ಬೆಂಗಳೂರು: ಕೊರೊನಾ ಭೀತಿ ಇದೀಗ ಸರ್ಕಾರಿ ನೌಕರರನ್ನು ಬಹುವಾಗಿ ಕಾಡುತ್ತಿದೆ. ಕರ್ತವ್ಯದ ಭರದಲ್ಲಿ ಎಲ್ಲಿ ನಮಗೂ ಕೊರೊನಾ ಅಂಟಿಕೊಳ್ಳುತ್ತೋ ಎಂಬ ಭಯ ಅವರನ್ನು ಆವರಿಸಿದೆ. ಈ ನಿಟ್ಟಿನಲ್ಲಿ ಸರ್ಕಾರಿ ನೌಕರರ ಸಂಘದ ಸಿಬ್ಬಂದಿ ಹಾಜರಾತಿಯನ್ನು ಕಡಿತಗೊಳಿಸುವಂತೆ ಮನವಿ ಮಾಡಿದ್ದಾರೆ.
ಈಗ ಮತ್ತೆ ರಾಜ್ಯಾದ್ಯಂತ ಕೋವಿಡ್ ಅಟ್ಟಹಾಸ ಜೋರಾಗಿದೆ. ಅದರಲ್ಲೂ ಬೆಂಗಳೂರಲ್ಲಿ ಕೊರೊನಾ ಪ್ರಕರಣ ದಿನೇ ದಿನೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಕೊರೊನಾ ಅಬ್ಬರ ಇದೀಗ ಸರ್ಕಾರಿ ನೌಕರರಲ್ಲಿ ಅತಿಯಾಗಿ ಭಯ ಹುಟ್ಟಿಸಿದೆ. ಈಗಾಗಲೇ ರಾಜ್ಯದ ಹಲವೆಡೆ ಸರ್ಕಾರಿ ನೌಕರರಿಗೆ ಕೊರೊನಾ ಕಾಣಿಸಿಕೊಂಡಿದೆ. ಅದರಲ್ಲೂ ಶಕ್ತಿ ಸೌಧದಲ್ಲಿ ಈಗಾಗಲೇ ನಾಲ್ಕೈದು ಸಿಬ್ಬಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದ್ದರೆ, ಒಬ್ಬ ಸಿಬ್ಬಂದಿ ಕೊರೊನಾಗೆ ಬಲಿಯಾಗಿದ್ದಾನೆ. ದಿನೇ ದಿನೆ ಸರ್ಕಾರಿ ಕಚೇರಿಗಳಲ್ಲಿ ಒಂದಲ್ಲಾ ಒಂದು ಕೊರೊನಾ ಪ್ರಕರಣ ಪತ್ತೆಯಾಗುತ್ತಿರುವುದು ನೌಕರರ ನಿದ್ದೆಗೆಡಿಸಿದೆ.
ಈ ಹಿನ್ನೆಲೆ ರಾಜ್ಯ ಸರ್ಕಾರಿ ನೌಕರರ ಸಂಘ, ಸಚಿವಾಲಯ ನೌಕರರ ಸಂಘದ ಪದಾಧಿಕಾರಿಗಳು ಮುಖ್ಯ ಕಾರ್ಯದರ್ಶಿಯನ್ನು ಭೇಟಿಯಾಗಿ ಸಿಬ್ಬಂದಿ ಹಾಜರಾತಿಯನ್ನು ಕಡಿತಗೊಳಿಸುವಂತೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.
ಸಾರ್ವಜನಿಕರು ಅಧಿಕ ಪ್ರಮಾಣದಲ್ಲಿ ಪ್ರವೇಶ:
ಈಗಾಗಲೇ ವಿಧಾನಸೌಧ, ವಿಕಾಸಸೌಧ, ಎಂಎಸ್ ಕಟ್ಟಡಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವನ್ನು ಹೇರಿ ಆದೇಶ ಹೊರಡಿಸಲಾಗಿದೆ. ಸಂಜೆ 3 ಗಂಟೆ ಬಳಿಕ ಅಗತ್ಯ ಕೆಲಸಗಳಿಗೆ ಸೀಮಿತ ಸಂಖ್ಯೆಯಲ್ಲಿ ಮಾತ್ರ ಸಾರ್ವಜನಿಕರು ಶಕ್ತಿಸೌಧಕ್ಕೆ ಬರಲು ಅವಕಾಶ ನೀಡುವಂತೆ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಸುತ್ತೋಲೆ ಹೊರಡಿಸಿದ್ದಾರೆ. ನಿರ್ಬಂಧ ಹೇರಿದ್ದರೂ ಸಾರ್ವಜನಿಕರು ಮಾತ್ರ ಅಧಿಕ ಪ್ರಮಾಣದಲ್ಲಿ ಶಕ್ತಿ ಸೌಧಕ್ಕೆ ಪ್ರವೇಶಿಸುತ್ತಿರುವುದು ನೌಕರರಲ್ಲಿ ಆತಂಕ ಮೂಡಿಸಿದೆ.
ಸಚಿವರುಗಳ ಕಚೇರಿ, ವಿವಿಧ ಇಲಾಖೆಗಳ ಕಚೇರಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಚಿವಾಲಯ ನೌಕರರ ಸಂಘದ ಸದಸ್ಯರು ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.
ಹೊಸ ಮಾರ್ಗಸೂಚಿ ಹೊರಡಿಸಲು ಮನವಿ:
ಕೊರೊನಾ ಎಲ್ಲಾ ಕಡೆ ಹಬ್ಬಿರುವ ಹಿನ್ನೆಲೆ ಸರ್ಕಾರಿ ನೌಕರರ ಸಂಘ ಹಾಜರಾತಿ ಪ್ರಮಾಣವನ್ನು ಕಡಿತಗೊಳಿಸುವಂತೆ ಮನವಿ ಮಾಡಲಾಗಿದೆ. ರಾಜ್ಯ ಮತ್ತು ಜಿಲ್ಲಾ ಮಟ್ಟದ ಉನ್ನತ ಶ್ರೇಣಿಯ ಅಧಿಕಾರಿಗಳನ್ನು ಹೊರತುಪಡಿಸಿ, ಎಲ್ಲಾ ವೃಂದದ ಸಿಬ್ಬಂದಿ, ಅಧಿಕಾರಿಗಳು ಶೇ.50ರಂತೆ ಸರಣಿ ಆಧಾರದ ಮೇಲೆ ದಿನಬಿಟ್ಟು ದಿನ ಕೆಲಸಕ್ಕೆ ಹಾಜರಾಗುವಂತೆ ಆದೇಶ ಹೊರಡಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದೆ. ತಮಿಳುನಾಡು, ದೆಹಲಿ ಮಾದರಿಯಲ್ಲಿ ಸರ್ಕಾರಿ ನೌಕರರ ಸೇವೆ ಬಳಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಮನವಿ ಮಾಡಿದ್ದಾರೆ. ಈ ಸಂಬಂಧ ಹೊಸ ಮಾರ್ಗಸೂಚಿ ಹೊರಡಿಸಲು ಒತ್ತಾಯಿಸಿದ್ದಾರೆ.
ಸಚಿವಾಲಯ ಸಿಬ್ಬಂದಿ ಹಾಜರಾತಿ ಶೇ.33 ನಿಗದಿಗೆ ಮನವಿ:
ಇತ್ತ ವಿಧಾನಸೌಧ, ವಿಕಾಸಸೌಧ, ಎಂ.ಎಸ್. ಕಟ್ಟಡ ಒಳಗೊಂಡ ಸಚಿವಾಲಯದ ಸಿಬ್ಬಂದಿ ಹಾಜರಾತಿಯನ್ನು ಈ ಮುಂಚಿನಂತೆ ಶೇ.33 ನಿಗದಿಗೊಳಿಸುವಂತೆ ಸಚಿವಾಲಯ ನೌಕರರ ಸಂಘ ಮುಖ್ಯ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಈಗಾಗಲೇ ಶಕ್ತಿಸೌಧಕ್ಕೆ ಕೊರೊನಾ ಎಂಟ್ರಿ ಕೊಟ್ಟಿದ್ದು, ಹೀಗಾಗಿ ಸರ್ಕಾರಿ ನೌಕರರು ಭೀತಿಗೊಳಗಾಗಿದ್ದಾರೆ. ಆರೋಗ್ಯ ಹಿತದೃಷ್ಟಿಯಿಂದ ಎಲ್ಲಾ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳ ಹಾಜರಾತಿಯನ್ನು ಶೇ.33 ಗೆ ಸೀಮಿತಗೊಳಿಸಿ ಆದೇಶ ಹೊರಡಿಸುವಂತೆ ಮನವಿ ಮಾಡಿದ್ದಾರೆ. ಇಲ್ಲವಾದರೆ ಕೊರೊನಾ ವ್ಯಾಪಕವಾಗಿ ಹರಡುವ ಸಾಧ್ಯತೆ ಇದ್ದು, ಇಡೀ ಶಕ್ತಿಸೌಧವನ್ನೇ ಸೀಲ್ಡೌನ್ ಮಾಡುವ ಪರಿಸ್ಥಿತಿ ಎದುರಾಗಬಹುದು ಎಂದು ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ. ಗುರುಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.