ಬೆಂಗಳೂರು: ರಾಜ್ಯಪಾಲರ ಭಾಷಣ ಒಂದು ರೀತಿಯ ಕಟ್ ಅಂಡ್ ಪೇಸ್ಟ್ ಭಾಷಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.
ಉಭಯ ಸದನಗಳ ಜಂಟಿ ಅಧಿವೇಶದಲ್ಲಿ ರಾಜ್ಯಪಾಲರ ಭಾಷಣದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 14 ತಿಂಗಳ ಅವಧಿಯಲ್ಲಿ ಮೈತ್ರಿ ಸರ್ಕಾರ ನೀಡಿದ ಯೋಜನೆಗಳನ್ನೇ ಪ್ರಸ್ತಾಪ ಮಾಡಿದ್ದಾರೆ. ಈ ಬಿಜೆಪಿ ಸರ್ಕಾರ ಬಂದ ಬಳಿಕ ಒಂದೇ ಒಂದು ಹೋಸ ಯೋಜನೆಯ ಪ್ರಸ್ತಾಪ ಮಾಡಿಲ್ಲ. ಮುಂದಿನ ಬಜೆಟ್ ಕುರಿತಾದ ಯಾವುದೇ ದಿಕ್ಕು ದೆಸೆ ಇವತ್ತಿನ ಭಾಷಣದಲ್ಲಿ ಇರಲಿಲ್ಲ.
ನೆರೆ ಹಾವಳಿ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವೈಫಲ್ಯ ಹೊಂದಿದೆ. ಅನೇಕ ರೈತರು ತಮ್ಮ ಬೆಳೆ ಹಾಗೂ ಭೂಮಿ ಕಳೆದುಕೊಂಡಿದ್ದಾರೆ. ಆ ರೈತರಿಗೆ ನೀಡಿರುವ ಅನುದಾನದ ಯಾವುದೇ ಅಂಕಿ ಸಮೇತ ದಾಖಲೆಗಳಿಲ್ಲ. ನೆರೆ ಪರಿಹಾರ ಕುರಿತು ಸಮಗ್ರ ಮಾಹಿತಿ ಇಲ್ಲ. ಕೇಂದ್ರ ಅನುದಾನದ ಬಗ್ಗೆ ಉಲ್ಲೇಖ ಮಾಡಿಲ್ಲ. ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದ ಯೋಜನೆಗಳನ್ನು ರಾಜ್ಯಪಾಲರ ಮೂಲಕ ಹೇಳಿಸಿದ್ದಾರೆ ಎಂದು ಟೀಕಿಸಿದರು.
ನಾನು ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಆಗಿದ್ದಾಗ ಆರ್ಥಿಕ ಶಿಸ್ತು ಕಾಪಾಡಿದ್ದೆ. ನಾನು ಅಧಿಕಾರ ಬಿಟ್ಟು ಬರುವ ಸಂದರ್ಭದಲ್ಲಿ ರಾಜ್ಯದ ಖಜಾನೆ ಉತ್ತಮವಾಗಿತ್ತು. ರೈತರ ಸಾಲ ಮನ್ನಾ ಯೋಜನೆಯಲ್ಲೂ ನಾವು ಆರ್ಥಿಕ ಶಿಸ್ತು ಕಾಪಾಡಿಕೊಂಡಿದ್ದೆವು. ಮುಂದಿನ ದಿನಗಳಲ್ಲಿ ಈ ಎಲ್ಲದರ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತೇನೆ. ನಾನು ಯಾರ ಬಗ್ಗೆಯೂ ವೈಯಕ್ತಿಕ ದ್ವೇಶ ಇಟ್ಟು ಕೊಳ್ಳಲ್ಲ. ಅಂಕಿ ಸಂಖ್ಯೆ ಸಮೇತ ಸದನದಲ್ಲಿ ನಾನು ಮಾತನಾಡುತ್ತೇನೆ ಎಂದರು.
ಬಿಜೆಪಿಯಿಂದ ಸುಮ್ಮನೆ ಆರೋಪ ಮಾಡುವ ಕೆಲಸ ನಡೆಯುತ್ತಿದೆ.ಅಂಕಿ ಸಂಖ್ಯೆಗಳನ್ನು ಇಡಬೇಕಾದ ಸರ್ಕಾರ ಮುಚ್ಚಿಡುತ್ತಿದೆ.ಕೇಂದ್ರ ಸರ್ಕಾರದಿಂದ ನರೇಗಾದಲ್ಲಿ ಬರಬೇಕಾದ ಹಣ ಎಷ್ಟು ಬಾಕಿ ಇದೆ. ಜಿಎಸ್ಟಿ ಪರಿಹಾರದ ಹಣ ಬಂದಿಲ್ಲ. ನರೇಗಾ ದುಡ್ಡು ಬಂದಿಲ್ಲ. ಕೇಂದ್ರ ಸರ್ಕಾರದ ನಡವಳಿಕೆಯಿಂದ ಯಡಿಯೂರಪ್ಪನವರ ಸರ್ಕಾರಕ್ಕೆ ಈ ಪರಿಸ್ಥಿತಿ ಬಂದಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಮನಗರದಲ್ಲಿ ಆರ್ಎಸ್ಎಸ್ ಪಥ ಸಂಚಲನ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅದೇನೋ ಪ್ಯಾಂಟ್, ದೊಣ್ಣೆ ಹಿಡಿದುಕೊಂಡು ಪಥಸಂಚಲನ ಮಾಡಿದ್ದಾರಂತೆ. ರಾಮನಗರದ ಮುಸ್ಲಿಂ ಬೀದಿಯಲ್ಲಿ ದೊಣ್ಣೆ ಹಿಡಿದುಕೊಂಡು ಪಥಸಂಚಲನ ಮಾಡಲು ಅವಕಾಶ ಕೊಟ್ಟವರು ಯಾರು? ಕಾನೂನಿನಲ್ಲಿ ದೊಣ್ಣೆ ಹಿಡಿದುಕೊಂಡು ಓಡಾಡಲು ಅವಕಾಶವಿದೆಯೇ?, ದೊಣ್ಣೆ ಮಾರಕಾಸ್ತ್ರ ಅಲ್ಲವೇ?, ರಾಮನಗರ ರಾಮ ರಾಜ್ಯವಾಗಿಯೇ ಇರಬೇಕು. ರಾವಣನ ರಾಜ್ಯವಾಗುವುದಕ್ಕೆ ಬಿಡುವುದಿಲ್ಲ. ಬೇರೆಯವರು ಹೀಗೆ ದೊಣ್ಣೆ ಹಿಡಿದುಕೊಂಡು ಪ್ರತಿಭಟನೆ ಮಾಡೋಕೆ ಬಿಡ್ತೀರಾ?. ರಾಮನಗರಕ್ಕೆ ಕಲ್ಲಡ್ಕ ಪ್ರಭಾಕರ್ ಕೊಡುಗೆ ಏನು?. ಕಪಾಲಿ ಬೆಟ್ಟ ಹಿಡ್ಕೊಂಡ್ ರಾಮನಗರದಲ್ಲಿ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ರಾಮನಗರದ ಜನರು ಅಷ್ಟು ಸುಲಭವಲ್ಲ ಎಂದು ಕಿಡಿಕಾರಿದರು.
ಹುಬ್ಬಳ್ಳಿಯ ಕೆಎಲ್ಇ ಕಾಲೇಜಿನಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಹೆಚ್ಡಿಕೆ, ಸರ್ಕಾರದ ನಡವಳಿಕೆ ಏನಿದೆ ಅದು ಸರಿಯಲ್ಲ. ಅಧಿಕಾರಿಗಳು ನಿಯಂತ್ರಣದಲ್ಲಿ ಇದ್ದಾರೋ ಇಲ್ಲವೋ, ಗೊತ್ತಿಲ್ಲ.ಇದೊಂದು ಗಂಭೀರ ಪ್ರಕರಣ, ಸ್ಟೇಷನ್ ಬೇಲ್ ಮೇಲೆ ಬಿಡುತ್ತಾರೆ. ಶಾಹಿನ್ ಶಾಲೆಯಲ್ಲಿ ಮಕ್ಕಳು ನಾಟಕ ಮಾಡಿದ್ದಕ್ಕೆ ಪೋಷಕರನ್ನು ಜೈಲಿಗೆ ಹಾಕುತ್ತಾರೆ. ಇದು ಸರ್ಕಾರದ ನಡವಳಿಕೆಯನ್ನು ಸೂಚಿಸುತ್ತದೆ ಎಂದು ಟೀಕಿಸಿದರು.
ಜಿ.ಟಿ. ದೇವೇಗೌಡರ ಬಗ್ಗೆ ಚರ್ಚೆ ಮಾಡಲ್ಲ. ಶಾಸಕಾಂಗ ಪಕ್ಷದ ಸಭೆ ಇದೆ ಎಂಬ ಸಂದೇಶ ಹೋಗಿದೆ. ಆದರೂ ಬೇರೆಯದ್ದೇ ಪಕ್ಷದ ಶಾಸಕಾಂಗ ಪಕ್ಷದ ನಾಯಕರನ್ನು ಭೇಟಿ ಮಾಡಿದ್ದಾರೆ. ಬಂದರು, ಹೋದರು. ಮುಂದೆ ಎಲ್ಲಿಗೆ ಹೋಗುತ್ತಾರೋ ನೋಡೋಣ. ನಾವು ಬಾಗಿಲು ಹಾಕಿಕೊಂಡು ಕೂತಿಲ್ಲ. ಯಾರು ಹೋದರು, ಜನತಾದಳ ಮುಳುಗಿ ಹೋಗಲ್ಲ. ಹಿಂದೆ ಹೋದವರ ಕಥೆ ಗೊತ್ತು ಅಲ್ಲವೇ?. ರಾಜಕಾರಣದಲ್ಲಿ ಇದೆಲ್ಲಾ ಆಗುತ್ತಿರುತ್ತದೆ ಎಂದು ಮಾರ್ಮಿಕವಾಗಿ ನುಡಿದರು.