ಬೆಂಗಳೂರು : ರಾಜ್ಯದ ಪದವೀಧರರು, ಡಿಪ್ಲೋಮಾ ಪಡೆದವರಿಗೆ ನಿರುದ್ಯೋಗ ಭತ್ಯೆ ನೀಡುವ ಕರ್ನಾಟಕ ಯುವ ನಿಧಿ ಯೋಜನೆ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಯೋಜನೆ ಜಾರಿಗೆ ಅನುಮೋದನೆ ಸಿಕ್ಕಿರುವ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಯೋಜನೆ ಅನುಷ್ಠಾನಗೊಳಿಸಿ ಆದೇಶ ಹೊರಡಿಸಿದೆ.
ಅದರಂತೆ ರಾಜ್ಯದಲ್ಲಿ 2022-23ರಲ್ಲಿ ತೇರ್ಗಡೆಯಾದ ಪದವೀಧರ ಪ್ರತಿ ತಿಂಗಳು ರೂ.3,000, ಡಿಪ್ಲೋಮಾ ಶಿಕ್ಷಣ ಪಡೆದಿರುವ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ರೂ.1,500 ರಂತೆ ನಿರುದ್ಯೋಗ ಭತ್ಯೆ ನೀಡುವ "ಯುವ ನಿಧಿ ಯೋಜನೆ" ಯನ್ನು ಜಾರಿಗೊಳಿಸಿದೆ.
ಸಚಿವ ಸಂಪುಟದ ಅನುಮೋದನೆ ನಂತರ ಯೋಜನೆಯನ್ನು ಅನುಷ್ಠಾನಗೊಳಿಸಲು ಷರತ್ತು ಮತ್ತು ನಿಬಂಧನೆಗಳು ಹಾಗೂ ಅನರ್ಹತೆಯ ಮಾನದಂಡಗಳನ್ನು ವಿಧಿಸಿ ಆದೇಶ ಹೊರಡಿಸಲಾಗಿದೆ. 2023ರ ವರ್ಷದಲ್ಲಿ ತೇರ್ಗಡೆಯಾಗಿ ತೇರ್ಗಡೆಯಾದ ದಿನಾಂಕದಿಂದ 180 (6 ತಿಂಗಳು) ದಿನಗಳು ಕಳೆದರೂ ಉದ್ಯೋಗ ಲಭಿಸದೇ ಇರುವ ಪದವೀಧರ ನಿರುದ್ಯೋಗಳಿಗೆ (ವೃತ್ತಿಪರ ಕೋರ್ಸ್‌ಗಳು ಸೇರಿದಂತೆ) ಪ್ರತಿ ತಿಂಗಳು 3000 ರೂ. ನಿರುದ್ಯೋಗ ಭತ್ಯೆ ಹಾಗೂ ಡಿಪ್ಲೋಮ ಪಾಸಾದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 1500 ರೂ. ನೀಡಲು ಆದೇಶಿಸಲಾಗಿದೆ. ನಿರುದ್ಯೋಗ ವ್ಯಕ್ತಿಯನ್ನು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ ಎರಡು ವರ್ಷಗಳ ಅವಧಿಗೆ ನೀಡಲು "ಯುವ ನಿಧಿ ಯೋಜನೆಯನ್ನು ಈ ಕೆಲ ಷರತ್ತಿಗೊಳಪಟ್ಟು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಲಾಗಿದೆ.
ಷರತ್ತು ಮತ್ತು ನಿಬಂಧನೆಗಳು :
- ಪದವಿ, ಡಿಪ್ಲೋಮಾ ಮುಗಿಸಿ 6 ತಿಂಗಳಾದರೂ ಉದ್ಯೋಗ ಲಭಿಸದೇ ಇರುವ ಕರ್ನಾಟಕದ ನಿವಾಸಿಗಳಿಗೆ (Domicile of Karnataka) ಮಾತ್ರ ಈ ಯೋಜನೆ ಅನ್ವಯವಾಗಲಿದೆ.
- ಈ ಸೌಲಭ್ಯವು ಎರಡು ವರ್ಷಗಳ ಅವಧಿಗೆ ಮಾತ್ರ ಅನ್ವಯಿಸುತ್ತದೆ. ಎರಡು ವರ್ಷಗಳ ಅವಧಿಯೊಳಗೆ ಉದ್ಯೋಗ ದೊರೆತಲ್ಲಿ ಫಲಾನುಭವಿಗೆ ಈ ಸೌಲಭ್ಯವನ್ನು ಸ್ಥಗಿತಗೊಳಿಸಲಾಗುವುದು.
- ಭತ್ಯೆಯನ್ನು DBT ಮೂಲಕ ಒದಗಿಸಲು ಉದ್ದೇಶಿಸಲಾಗಿದ್ದು, ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
- ನಿರುದ್ಯೋಗ ಸ್ಥಿತಿಯ ಬಗ್ಗೆ ಸ್ವತಂತ್ರ್ಯ ಪರಿಶೀಲನೆ ಇರಬೇಕು. ಉದ್ಯೋಗ ಪಡೆದ ನಂತರ ತಪ್ಪು ಘೋಷಣೆ ಅಥವಾ ಘೋಷಿಸಲು ವಿಫಲರಾದರೆ ದಂಡ ವಿಧಿಸಲಾಗುವುದು.
ಯೋಜನೆಗೆ ಅರ್ಹರಾಗದೇ ಇರುವವರು: - ಉನ್ನತ ವ್ಯಾಸಂಗಕ್ಕೆ ದಾಖಲಾತಿ ಹೊಂದಿ ವಿದ್ಯಾಭ್ಯಾಸ ಮುಂದುವರೆಸುವವರಿಗೆ
- Apprentice ವೇತನವನ್ನು ಪಡೆಯುತ್ತಿರುವವರು
- ಸರ್ಕಾರಿ/ಖಾಸಗಿ ವಲಯದಲ್ಲಿ ಉದ್ಯೋಗ ಪಡೆದವರು
- ರಾಜ್ಯ ಮತ್ತು ಕೇಂದ್ರದ ವಿವಿಧ ಯೋಜನೆಯಡಿ ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಹೊಂದಿದವರು.
ಇದನ್ನೂ ಓದಿ : 200 ಯುನಿಟ್ ವರೆಗಿನ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆ ಲೆಕ್ಕಾಚಾರ ಏನಿದೆ ನೋಡಿ!