ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿಯನ್ನು ವಿಚಾರಣೆಗೆ ಕರೆದೊಯ್ದರೆ ಆತನ ಜೀವ ರಕ್ಷಣೆಗೆ ಎಲ್ಲಾ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೈಕೋರ್ಟ್ ಮುಂಬೈ ಪೊಲೀಸರಿಗೆ ಸೂಚಿಸಿದೆ.
ಇದನ್ನೂ ಓದಿ: ಭೂಗತ ಪಾತಕಿಗೆ ಖಾಕಿಗಳಿಂದ ಫುಲ್ ಡ್ರಿಲ್: ಇಂದು ಏನೇನಾಯ್ತು? ಇಲ್ಲಿದೆ ಅಪ್ಡೇಟ್ಸ್..!
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಹಾಗೂ ನ್ಯಾಯಾಲಯಕ್ಕೆ ಹಾಜರುಪಡಿಸಲು ಮುಂಬೈ ಪೊಲೀಸರ ವಶಕ್ಕೆ ನೀಡಿರುವ ನಗರದ ಸೆಷನ್ಸ್ ಕೋರ್ಟ್ ಆದೇಶ ರದ್ದುಪಡಿಸುವಂತೆ ಕೋರಿ ರವಿ ಪೂಜಾರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾನೆ. ಇಂದು ಈ ಅರ್ಜಿಯನ್ನು ನ್ಯಾಯಮೂರ್ತಿ ನಟರಾಜ ರಂಗಸ್ವಾಮಿ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಕೆಲಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ರವಿ ಪೂಜಾರಿಯನ್ನು ವಿಚಾರಣೆಗಾಗಿ ಮುಂಬೈಗೆ ಕರೆದೊಯ್ದರೆ ಎಲ್ಲಾ ಅಗತ್ಯ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕು. ಆರೋಪಿಯ ಜೀವ ರಕ್ಷಣೆಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಮುಂಬೈ ಪೊಲೀಸರಿಗೆ ನಿರ್ದೇಶಿಸಿತು. ಅಲ್ಲದೆ ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಮಹಾರಾಷ್ಟ್ರ ಸರ್ಕಾರ, ಮುಂಬೈ ಪೊಲೀಸ್ ಆಯುಕ್ತರು, ಡಿಸಿಬಿ ಸಿಐಡಿ ಆಯುಕ್ತರಿಗೆ ತುರ್ತು ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ನವೆಂಬರ್ 27ಕ್ಕೆ ಮುಂದೂಡಿತು.
ಇದನ್ನೂ ಓದಿ: 'ನನಗೆ ಜೀವ ಭಯ ಇದೆ, ಮುಂಬೈಗೆ ಕಳುಹಿಸಬೇಡಿ'.. ಹೈಕೋರ್ಟ್ಗೆ ಡಾನ್ ರವಿ ಪೂಜಾರಿ ಮೇಲ್ಮನವಿ
ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗಿರುವ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ತಮ್ಮ ವಶಕ್ಕೆ ನೀಡುವಂತೆ ಕೋರಿ ನಗರದ 62ನೇ ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ನವೆಂಬರ್ 13ರಂದು ಮುಂಬೈ ಪೊಲೀಸರ ವಶಕ್ಕೆ ನೀಡಲು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿರುವ ಭೂಗತ ಪಾತಕಿ ರವಿ ಪೂಜಾರಿ, ತನಗೆ ಮುಂಬೈನಲ್ಲಿ ವಿರೋಧಿಗಳು ಹಾಗೂ ಶತ್ರುಗಳು ಹೆಚ್ಚಾಗಿದ್ದು, ಅವರಿಂದ ಪ್ರಾಣಾಪಾಯವಿದೆ. ಆದ್ದರಿಂದ ಮುಂಬೈ ಪೊಲೀಸರ ವಶಕ್ಕೆ ನೀಡಬಾರದು ಎಂದು ಕೋರಿದ್ದಾನೆ.