ಬೆಂಗಳೂರು : ಗ್ರಾಹಕರೊಬ್ಬರು ಗೋಲ್ಡ್ ಫೈನಾನ್ಸ್ನಲ್ಲಿ ಅಡ ಇಟ್ಟಿದ್ದ ಚಿನ್ನಾಭರಣವನ್ನು ಕಳವು ಮಾಡಿದ್ದ ಮ್ಯಾನೇಜರ್ ಅನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಸಿದ್ದೇಶ್ ಬಂಧಿತ ಆರೋಪಿ. ಆರೋಪಿಯು ಕ್ರಿಕೆಟ್ ಬೆಟ್ಟಿಂಗ್ಗಾಗಿ ತಾನು ಕೆಲಸ ಮಾಡುತ್ತಿದ್ದ ಕಚೇರಿಯಿಂದ 40 ಗ್ರಾಂ ಚಿನ್ನದ ಆಭರಣವನ್ನು ಎಗರಿಸಿ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.
ತುಮಕೂರು ಮಧುಗಿರಿ ಮೂಲದ ಸಿದ್ದೇಶ್ ನಗರದ ನಂದಿನಿ ಲೇಔಟ್ ನಲ್ಲಿ ವಾಸ ಮಾಡುತ್ತಿದ್ದ. ಕಳೆದ ಎರಡೂವರೆ ವರ್ಷಗಳಿಂದ ಗೋಲ್ಡ್ ಫೈನಾನ್ಸ್ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಅಲ್ಲದೇ ಆರೋಪಿಯು ಮಲ್ಲೇಶ್ವರ ಬ್ರಾಂಚ್ ಸೇರಿದಂತೆ ವಿವಿಧ ಕಡೆಗಳಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಕ್ರಿಕೆಟ್ ಬೆಟ್ಟಿಂಗ್ ಚಟಕ್ಕೆ ಬಿದ್ದಿದ್ದ ಮ್ಯಾನೇಜರ್ : ಕ್ರಿಕೆಟ್ ಬೆಟ್ಟಿಂಗ್ ಚಟಕ್ಕೆ ಬಿದ್ದಿದ್ದ ಸಿದ್ದೇಶ್ ಜೂಜಾಟ ಆಡಿ ಸೋತಿದ್ದ. ತಾನು ಮಾಡಿಕೊಂಡಿದ್ದ ಸಾಲವನ್ನು ನೀಡಲು ಉಪಾಯ ಹೂಡಿ, ತಾನು ಕೆಲಸ ಮಾಡುತ್ತಿದ್ದ ಬ್ರಾಂಚ್ ನಲ್ಲಿ ಗ್ರಾಹಕರೊಬ್ಬರು ಇರಿಸಿದ್ದ 40 ಗ್ರಾಂ ಚಿನ್ನಾಭರಣವನ್ನು ಎಗರಿಸಿದ್ದ. ಬಳಿಕ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಪರಾರಿಯಾಗಿದ್ದ. ಕಚೇರಿಯಲ್ಲಿ ಆಡಿಟಿಂಗ್ ಮಾಡುವ ವೇಳೆ 40 ಗ್ರಾಂ ಚಿನ್ನ ಕಳ್ಳತನವಾಗಿರುವುದು ಕಂಡು ಬಂದಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಬ್ರಾಂಚ್ ಮ್ಯಾನೇಜರ್ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ಫೈನಾನ್ಸ್ ಕಚೇರಿಯ ಆಡಳಿತ ಮಂಡಳಿ ನೀಡಿದ ದೂರಿನ ಮೇರೆಗೆ ದೊಡ್ಡಬಳ್ಳಾಪುರದಲ್ಲಿ ತಲೆಮರೆಸಿಕೊಂಡಿದ್ದ ಮ್ಯಾನೇಜರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಮ್ಯಾನೇಜರ್ ಕಳ್ಳತನ ಮಾಡಿದ್ದು ಇದೇ ಮೊದಲಲ್ಲ.ಈ ಹಿಂದೆಯೂ ಚಿನ್ನಾಭರಣ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದನಂತೆ. ಇನ್ನು ಕ್ರಿಕೆಟ್ ಬೆಟ್ಟಿಂಗ್ ಚಟಕ್ಕೆ ಬಿದ್ದಿದ್ದ ಮ್ಯಾನೇಜರ್ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ. ಹೀಗೆ ಕೈ ತುಂಬಾ ಸಾಲ ಮಾಡಿಕೊಂಡಿದ್ದ ಹಿನ್ನೆಲೆ ಇದನ್ನು ತೀರಿಸಲು ಚಿನ್ನ ಕಳ್ಳತನ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಗೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಕಾರುಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಕಳ್ಳನ ಬಂಧನ : ಕಾರುಗಳನ್ನು ಕದ್ದು ನಂಬರ್ ಪ್ಲೇಟ್ ಬದಲಾಯಿಸಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಕಳ್ಳನನ್ನು ಪುಲಕೇಶಿ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮುಳಬಾಗಿಲು ಮೂಲದ ಮೊಹಮ್ಮದ್ ಫೈರೋಜ್ ಪಾಷಾ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ ಸುಮಾರು 20 ಲಕ್ಷ ಮೌಲ್ಯದ ಮಾರುತಿ ಬಲೆನೊ ಕಾರು, ಮಾರುತಿ ಈಕೋ ಹಾಗೂ ಮಿನಿ ಟೆಂಪೋವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯು ಡಿ.ಜೆ.ಹಳ್ಳಿಯ ವೆಂಕಟಾಪುರದಲ್ಲಿ ವಾಸವಾಗಿದ್ದ ಎಂದು ತಿಳಿದುಬಂದಿದೆ. ಇನ್ನು ಈತನೊಂದಿಗೆ ಒಂದು ಗುಂಪು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿರುವುದು ಗೊತ್ತಾಗಿದ್ದು, ಉಳಿದವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿ ಕಾರುಗಳ ಮಾರಾಟ: ಆರೋಪಿಗಳು ಕಾರುಗಳನ್ನು ಕಳ್ಳತನ ಮಾಡಿದ ಬಳಿಕ ಓಎಲ್ಎಕ್ಸ್ನಲ್ಲಿ ಮಾರಾಟಕ್ಕಿರುವ ಕಾರಿನ ನೋಂದಣಿ ಸಂಖ್ಯೆಯನ್ನು ಅಳವಡಿಸುತ್ತಿದ್ದರು. ಬಳಿಕ ಗ್ರಾಹಕರನ್ನು ಸಂಪರ್ಕಿಸಿ ಕಡಿಮೆ ಬೆಲೆಗೆ ಕಾರುಗಳನ್ನು ಮಾರಾಟ ಮಾಡುತ್ತಿದ್ದ. ಇನ್ನು ಆರೋಪಿಯು ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾಲೀಕನ ಹೆಸರಿನಲ್ಲಿ ಸಹಿ ಹಾಕುತ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿ ವಿರುದ್ಧ ದೆಹಲಿ ಹಾಗೂ ಶಿವಮೊಗ್ಗದಲ್ಲಿ ಕಾರು ಹಾಗೂ ಟೆಂಪೋ ಕಳ್ಳತನ ಮಾಡಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ಕಾರು ಕದ್ದು ನಂಬರ್‌ಪ್ಲೇಟ್ ಬದಲಿಸಿ ಮಾರಾಟ; ಖತರ್‌ನಾಕ್ ಖದೀಮನ ಬಂಧನ