ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಗುತ್ತಿಗೆ ನೌಕರರನ್ನು, ವೇತನ ಕೇಳಿದ ಕಾರಣಕ್ಕೆ ವಜಾಗೊಳಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್, ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ನಿರ್ದೇಶಿಸಿದೆ.
ಕೊರೊನಾ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ವೇಳೆ ವೇತನ ಕೇಳಿದ ಪೌರ ಕಾರ್ಮಿಕರನ್ನು ವಜಾಗೊಳಿಸಲಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಪೀಠ ಸರ್ಕಾರಕ್ಕೆ ನಿರ್ದೇಶಿಸಿದೆ. ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲ ಕ್ಲಿಫ್ಟನ್ ರೊಜಾರಿಯೋ ವಾದಿಸಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಪೌರ ಕಾರ್ಮಿಕರಿಗೆ ಹಲವು ತಿಂಗಳಿಂದ ವೇತನ ಪಾವತಿಸಿಲ್ಲ. ಇದನ್ನು ಕೇಳಿದ್ದಕ್ಕೆ 51 ಮಂದಿಯನ್ನು ವಜಾಗೊಳಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಾರ್ಮಿಕರಿಗೆ ವೇತನ ಸಿಗದೇ ಬದುಕು ನಡೆಸುವುದು ಕಷ್ಟ ಎಂದು ವಿವರಿಸಿದರು.
ಇದೇ ವಿಚಾರವಾಗಿ ಹಿಂದಿನ ವಿಚಾರಣೆ ವೇಳೆ ಪೀಠ ನಿರ್ದೇಶಿಸಿದ್ದಂತೆ ಸರ್ಕಾರ ಸಲ್ಲಿಸಿರುವ ವರದಿಯಲ್ಲಿ, ಪೌರ ಕಾರ್ಮಿಕರನ್ನು ಪಾಲಿಕೆ ವಜಾ ಮಾಡಿಲ್ಲ. ಬದಲಿಗೆ ಅವರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿದ್ದ ಆದರ್ಶ ಎಂಟರ್ಪ್ರೈಸಸ್ ವಜಾ ಮಾಡಿದೆ. ಇನ್ನು ಗುತ್ತಿಗೆ ಸಂಸ್ಥೆಗೆ ಪಾಲಿಕೆ ಹಣ ಬಿಡುಗಡೆ ಮಾಡಿದ್ದು, ಪೌರ ಕಾರ್ಮಿಕರು ಅನಧಿಕೃತವಾಗಿ ರಜೆ ಹಾಕಿದ್ದರಿಂದ ಸಿಕ್ಕಿಲ್ಲ ಎಂಬ ಅಂಶಗಳಿದ್ದವು.
ಅರ್ಜಿದಾರರ ಪರ ವಕೀಲರ ವಾದ ಹಾಗೂ ಸರ್ಕಾರದ ಹೇಳಿಕೆಯನ್ನು ದಾಖಲಿಸಿಕೊಂಡ ಪೀಠ, ಇಂತಹ ವಿಚಾರಗಳಲ್ಲಿ ಸರ್ಕಾರ ಅಸಹಾಯಕತೆ ತೋರಿಸಬಾರದು. ಕೂಡಲೇ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಜರುಗಿಸುವಂತೆ ಹಾಗೂ ಪೌರಕಾರ್ಮಿಕರಿಗೆ ವೇತನ ಪಾವತಿಸಲು ಸೂಚಿಸುವಂತೆ ನಿರ್ದೇಶಿಸಿತು. ಅಲ್ಲದೇ, ರಾಜ್ಯದ ಇತರ ಸ್ಥಳೀಯ ಸಂಸ್ಥೆಗಳಲ್ಲಿ ಬಾಕಿ ಉಳಿಸಿಕೊಂಡಿರುವ ಪೌರ ಕಾರ್ಮಿಕರ ವೇತನವನ್ನು ಪಾವತಿಸಲು ಕ್ರಮ ವಹಿಸುವಂತೆ ಸರ್ಕಾರಕ್ಕೆ ಸೂಚಿಸಿ, ವಿಚಾರಣೆ ಮುಂದೂಡಿತು.