ಬೆಂಗಳೂರು : ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ವೀರಶೈವ ಲಿಂಗಾಯತ ಸಮಾಜದವರಿಗೆ ಪ್ರಾತಿನಿಧ್ಯ ನೀಡಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾ ಮನವಿ ಮಾಡಿದೆ.
ಈ ಕುರಿತು ಇಂದು ಮಹಾಸಭಾ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಧ್ಯಕ್ಷರುಗಳಿಗೆ ಮನವಿ ಪತ್ರ ಸಲ್ಲಿಸಿದ್ದು, ಅಖಿಲ ಭಾರತ ವೀರಶೈವ ಮಹಾಸಭೆ ವೀರಶೈವ-ಲಿಂಗಾಯತ ಸಮುದಾಯ ಏಕೈಕ ಪ್ರಾತಿನಿಧಿಕ ಮಾತೃ ಸಂಸ್ಥೆಯಾಗಿದ್ದು, ರಾಜ್ಯದಲ್ಲಿ ಮಾತ್ರವಲ್ಲದೆ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಗೋವಾ ರಾಜ್ಯಗಳಲ್ಲಿ ಗ್ರಾಮಮಟ್ಟದಿಂದ ರಾಜ್ಯಮಟ್ಟದವರೆಗೆ ಘಟಕಗಳನ್ನು ಹೊಂದಿದೆ. ಈ ಮೂಲಕ ಮಹತ್ತರವಾದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ ಎಂದು ತಿಳಿಸಿದೆ.
ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಕಾಲು ಭಾಗದಷ್ಟು ನಮ್ಮ ಸಮಾಜದವರಿದ್ದಾರೆ. ಶಾಸನ ಸಭೆಗಳಲ್ಲಿ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಸ್ಥಾನ ದೊರೆಯದೆ ಇರುವುದು ಬೇಸರದ ಸಂಗತಿ.
ಅದ್ದರಿಂದ ನಮ್ಮ ಸಮಾಜದ ಜನಸಂಖ್ಯೆಗೆ ಅನುಗುಣವಾಗಿ ಅವಕಾಶ ಕಲ್ಪಿಸುವುದು ಸೂಕ್ತವಾಗಿದೆ. ನಮ್ಮ ಸಂಘಟನೆ ರಾಜಕೀಯ ಚಟುವಟಿಕೆಗಳಲ್ಲಿ ನೇರವಾಗಿ ಪಾಲ್ಗೊಳ್ಳದೇ ಇದ್ದರೂ ಕೂಡಾ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬುದಕ್ಕೆ ಈ ಹಿಂದಿನ ವಿಧಾನಸಭಾ ಮತ್ತು ಲೋಕಸಭೆ ಚುನಾವಣೆಗಳ ಫಲಿತಾಂಶವೇ ಸಾಕ್ಷಿ ಎಂದು ಅನಿಲ ಭಾರತ ವೀರಶೈವ ಮಹಾಸಭಾ ಕಾರ್ಯದರ್ಶಿ ಹೆಚ.ಎಂ.ರೇಣುಕ ಪ್ರಸನ್ನ ತಿಳಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ವೀರಶೈವ-ಲಿಂಗಾಯತ ಸಮಾಜದವರಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.