ಬೆಂಗಳೂರು: ಹೈದರಾಬಾದ್ ಅತ್ಯಾಚಾರಿಗಳ ಎನ್‌ಕೌಂಟರ್ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಹೈದರಾಬಾದ್ ನಲ್ಲಿ ಆತ್ಮ ರಕ್ಷಣೆಗಾಗಿ ಪೊಲೀಸರು ಅತ್ಯಾಚಾರಿಗಳ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.
ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಆತ್ಮರಕ್ಷಣೆಗಾಗಿ ಪೊಲೀಸರು ಅತ್ಯಾಚಾರಿಗಳ ಮೇಲೆ ಗುಂಡು ಹಾರಿಸಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ಹೈದರಾಬಾದಿನಲ್ಲಿ ಅತ್ಯಾಚಾರಿಗಳ ಎನ್ ಕೌಂಟರ್ ಸಂಬಂಧ ಕಾನೂನು ಪ್ರಕಾರವೇ ಕ್ರಮ ಕೈಗೊಂಡಿದ್ದಾರೆ. ಅತ್ಯಾಚಾರಿಗಳಿಗೆ ಇದೊಂದು ಪಾಠ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಉಪಸಮರದ ಬಗ್ಗೆ ಮಾತನಾಡಿದ ಕಾರಜೋಳ, ಉಪಚುನಾವಣೆ ಶಾಂತಿಯುತವಾಗಿ ಮುಗಿದಿದೆ. ಬೆಂಗಳೂರು ಹೊರತುಪಡಿಸಿ ಉಳಿದೆಲ್ಲ ಕಡೆ ಶೇಕಡಾ 70ಕ್ಕಿಂತ ಹೆಚ್ಚು ಮತದಾನವಾಗಿದೆ. ಸಿ-ವೋಟರ್ ಸಮೀಕ್ಷೆ ಸತ್ಯಕ್ಕೆ ತುಂಬಾ ಹತ್ತಿರವಾಗಿದೆ. ನಾವು ಹದಿನೈದೂ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಒಂದೆರಡು ಸ್ಥಳಗಳಲ್ಲಿ ಸ್ವಲ್ಪ ಹೆಚ್ಚು ಕಮ್ಮಿ ಆಗಿರಬಹುದು. ಹಾಗಾಗಿ 12 ಸ್ಥಾನಗಳನ್ನು ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದು ಸ್ಪಷ್ಟಪಡಿಸಿದರು.
ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ:
ಅಂಬೇಡ್ಕರ್ ಪರಿನಿರ್ವಾಣ ದಿನದ ನಿಮಿತ್ತ ವಿಧಾನಸೌಧದ ಮುಂದಿರುವ ಅಂಬೇಡ್ಕರ್ ಪ್ರತಿಮೆಗೆ ಸಿಎಂ ಯಡಿಯೂರಪ್ಪ ಇಂದು ಮಾಲಾರ್ಪಣೆ ಮಾಡಿದರು. ಈ ವೇಳೆ, ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಮತ್ತು ಡಾ.ಸಿ.ಎನ್.ಅಶ್ವತ್ ನಾರಾಯಣ ಭಾಗಿಯಾಗಿದ್ದರು.
ಹೈದ್ರಾಬಾದ್ ಎನ್‌ಕೌಂಟರ್ ಬಗ್ಗೆ ಸುರೇಶ್ ಕುಮಾರ್ ಟ್ವೀಟ್:
ಪಾಪಿಗಳು ಚಿರಾಯು ಆಗಲಿಕ್ಕೆ ಬಿಡದೆ ಪರಲೋಕಕ್ಕೆ ಅಟ್ಟಿದ ತೆಲಂಗಾಣ ಪೊಲೀಸ್ ತಂಡಕ್ಕೆ ನಾಡಿನ ಸಕಲರ ಪರವಾಗಿ ಧನ್ಯವಾದಗಳು ಎಂದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್, ಟ್ವೀಟ್ ಮಾಡುವ ಮೂಲಕ ಧನ್ಯವಾದ ಸಲ್ಲಿದ್ದಾರೆ.