ಬೆಂಗಳೂರು: ರಾಮನವಮಿಯ ವಿಶೇಷ ದಿನದಂದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿಯ ತಿರುಮಲ ವೆಂಕಟೇಶ್ವರ ಸನ್ನಿಧಿಗೆ ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಭೇಟಿ ನೀಡಿದರು. ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕರ್ನಾಟಕದ ರಾಜ್ಯಪಾಲರಾದ ನಂತರ ಎರಡನೇ ಬಾರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಗೆಹ್ಲೋಟ್, ದೇಶದಲ್ಲಿ ಸುಖ, ಸಮೃದ್ಧಿ, ಶಾಂತಿ ತುಂಬಿರಲಿ ಹಾಗೂ ಇಡೀ ವಿಶ್ವದಲ್ಲೇ ದೇಶದ ಹೆಸರು ಪಸರಿಸಲೆಂದು ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.
ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (ಟಿಟಿಡಿ) ಅಧಿಕಾರಿಗಳು ಮತ್ತು ಅರ್ಚಕರು ರಾಜ್ಯಪಾಲರನ್ನು ಸ್ವಾಗತಿಸಿದರು. ಪೂಜೆಯ ನಂತರ ರಂಗಾನಾಯಕುಲ ಮಂಟಪದಲ್ಲಿ ಶ್ರೀವಾರಿ ವಸ್ತ್ರವನ್ನು ನೀಡಿ ಗೌರವಿಸಿದರು. ನಂತರ ತಿಮ್ಮಪ್ಪ ಸ್ವಾಮಿ ಪ್ರಸಾದವನ್ನು ದೇವಾಲಯದ ವತಿಯಿಂದ ನೀಡಲಾಯಿತು.
ತಿರುಪತಿಯಲ್ಲಿ ವಿಲ್ ಸಿಟಿ ಡಯಾಗ್ನಸೆಟಿಕ್ಸ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಆರೋಗ್ಯಕ್ಕಾಗಿ ಅವಶ್ಯಕತೆಗಳನ್ನು ಪೂರ್ಣಗೊಳಿಸಬೇಕಿದೆ. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಆರೋಗ್ಯ ಸಮಸ್ಯೆಗಳು ಬರಲು ಪ್ರಾರಂಭಿಸಿವೆ. ರೋಗ ನಿರ್ಣಯವನ್ನು ಮಾಡಲು, ಆಧುನಿಕ ಯಂತ್ರಗಳ ಅಗತ್ಯವಿದೆ ಎಂದರು.
ಇದನ್ನೂ ಓದಿ: ನವವೃಂದಾವನ ಗಡ್ಡಿಯಲ್ಲಿ ಮಾರ್ದನಿಸಿದ ರಾಮನಾಮ