ ಪರಿಷ್ಕರಣೆಗೆ ಪಟ್ಟು: ಸಂಧಾನ ಸಭೆ ವಿಫಲ.. ಇಂದಿನಿಂದ ರಾಜ್ಯ ಸರ್ಕಾರಿ ನೌಕರರು ಮುಷ್ಕರ
ಕಳೆದ ರಾತ್ರಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ಕಾರಿ ನೌಕರರ ಜೊತೆ ನಡೆದ ಸಭೆಯಲ್ಲಿಯೂ ಏಳನೇ ವೇತನ ಆಯೋಗದ ಮಧ್ಯಂತರ ವರದಿ ಪಡೆಯಲು ವಿಳಂಬವಾದರೆ ಕನಿಷ್ಠ ಶೇ.20 ರಷ್ಟು ವೇತನ ಹೆಚ್ಚಳ ಮಾಡಬೇಕು ಎನ್ನುವ ಬೇಡಿಕೆಯನ್ನು ಸರ್ಕಾರಿ ನೌಕರರ ಸಂಘ ಮುಖ್ಯಮಂತ್ರಿಗಳ ಮುಂದೆ ಇಟ್ಟಿತ್ತು. ಇಂದು ಬೆಳಗ್ಗೆ ಆರ್.ಟಿ ನಗರದಲ್ಲಿರುವ ಸಿಎಂ ಖಾಸಗಿ ನಿವಾಸಕ್ಕೆ ಭೇಟಿ ನೀಡಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ, ಶೇ.20 ರಷ್ಟು ವೇತನ ಹೆಚ್ಚಳ ಮಾಡುವ ಬೇಡಿಕೆಯನ್ನೇ ಇರಿಸಿದ್ದರು.
ಇದನ್ನೂ ಓದಿ: ಸರ್ಕಾರಿ ನೌಕರರ ಮುಷ್ಕರಕ್ಕೆ ಮಣಿದ ಸರ್ಕಾರ: ಶೇ.17 ರಷ್ಟು ವೇತನ ಹೆಚ್ಚಳಕ್ಕೆ ನಿರ್ಧಾರ
ಏಳನೇ ವೇತನ ಆಯೋಗದ ವರದಿಗೂ ಮುನ್ನ ವೇತನ ಪರಿಷ್ಕರಣೆ ಒತ್ತಡಕ್ಕೆ ಸಿಲುಕಿದ ಮುಖ್ಯಮಂತ್ರಿ ಬಸವರಾಜ ಅಧಿಕೃತ ನಿವಾಸದಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಸಾಧಕ - ಬಾಧಕ ಕುರಿತು ಚರ್ಚಿಸಿ ಸಲಹೆ ಪಡೆದುಕೊಂಡು ಸರ್ಕಾರಿ ನೌಕರರಿಗೆ ಶೇ.17 ರಷ್ಟು ವೇತನ ಹೆಚ್ಚಳ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.