ಬೆಂಗಳೂರು: ತಜ್ಞರೊಂದಿಗೆ ಸಲಹೆಗಳನ್ನು ಪಡೆದುಕೊಳ್ಳಲಾಗಿದೆ. ಹೊಸ ಮಾರ್ಗಸೂಚಿಗಳನ್ನು ಇಂದು ಅಥವಾ ನಾಳೆ ಬಿಡುಗಡೆ ಮಾಡಲಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆ ನಂತರ ಮಾತನಾಡಿದ ಅವರು, ಒಂದು ವಾರದಲ್ಲಿ ಕೊರೊನಾ ಹೆಚ್ಚಾಗಿದೆ. ಸಾವಿನ ಸಂಖ್ಯೆಯೂ ಏರಿಕೆಯಾಗಿದೆ. ಟಿಟಿಟಿ ಬಗ್ಗೆ ಸುದೀರ್ಘವಾಗಿ ಸಭೆಯಲ್ಲಿ ಚರ್ಚೆ ನಡೆದಿದೆ. ಮನೆಯಲ್ಲೇ ಚಿಕಿತ್ಸೆ ಕೊಡುವುದರ ಬಗ್ಗೆ ಮಾಹಿತಿ ನೀಡಲಾಗಿದೆ. ನಿಯಮಾವಳಿಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.
ವೈದ್ಯ ತಜ್ಞರ ಅಭಿಪ್ರಾಯವೇನು?: ಮಣಿಪಾಲ್ ಆಸ್ಪತ್ರೆ ವೈದ್ಯ ಡಾ. ಸುದರ್ಶನ್ ಬಲ್ಲಾಳ್ ಮಾತನಾಡಿ, ಕೋವಿಡ್ 'ಎ' ಲಕ್ಷಣ ಇರುವವರು ಆಸ್ಪತ್ರೆಗೆ ಬರುವ ಅವಶ್ಯಕತೆ ಇಲ್ಲ. ಮನೆಯಲ್ಲಿಯೇ ಇವರನ್ನು ನೋಡಿಕೊಂಡರೆ ಬಿ ಮತ್ತು ಸಿ ಲಕ್ಷಣ ಇರುವವರಿಗೆ ಆಸ್ಪತ್ರೆಗಳಲ್ಲಿ ಬೆಡ್ಗಳು ಸಿಗುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಧ್ಯಮಗಳು ಜನರನ್ನು ಹೆದರಿಸಬಾರದು, ಜನ ಮೊದಲೇ ಹೆದರಿಕೊಂಡಿದ್ದಾರೆ. ಕೋವಿಡ್ ಬಂದರೆ ಜೀವನ ಅಂತಿಮ ಅಲ್ಲ. ರೋಗ ಲಕ್ಷಣ ಇಲ್ಲದವರು ಆಸ್ಪತ್ರೆಗೆ ಬಂದು ಅಡ್ಮಿಟ್ ಆಗಬೇಕಿಲ್ಲ. ಇದರಿಂದ ಆಸ್ಪತ್ರೆಗಳಲ್ಲಿ ಬೆಡ್ಗಳ ತೊಂದರೆಯಾಗುವುದಿಲ್ಲ. ಖಾಸಗಿ ಆಸ್ಪತ್ರೆಗಳು ಸರ್ಕಾರದ ಜೊತೆ ಸೇರಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಸ್ಪರ್ಶ ಆಸ್ಪತ್ರೆಯ ಡಾ. ಶರಣ್ ಪಾಟೀಲ್ ಮಾತನಾಡಿ, ಯಾವ ಆಸ್ಪತ್ರೆಯಲ್ಲಿ ಬೆಡ್ ಇವೆ ಎಂಬುದು ಗೊತ್ತಾಗಬೇಕು. ಆಗ ಬೇರೆ ಬೇರೆ ಆಸ್ಪತ್ರೆಗಳಿಗೆ ಓಡಾಡೋದು ತಪ್ಪುತ್ತದೆ. ರೋಗ ಲಕ್ಷಣ ಇಲ್ಲದವರಿಗೆ ಮನೆಯಲ್ಲೇ ಚಿಕಿತ್ಸೆ ಕೊಡೋದು ಸೂಕ್ತ. ಮಾಧ್ಯಮಗಳಲ್ಲಿ ನೋಡಿ ಜನ ಬಹಳಷ್ಟು ಗಾಬರಿಗೆ ಒಳಗಾಗುತ್ತಿದ್ದಾರೆ. ಭಯ ಬೇಡ, ಕೊರೊನಾ ಪಾಸಿಟಿವ್ ಇರುವವರು ಸಾಕಷ್ಟು ಮಂದಿ ಗುಣಮುಖರಾಗುತ್ತಿದ್ದಾರೆ ಎಂದು ತಿಳಿಸಿದರು.
ರೋಗ ಲಕ್ಷಣ ಇಲ್ಲದೇ ಪಾಸಿಟಿವ್ ಬಂದವರು ಆಸ್ಪತ್ರೆಗೆ ಹೋಗೋ ಅವಶ್ಯಕತೆ ಇಲ್ಲ. ಉಸಿರಾಟದ ತೊಂದರೆಯಾದರೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಬೇಕು. ಸ್ಪರ್ಶ ಆಸ್ಪತ್ರೆಯೊಂದರಲ್ಲೇ ಶೇ. 60 'ಎ' ಸಿಂಪ್ಟಮ್ಯಾಟಿಕ್ ರೋಗಿಗಳಿದ್ದಾರೆ. ಈ ಭಯದ ವಾತಾವರಣವನ್ನು ಹೋಗಲಾಡಿಸಬೇಕು ಎಂದು ಸಲಹೆ ನೀಡಿದರು.
ಬಿ ಮತ್ತು ಸಿ ಲಕ್ಷಣ ಕಂಡು ಬಂದರೆ ಮಾತ್ರ ಆಸ್ಪತ್ರೆಗೆ ಬರಲಿ. ಮಾಧ್ಯಮಗಳ ಪಾತ್ರ ಬಹಳ ಮುಖ್ಯ. ಗುಣಮುಖರಾದವರ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು. 60 ವರ್ಷ ಮೇಲ್ಪಟ್ಟವರನ್ನು ಆಸ್ಪತ್ರೆಗೆ ಸೇರಿಸುವುದು ಉತ್ತಮ. 60 ವರ್ಷ ಕೆಳಗಿರುವವರು ಮನೆಯಲ್ಲೇ ಚಿಕಿತ್ಸೆ ಪಡೆಯಲಿ. ದೆಹಲಿ ಮತ್ತು ಮುಂಬಯಿಗಿಂತಲೂ ಉತ್ತಮ ಸ್ಥಾನದಲ್ಲಿದ್ದೇವೆ. ರ್ಯಡಮ್ ಚೆಕಪ್ ಆಗಬೇಕಾಗಿದೆ ಎಂದು ಹೇಳಿದರು.
ಡಾ. ಭುಜಂಗಶೆಟ್ಟಿ ಮಾತನಾಡಿ, ಎ ಲಕ್ಷಣ ಇರುವವರಿಗೆ ಐಸೋಲೇಷನ್ ಅವಶ್ಯಕತೆ ಇದೆ. ಹೀಗಾಗಿ ಮನೆಯಲ್ಲೇ ಐಸೋಲೇಷನ್ ಮಾಡುವುದು ಒಳ್ಳೆಯದು. ನಮ್ಮ ತಂತ್ರಗಾರಿಕೆ ಬದಲಾಗಬೇಕು. ನಮ್ಮ ಸಲಹೆಯನ್ನು ಸರ್ಕಾರಕ್ಕೆ ಕೊಟ್ಟಿದ್ದೇವೆ. ಅದನ್ನು ಕೂಡಲೇ ಜಾರಿ ಮಾಡುತ್ತೇವೆಂದು ಸರ್ಕಾರ ಹೇಳಿದೆ ಎಂದರು.