ಬೆಂಗಳೂರು: ಮರದ ಕೊಂಬೆ ಬಿದ್ದು ಎರಡು ವರ್ಷದಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ರೆಚೆಲ್ ಪ್ರಿಷಾ ಕೊನೆಗೂ ಸಾವನ್ನಪ್ಪಿದ್ದಾಳೆ. ಈ ಬಾಲಕಿ ಎರಡು ವರ್ಷದಿಂದ ಮಣಿಪಾಲ್ ಆಸ್ಪತ್ರೆಯಲ್ಲೆ ಚಿಕಿತ್ಸೆ ಪಡೆಯುತ್ತಿದ್ದಳು. ಬಿಬಿಎಂಪಿಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮುಗ್ಧ ಬಾಲಕಿಯ ಜೀವ ಹಾರಿ ಹೋಗಿದೆ. ಕಂದಮ್ಮನನ್ನು ಕಳೆದುಕೊಂಡ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.
ಮಾರ್ಚ್ 11, 2020 ರಂದು ರಾಮಮೂರ್ತಿ ನಗರದ ಕೌದೇನಹಳ್ಳಿಯಲ್ಲಿ ವಾಸವಾಗಿದ್ದ ಹತ್ತು ವರ್ಷದ ಬಾಲಕಿ ರೆಚೆಲ್ ಪ್ರಿಷಾ, ತನ್ನ ತಂದೆ ಜೊತೆ ಬೈಕ್ನಲ್ಲಿ ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಮರದ ಮೇಲಿಂದ ಒಣ ಕೊಂಬೆಯೊಂದು ರೆಚೆಲ್ ತಲೆ ಮೇಲೆ ಬಿದ್ದಿತ್ತು. ಗಂಭೀರ ಗಾಯಗೊಂಡಿದ್ದ ರೆಚೆಲ್‌ಳನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ವರ್ಷಗಳ ಕಾಲ ಜೀವಕ್ಕಾಗಿ ಹೋರಾಟ ನಡೆಸಿದರು ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆ ಉಸಿರೆಳೆದಿದ್ದಾಳೆ.
ರೆಚೆಲ್ ಸಾವಿಗೆ ನೇರ ಹೊಣೆ ಬಿಬಿಎಂಪಿ ಎಂದು ಹೇಳಲಾಗುತ್ತಿದೆ. ರಸ್ತೆ ಬದಿಯ ಮರಗಳಲ್ಲಿನ ಒಣ ಕೊಂಬೆಗಳನ್ನು ಕಡಿಯುವುದು ಬಿಬಿಎಂಪಿ ಕೆಲಸ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೊಂಬೆಗಳನ್ನು ತೆಗೆದಿರಲಿಲ್ಲ. ಈ ಘಟನೆ ನಡೆಯುವ ಎರಡು ದಿನಗಳ ಹಿಂದೆ ಅದೇ ವಾರ್ಡ್ನ ಮಾಜಿ ಪಾಲಿಕೆ ಸದಸ್ಯೆ ಪದ್ಮವತಿ ಶ್ರೀನಿವಾಸ್ ಅವರ ಪತಿ ಶ್ರೀನಿವಾಸ್ ಅವರು ಅಧಿಕಾರಿಗಳಿಗೆ ಮರದ ಕೊಂಬೆ ಬೀಳುವ ಬಗ್ಗೆ ಮಾಹಿತಿ ನೀಡಿದ್ದರು.
ಆದರೆ, ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ ಕಾರಣ ಒಂದು ಮಗುವಿನ ಪ್ರಾಣ ಕಳೆದುಕೊಂಳ್ಳುವಂತಾಗಿದೆ. ಮುದ್ದು ಕಂದಮ್ಮ ರೆಚಾಲ್ ಸಾವಿಗೆ ಬಿಬಿಎಂಪಿನೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ನಟ ಸುದೀಪ್ ಅಭಿಮಾನಿಯಾಗಿದ್ದ ರೆಚಾಲ್ ಪ್ರಿಷಾ :
ರೆಚಾಲ್ ನಟ ಸುದೀಪ್ ಅಭಿಮಾನಿಯಾಗಿದ್ದಳು. ಆಸ್ಪತ್ರೆಯಲ್ಲಿದ್ದಾಗ ವಿಷಯ ತಿಳಿದು ಸುದೀಪ್ ವಿಡಿಯೋ ಕಾಲ್ ಮಾಡಿ ರೆಚೆಲ್ ಜತೆ ಮಾತನಾಡಿದ್ದರು. ಬಾಲಕಿ ಸ್ಥಿತಿ ನೋಡಿ ನಟ ಸುದೀಪ್ ಬೇಸರ ವ್ಯಕ್ತಪಡಿಸಿದ್ದರು. ತನ್ನ ಪರಿಚಯದವರ ಮೂಲಕ ಚಿಕಿತ್ಸೆ ಕೊಡಿಸುವ ಭರವಸೆಯನ್ನೂ ಸಹಾ ಸುದೀಪ್ ನೀಡಿದ್ದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಗುವಿನ ಆರೋಗ್ಯ ವಿಚಾರಿಸಿದ್ದರು. ಚಿಕಿತ್ಸೆಗೆ ಎಷ್ಟೇ ವೆಚ್ಚವಾದರೂ ಪರವಾಗಿಲ್ಲ ಮಗುವಿನ ಪ್ರಾಣ ಉಳಿಸುವಂತೆ ವೈದ್ಯರಿಗೆ ತಿಳಿಸಿದ್ದರು. ಎರಡು ವರ್ಷದಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ರೆಚೆಲ್ ಪ್ರಿಷಾ ಕೊನೆಗೂ ಇಹಲೋಕ ತ್ಯಜಿಸಿದ್ದಾಳೆ. ಮಗಳ ಸಾವಿನಿಂದ ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ. ಎರಡು ವರ್ಷ ಚಿಕಿತ್ಸೆ ಕೊಟ್ಟರೂ ಫಲಕಾರಿಯಾಗದೇ ರಿಚೆಲ್ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾಳೆ.
ಇದನ್ನು ಓದಿ:ಜೈನ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ: ಮುಸ್ಲಿಂ ಮುಖಂಡನ ವಿರುದ್ಧ ದೂರು