ಬೆಂಗಳೂರು: ಗೂಗಲ್‌ನಲ್ಲಿ ಬರುವ ವಿಮರ್ಶೆಗಳು ಸಾಕ್ಷ್ಯಾಧಾರಗಳನ್ನಾಗಿ ಪರಿಗಣಿಸಲಾಗದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಒಪ್ಪಂದದಂತೆ ಸರಕುಗಳನ್ನು ಪೂರೈಕೆ ಮಾಡದ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ರಾಮನಗರದ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಬಂಧನ ಭೀತಿಯಲ್ಲಿದ್ದ ಮಹಾರಾಷ್ಟ್ರ ಮುಂಬೈ ಮೂಲದ ಓಂ ಪ್ರತಾಪ್ ಸಿಂಗ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರಿದ್ದ ನ್ಯಾಯಪೀಠ, ಹಲವು ಷರತ್ತುಗಳನ್ನು ವಿಧಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಅರ್ಜಿದಾರರ ವಿರುದ್ಧ ದೂರು ನೀಡುವುದಕ್ಕೂ ಮುನ್ನ ಗೂಗಲ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಆದರೆ, ಓಂ ಪ್ರತಾಪ್ ಅವರು ಈಗಾಗಲೇ ಹಲವರಿಗೆ ವಂಚನೆ ಮಾಡಲಾಗಿದೆ ಎಂದು ವಿಮರ್ಶಿಸಲಾಗಿದೆ. ಹೀಗಾಗಿ ಅರ್ಜಿದಾರ ಓಂ ಪ್ರಕಾಶ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ. ಆದರೆ, ಗೂಗಲ್ ವಿಮರ್ಶೆಗಳನ್ನು ಸಾಕ್ಷ್ಯಗಳನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಅರ್ಜಿದರರ ವಾದವೇನು?: ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ದೂರುದಾರರಿಗೆ ವಂಚಿಸಬೇಕು ಎಂಬ ಉದ್ದೇಶ ಅರ್ಜಿದಾರರಿಗಿಲ್ಲ. ವಿದೇಶಗಳಿಂದ ದೀಪದ ಎಣ್ಣೆಯ ಉತ್ಪನ್ನಗಳು ಬರಬೇಕಾಗಿತ್ತು. ಆದರೆ, ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದ ವಿಳಂಬವಾಗಿದೆ. ಅಲ್ಲದೇ, ಬರಬೇಕಾದ ಪ್ರಮಾಣದಲ್ಲಿ ಬಂದಿಲ್ಲ. ಹೀಗಾಗಿ ದೂರುದಾರರಿಗೆ ಒದಗಿಸಲಾಗಿಲ್ಲ. ಅಲ್ಲದೇ, ದೂರುದಾರರ ಹಣವನ್ನು ಸಂಬಂಧ ಪಟ್ಟ ಕಂಪನಿಗೆ ಪಾವತಿ ಮಾಡಲಾಗಿದೆ. ಹೀಗಾಗಿ ಹಣ ಹಿಂದಿರುಗಿಸಲೂ ಸಾಧ್ಯವಾಗಿಲ್ಲ. ಜತೆಗೆ, ಈಗಾಗಲೇ 8 ಲಕ್ಷ ರೂ ಗಳನ್ನು ಹಿಂದಿರುಗಿಸಿದ್ದು, ಇನ್ನುಳಿದ 16 ಲಕ್ಷ ರೂಗಳನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲರು, ಅರ್ಜಿದಾರರು ಹಲವರಿಗೆ ವಂಚನೆ ಮಾಡಿರುವ ಸಂಬಂಧ ಗೂಗಲ್ ವಿಮರ್ಶೆಯಲ್ಲಿ ತೋರಿಸಲಾಗಿದೆ. ಹೀಗಾಗಿ ಅರ್ಜಿ ವಜಾಗೊಳಿಸಬೇಕು ಎಂದು ವಾದ ಮಂಡಿಸಿದ್ದರು. ವಾದ ಆಲಿಸಿದ ನ್ಯಾಯಪೀಠ ಅರ್ಜಿದಾರರಿಗೆ ಷರತ್ತು ಬದ್ದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಷರತ್ತುಗಳು: 2 ಲಕ್ಷ ರೂ ಗಳ ಮೌಲ್ಯದ ವೈಯಕ್ತಿಕ ಬಾಂಡ್, ಆದೇಶದ ಪ್ರತಿ ಸಿಕ್ಕ 15 ದಿನದಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ಸಾಕ್ಷ್ಯನಾಶ ಮಾಡಬಾರದು. ಮತ್ತೆ ಇದೇ ರೀತಿ ಕೃತ್ಯಗಳಲ್ಲಿ ಭಾಗಿಯಾಗಬಾರದು. ತನಿಖಾಧಿಕಾರಿಗಳ ಕರೆದಾಗ ಬಂದು ಸಹಕರಿಸಬೇಕು. ಪ್ರತಿ ಮೊದಲನೇ ಸೋಮವಾರ ಠಾಣೆಗೆ ಹಾಜರಾಗಿ ಸಹಿ ಹಾಕಬೇಕು ಎಂದು ಷರತ್ತುಗಳನ್ನು ವಿಧಿಸಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಮೂಲದವರಾದ ರಾಮನಗರದಲ್ಲಿ ದೀಪದ ಎಣ್ಣೆ ಉದ್ಯಮ ನಡೆಸುತ್ತಿರುವ ಪವಿತ್ರಾ ಎಂಬುವರು ಮುಂಬೈ ಮೂಲದ ಡೈಮಂಡ್ ಪೆಟ್ರೋಲಿಯಂ ಸಂಸ್ಥೆಯೊಂದಿಗೆ ದೀಪದ ಎಣ್ಣೆಗೆ ಬೇಕಾದ ಲಿಕ್ವಿಡ್ ಫ್ಯಾರಾಫೈನ್ ಖರೀದಿಸುವ ವ್ಯಾಪಾರ ನಡೆಸುತ್ತಿದ್ದರು. ಅಲ್ಲದೆ, ಈ ಮೊದಲು ಸುಮಾರು 26 ಲಕ್ಷ ರೂ ಗಳಿಗೆ ಖರೀದಿಯನ್ನು ಮಾಡಿದ್ದರು. ಆದರೆ, ಮತ್ತೆ 26 ಲಕ್ಷ ರೂ ಗಳಿಗೆ ಮನವಿ ಸಲ್ಲಿಸಿ ಹಣ ಸಂದಾಯವನ್ನೂ ಮಾಡಿದ್ದರು. ಆದರೆ, ಡೈಮಂಡ್ ಪೆಟ್ರೋಲಿಂ ಪೂರೈಕೆ ಮಾಡಿರಲಿಲ್ಲ.
ಹಲವು ಬಾರಿ ಮನವಿ ಮಾಡಿದರೂ, ಯಾವುದೇ ಪ್ರತಿಕ್ರಿಯೆ ನೀಡಿರುವುದಿಲ್ಲ. ಖುದ್ದು ಭೇಟಿಯಾಗಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ಆ ಬಳಿಕ ಗೂಗಲ್‌ನಲ್ಲಿ ಪರಿಶೀಲಿಸಿದಾಗ ಕಂಪನಿಯ ಮಾಲೀಕ ಓಂ ಪ್ರತಾಪ್ ಸಿಂಗ್ ಅವರು ಹಲವರಿಗೆ ವಂಚಿಸಿದ್ದಾರೆ ಎಂಬುದಾಗಿ ವಿಮರ್ಶೆ ಇತ್ತು. ಆದ್ದರಿಂದ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಕೋರಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರಿಂದ ಬಂಧನ ಭೀತಿಯಲ್ಲಿದ್ದ ಅರ್ಜಿದಾರರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಓದಿ: ನಾಲ್ಕು ಬಾರಿ ಚೆಕ್ ಬೌನ್ಸ್: ಡಾನ್ಸ್ ಸ್ಪರ್ಧೆಯಲ್ಲಿ ಗೆದ್ದವರಿಗೆ ಕೊಟ್ಟ ಬಹುಮಾನದಲ್ಲಿ ವಂಚನೆ!?