ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಐ) ಮಾನದಂಡಗಳಿಗೆ ಅನುಗುಣವಾಗಿ ಶೌಚಾಲಯ ಸೇರಿದಂತೆ ಮೂಲಸೌಲಭ್ಯಗಳನ್ನು ಕಲ್ಪಿಸದ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಈ ರೀತಿಯ ಸೌಲಭ್ಯಗಳ ಕೊರತೆಯಿರುವ ಶಾಲೆಗಳಿಗೆ ಯಾವ ಪೋಷಕರು ತಾನೇ ಮಕ್ಕಳನ್ನು ಕಳುಹಿಸಲು ಮುಂದಾಗುತ್ತಾರೆ? ಎಂದು ಗರಂ ಆಗಿದೆ.
ಆತ್ಮಸಾಕ್ಷಿಗೆ ಆಘಾತ: ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತಂತೆ ಮಾಧ್ಯಮಗಳ ವರದಿ ಆಧರಿಸಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜೆ.ಎಸ್.ಕಮಲ್ ಅವರಿದ್ದ ನ್ಯಾಯಪೀಠ, ಶಾಲೆಗಳ ದುಸ್ಥಿತಿ ಗಮನಿಸಿದರೆ ನಮ್ಮ ಆತ್ಮಸಾಕ್ಷಿಗೆ ಆಘಾತವಾಗುತ್ತಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿತು.
ಸರ್ಕಾರ ಸಲ್ಲಿಸಿರುವ ವರದಿ ಮತ್ತು ಛಾಯಾಚಿತ್ರಗಳನ್ನು ಪರಿಶೀಲಿಸಿದ ನ್ಯಾಯಪೀಠ, ಶಾಲೆಗಳಲ್ಲಿ ಶೌಚಾಲಯಗಳ ಸ್ಥಿತಿ ಅತ್ಯಂತ ಕರುಣಾಜನಕವಾಗಿದೆ. ಶಾಲೆಯ ಶೌಚಾಲಯದ ಸುತ್ತಮುತ್ತಲ ಪ್ರದೇಶದಲ್ಲಿ ಗಿಡಗಂಟಿಗಳು ಬೆಳೆದಿವೆ. ಈ ರೀತಿಯ ವರದಿ ಸಲ್ಲಿಸಿರುವ ಅಧಿಕಾರಿಯ ಮನೆಯಲ್ಲಿಯೂ ಇದೇ ಪರಿಸ್ಥಿತಿ ಇದೆಯೇ ಎಂದು ನ್ಯಾಯಪೀಠ ಪ್ರಶ್ನಿಸಿತು. ಶೌಚಾಲಯ ನಿರ್ಮಾಣ ವಿಚಾರ ಸಂಬಂಧ ಸರ್ಕಾರ ಕಣ್ಣೊರೆಸುವ ತಂತ್ರ ನಡೆಸುತ್ತಿದೆ. ಕೆಲವು ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯಗಳಿಗೆ ನೀರಿನ ಸೌಲಭ್ಯ ಇಲ್ಲ. ಕುಡಿಯುವ ನೀರನ್ನು ಹೊತ್ತು ತರುವ ಪರಿಸ್ಥಿತಿ ಇದೆ. ಈ ರೀತಿಯಲ್ಲಿ ಸೌಕರ್ಯಗಳ ಕೊರತೆಯಿರುವ ಶಾಲೆಗಳಿಂದ ಯಾವ ರೀತಿಯ ಸಮಾಜ ನಿರ್ಮಾಣವಾದಲಿದೆ? ಎಂದು ಪೀಠ ಕೇಳಿತು.
ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಎಂ.ಜೆ.ಎಸ್.ಕಮಲ್, ಸೂಕ್ತ ಶೌಚಾಲಯ ಕಲ್ಪಿಸದ ಕುರಿತು ಅನುಪಾಲನಾ ವರದಿ ಸಲ್ಲಿಸಿರುವ ಅಧಿಕಾರಿಗೆ ಹೇಗೆ ಧೈರ್ಯ ಬಂತು? ಇಂತಹ ಶಾಲೆಗಳಿಗೆ ಅಧಿಕಾರಿಗಳ ಮಕ್ಕಳನ್ನು ಕಳುಹಿಸಲು ಮುಂದಾಗುತ್ತಾರೆಯೇ ಎಂದು ಪಶ್ನಿಸಿದರು. ಅಲ್ಲದೇ, ಇದಕ್ಕೆಲ್ಲ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು. 'ಚಲ್ತಾ ಹೆ' ಎನ್ನುವ ಭಾವನೆ ಅಧಿಕಾರಿಗಳ ಮನಸ್ಸಿನಲ್ಲಿದೆಯೇ ಎಂದು ಪ್ರಶ್ನಿಸಿತು.
2013ರಲ್ಲಿ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗಿದೆ. ಈವರೆಗೂ ಯಾವುದೇ ಬದಲಾವಣೆ ಕಾಣಲಾಗಿಲ್ಲ. ಅಧಿಕಾರಿಗಳು ಸ್ವಲ್ಪವಾದರೂ ಕಾಳಜಿ ತೋರಿಸಬೇಕು. ಸರ್ಕಾರಿ ಶಾಲೆಗಳಲ್ಲಿನ ಸ್ಥಿತಿ ನೋಡಿ ನಮಗೆ ಸಾಕಷ್ಟು ನೋವಾಗಿದೆ ಎಂದು ಪೀಠ ತಿಳಿಸಿತು.
ಪ್ರತಿಭಾವಂತ ವಿದ್ಯಾರ್ಥಿಗಳಿ ಶಿಕ್ಷಣ ಲಭ್ಯವಾಗದಿದ್ದರೆ ಅದು ರಾಷ್ಟ್ರೀಯ ನಷ್ಟಕ್ಕೆ ಕಾರಣವಾಗಲಿದೆ ಎಂದು ಪೀಠ ಅಭಿಪ್ರಾಯಪಟ್ಟಿತು. ಅಲ್ಲದೇ, ನಾಡಿನ ಭವಿಷ್ಯ ಇರುವುದೇ ಶಾಲೆಗಳಲ್ಲಿ. ಶಾಲೆಗಳ ಸ್ಥಿತಿಯೇ ಈ ರೀತಿ ಇದ್ದರೆ, ಹೇಗೆ ಅಭಿವೃದ್ಧಿ ಆಗಲು ಸಾಧ್ಯ ಎಂದು ಪ್ರಶ್ನಿಸಿತು.
ಸರ್ಕಾರಿ ಶಾಲೆಗಳಲ್ಲಿನ ಮೂಲ ಸೌಲಭ್ಯಗಳ ಪರಿಸ್ಥಿಗಳ ಕುರಿತು ಮುಂದಿನ ಮೂರು ತಿಂಗಳಲ್ಲಿ ಮರು ಸಮೀಕ್ಷೆ ನಡೆಸಬೇಕು. ಈ ಸಮೀಕ್ಷೆಯ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳ ಸದಸ್ಯ ಕಾರ್ಯದರ್ಶಿಗಳನ್ನು ಭಾಗಿಯಾಗುವಂತೆ ನೋಡಿಕೊಳ್ಳಬೇಕು ಎಂದು ಪೀಠ ತಿಳಿಸಿದೆ.
ಅಲ್ಲದೇ, ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಸರ್ಕಾರ ಸಲ್ಲಿಸುವ ವರದಿಗೆ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳ ಸಹಿ ಕಡ್ಡಾಯವಾಗಿರಬೇಕು ಎಂದು ನಿರ್ದೇಶನ ನೀಡಿದೆ.
ಹೈಕೋರ್ಟ್ ನೀಡಿರುವ ಈ ಆದೇಶದ ಪ್ರತಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮತ್ತು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಗಮನಕ್ಕೆ ತರಬೇಕು ಎಂದು ಪೀಠ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಇದನ್ನೂ ಓದಿ: Haddi: ನವಾಜುದ್ದೀನ್ ಸಿದ್ದಿಕಿಯ ಸಿನಿಮಾದಲ್ಲಿ ನಟಿಸುತ್ತಿರುವ 300 ತೃತೀಯಲಿಂಗಿಗಳು
ಪ್ರತ್ಯೇಕ ಅನುದಾನ ಮೀಸಲಿಡಿ: ಅನುದಾನದ ಲಭ್ಯತೆಯ ಮೇರೆಗೆ ಮೂಲಸೌಲಭ್ಯಗಳನ್ನು ಕಲ್ಪಿಸುವುದಾಗಿ ಸರ್ಕಾರದ ಪರ ವಕೀಲರು ನೀಡಿದ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಅನುದಾನ ಲಭ್ಯತೆ ಆಧಾರದಲ್ಲಿ ಎಂಬುದಾಗಿ ಹೇಳುವಂತಿಲ್ಲ. ಮಕ್ಕಳ ಶಿಕ್ಷಣಕ್ಕಾಗಿ ಬಜೆಟ್‌ನಲ್ಲಿ ಪ್ರತೇಕ ಅನುದಾನ ಮೀಸಲಿಡಬೇಕು. ಆ ಮೊತ್ತವನ್ನು ನಿರ್ದಿಷ್ಟ ಕಾಲ ಮಿತಿಯಲ್ಲಿ ವಿನಿಯೋಗಿಸಬೇಕು ಎಂದು ನಿರ್ದೇಶನ ನೀಡಿತು.