ಬೆಂಗಳೂರು : ಕಾಶ್ಮೀರದ ರಜೌರಿಯಲ್ಲಿ ಬುಧವಾರ ಸಂಜೆ ಭಯೋತ್ಪಾದಕರ ಗುಂಡಿಗೆ ಬಲಿಯಾದ 63ನೇ ರಾಷ್ಟ್ರೀಯ ರೈಫಲ್ಸ್ ಕ್ಯಾಪ್ಟನ್ ಎಂ ವಿ ಪ್ರಾಂಜಲ್ ಅವರಿಗೆ ಗೌರವ ಶ್ರದ್ಧಾಂಜಲಿಗಾಗಿ ಜಿಗಣಿ ನಂದನವನ ಬಡಾವಣೆ ಮನೆಯ ಸಮೀಪ ಅಂತಿಮ ದರ್ಶನಕ್ಕೆ ಸಿದ್ಧತೆ ನಡೆಯುತ್ತಿದೆ. ಮನೆಯ ಮುಂಭಾಗ ಸ್ವಚ್ಛತಾ ಕಾರ್ಯವೂ ನಡೆಯುತ್ತಿದೆ.
ಕಳೆದ ಒಂಬತ್ತು ವರ್ಷಗಳಿಂದ ಪ್ರಾಂಜಲ್ ಪೋಷಕರು ಇಲ್ಲಿ ವಾಸವಿದ್ದಾರೆ. ದಸರಾ ಹಬ್ಬಕ್ಕೆ ಬಂದಿದ್ದ ಪ್ರಾಂಜಲ್, ಒಂದು ವಾರವಿದ್ದು ಬಳಿಕ ಕರ್ತವ್ಯಕ್ಕೆ ತೆರಳಿದ್ದರು. ಮೂಲತಃ ಮೈಸೂರಿನವರಾದ ಪ್ರಾಂಜಲ್, ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನ ಮಾಜಿ ನಿರ್ದೇಶಕ ಎಂ ವೆಂಕಟೇಶ್ ಅವರ ಒಬ್ಬನೇ ಮಗನಾಗಿದ್ದರು. ಮಂಗಳೂರಿನ ಎಂಆರ್ಪಿಎಲ್ನ ಡೆಲ್ಲಿ ಸ್ಕೂಲ್ನಲ್ಲಿ ಎಲ್ಕೆಜಿಯಿಂದ ಎಸ್ಎಸ್ಎಲ್ಸಿವರೆಗೆ ವಿದ್ಯಾಭ್ಯಾಸ ಪಡೆದಿರುವ ಎಂ ವಿ ಪ್ರಾಂಜಲ್, ನಗರದ ಮಹೇಶ್ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿದ್ದರು. ಬಳಿಕ ಮಧ್ಯಪ್ರದೇಶದ ಮಿಲಿಟರಿ ಕಾಲೇಜ್ ಆಫ್ ಟೆಲಿಕಮ್ಯುನಿಕೇಷನ್ನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆದು ಸೇನೆಗೆ ಸೇರಿದ್ದರು.
ಸುರತ್ಕಲ್ನ ಹಿರಿಯ ರಾಷ್ಟ್ರಪತಿ ಸ್ಕೌಟ್ ವಿದ್ಯಾರ್ಥಿಯೂ ಆಗಿದ್ದ ಪ್ರಾಂಜಲ್ ಅವರಿಗೆ ಬೆಂಗಳೂರಿನ ಅದಿತಿ ಎಂಬವರ ಜೊತೆ ವಿವಾಹವಾಗಿತ್ತು. ನಂತರ ಎರಡು ವರ್ಷಗಳ ಬಳಿಕವಷ್ಟೇ ಕಾಶ್ಮೀರಕ್ಕೆ ತೆರಳಿದ್ದು, ಅದಿತಿ ಚೆನ್ನೈನಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿದ್ದರು. ಈಗ ವಿಷಯ ತಿಳಿಯುತ್ತಿದ್ದಂತೆ ಜಿಗಣಿ ಸಮೀಪದ ಬುಕ್ಕಸಾಗರ ನಿವಾಸಕ್ಕೆ ಆಗಮಿಸಿದ್ದಾರೆ.
ಭಯೋತ್ಪಾದಕರ ವಿರುದ್ಧದ ದಾಳಿಯಲ್ಲಿ ಇಬ್ಬರು ಅಧಿಕಾರಿಗಳ ಜೊತೆ ನಾಲ್ವರು ಸೇನಾ ಯೋಧರು ಹುತಾತ್ಮರಾಗಿದ್ದಾರೆ. ಅವರಲ್ಲಿ 63ನೇ ರಾಷ್ಟ್ರೀಯ ರೈಫಲ್ಸ್‌ನ ಕ್ಯಾಪ್ಟನ್ ಎಂ. ವಿ ಪ್ರಾಂಜಲ್ ಒಬ್ಬರು. ಅವರ ಅಗಲಿಕೆಯ ನೋವಿನಲ್ಲಿ ತಂದೆ ವೆಂಕಟೇಶ್ ಮತ್ತು ತಾಯಿ ಅನುರಾಧ ಮತ್ತು ಸಂಬಂಧಿಕರಿದ್ದಾರೆ.
ಪ್ರಾಂಜಲ್ ಅವರ ತಂದೆ ವೆಂಕಟೇಶ್ ಅವರು ಮಾತನಾಡಿ, ಅವನ ಬಲಿದಾನಕ್ಕೆ, ದೇಶಸೇವೆಗೆ ಆರ್ಮಿಯ ಪ್ರೋಟೋಕಾಲ್ ಗಾಢ್ ಆಫ್ ಹಾನರ್ ಅನ್ನು ನಡೆಸಿಕೊಡುತ್ತಾರೆ. ಆಮೇಲೆ ನಾವು ಮಾಡುವ ಕಾರ್ಯವನ್ನು ಮಾಡಿ ಅವನ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇವೆ. ಬಹಳ ಮೃದು ಸ್ವಭಾವದವನು. ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಮಂಗಳೂರಿನಲ್ಲಿಯೇ. ಓದಿದ್ದು ಎಂಆರ್ಪಿಎಲ್ ಸ್ಕೂಲ್ನಲ್ಲಿ. ಪಿಯುಸಿ ಮಹೇಶ್ ಕಾಲೇಜಿನಲ್ಲಿ ಮಾಡಿದ್ದ. ರಾಷ್ಟ್ರೀಯ ವಿದ್ಯಾಲಯ ಆರ್ವಿ ಕಾಲೇಜಿನಲ್ಲಿ ಅವನಿಗೆ ಸಿಇಟಿ ಸೀಟ್ ಸಿಕ್ಕಿತ್ತು. ಆದರೆ ಅವನಿಗೆ ಮೂರನೇ ತರಗತಿಯಿಂದಾನೇ ಸೇನೆಗೆ ಸೇರಬೇಕೆಂಬ ಹಠವಿತ್ತು. ಅದನ್ನು ಬಿಡದೆ ಅವನು ಹಠವನ್ನು ಸಾಧಿಸಿ 2014ರಲ್ಲಿ ಸೇನೆಯ ಎಲ್ಲಾ ಪರೀಕ್ಷೆ ಹಾಗೂ ಇಂಟರ್ವ್ಯೂವ್ಗಳನ್ನು ದಾಟಿ ಮೆಡಿಕಲ್ ಕ್ಲಿಯರ್ ಮಾಡಿ, ಕೆಮಿಕಲ್ ಇಂಜಿನಿಯರಿಂಗ್ ಬಿಟ್ಟು, ನಂತರ ಆಫೀಸರ್ ಟ್ರೈನಿಂಗ್ ಅಕಾಡೆಮಿ ಗಯಾದಲ್ಲಿ ಸೇನೆಗೆ ಸೇರಿದ್ದ.
ಅವನು ಸಲ್ಲಿಸಿರುವಂತಹ ಸೇವೆ ನಿಷ್ಕಲ್ಮಶವಾದದ್ದು. ಈ ಎರಡು ವರ್ಷದ ಹಿಂದೆ ಅವನಿಗೆ ರಾಷ್ಟ್ರೀಯ ರೈಫಲ್ಸ್ನಲ್ಲಿ ಕೆಲಸವಾಗಿತ್ತು. ಆರ್ ಆರ್ ರೈಫಲ್ಸ್ಗಳನ್ನು ಹುಟ್ಟುಹಾಕಿರುವುದೇ ಜಮ್ಮು ಕಾಶ್ಮೀರದಲ್ಲಿ ಆತಂಕವಾದಿಗಳನ್ನು ಎದುರಿಸಿ ದಮನ ಮಾಡುವುದಕ್ಕೆ. ಪ್ರಾಂಜಲ್ ರೀತಿ ಸುಮಾರು ಜನ ಭಾರತದಲ್ಲಿ ಇದ್ದಾರೆ. ಸುಮಾರು ಫ್ಯಾಮಿಲಿಯವರು ಮಕ್ಕಳನ್ನು ಆರ್ಮಿಗೆ ಕಳುಹಿಸಿಕೊಡುತ್ತಾರೆ. ಇವತ್ತಿಗೆ ಅವನ ಸ್ಮರಣೆ ಬರುತ್ತಿದೆ. ಎಷ್ಟೋ ಜನ ಸೈನಿಕರು ನಿರ್ಭಯವಾಗಿ ತನ್ನದು ಅಂತ ಯಾವುದನ್ನೂ ಲೆಕ್ಕಿಸದೆ, ತನ್ನ ಜೀವವನ್ನೇ ಮುಡುಪಾಗಿಟ್ಟು ದೇಶವನ್ನು ಕಾಪಾಡುತ್ತಿದ್ದಾರೆ. ಈ ರೀತಿ ಲಕ್ಷ ಜನ ಇದ್ದಾರೆ. ಅವನ ಸೀನಿಯರ್ಸ್, ಜೂನಿಯರ್ಸ್, ಕ್ಲಾಸ್ಮೇಟ್ಸ್ ತುಂಬಾ ಜನರಿದ್ದಾರೆ. ಇವತ್ತು ಅವನೊಬ್ಬ ನಮ್ಮ ಕಣ್ಣಿಗೆ ಕಾಣಬಹುದು. ಆ ರೀತಿ ಸುಮಾರು ಅರ್ಹ ಸೈನಿಕರು ಇದ್ದಾರೆ. ಅವರೆಲ್ಲರಿಗೂ ಹ್ಯಾಟ್ಸ್ ಆಫ್ ಎಂದ ಅವರು, ಬೆಂಗಳೂರು ಹೊಸೂರು ಹೆದ್ದಾರಿಯ ಕೂಡ್ಲು ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.
ಮೇಜರ್ ಆಗುವಂತಹ ಅವಕಾಶ ಇತ್ತು: ನಾಲ್ಕೈದು ದಿನಗಳಾಗಿರಬಹುದು, ನಾನು ಒಂದು ಇಂಟಲಿಜೆನ್ಸ್ ರಿಪೋರ್ಟ್ ಇದೆ, ಸರ್ವೇಲೆನ್ಸ್ಗೆ ಹೋಗ್ತಾ ಇದ್ದೇನೆ. ನಾನೇ ಮೆಸೇಜ್ ಆದ್ರು ಕಳುಹಿಸುತ್ತೇನೆ ಅಥವಾ ಫೋನ್ ಆದ್ರು ಮಾಡ್ತೀನಿ, ನೀವೆನೂ ಮಾಡಬೇಡಿ ಎಂದಿದ್ದ. ಮಧ್ಯ ಮಧ್ಯೆ ಮೆಸೇಜ್ಗಳು ಬರುತ್ತಿದ್ದವು. ಕರೆ ಮಾಡಿ ಒಂದು ಮೂರ್ನಾಲ್ಕು ದಿನಗಳು ಆಗಿರಬಹುದು. ಅಲ್ಲಿನ ಗ್ರೌಂಡ್ ರಿಯಾಲಿಟಿ ಏನಿದೆಯೋ ಎಂಬುದು ನಮಗೆ ಏನೂ ಗೊತ್ತಾಗುತ್ತಿರಲಿಲ್ಲ. ಈ ಒಂದು ಘಟನೆ ಆದಮೇಲೆ ನಮಗೆ ಒಂದು ಯೋಚನೆ ಬರುತ್ತೆ, ಅವನು ಯಾಕೆ ಈ ರೀತಿ ಬರೆದಿದ್ದ, ಅವನು ಏಕೆ ಬೆಳಗ್ಗೆ ಮಾತೇ ಆಡಲಿಲ್ಲ. ಅವನ ಲಾಸ್ಟ್ ಮೆಸೇಜ್ ಮೊನ್ನೆ ಬಂದಿತ್ತು. ಬೆಳಗ್ಗೆ ಮೆಸೇಜ್ ಏನೂ ಬರಲಿಲ್ಲ. ಮಧ್ಯಾಹ್ನ ಕೂಡಾ ಬರಲಿಲ್ಲ ಎಂದರು. ಅಲ್ಲದೇ, ಅವನು ಬೇಕಾಗಿದ್ದ ಎಲ್ಲಾ ಪರೀಕ್ಷೆಗಳನ್ನು ತೇರ್ಗಡೆ ಹೊಂದಿ, ಮೂರು ವರ್ಷ ಕ್ಯಾಪ್ಟನ್ ಆದಮೇಲೆ ಮೇಜರ್ ಆಗುವಂತಹ ಅವಕಾಶ ಇತ್ತು ಎಂದು ಅವರ ತಂದೆ ಗದ್ಗದಿತರಾದರು.
ಇದನ್ನೂ ಓದಿ: ಗಡಿಯಲ್ಲಿ ಹುತಾತ್ಮರಾದ ಕ್ಯಾ. ಪ್ರಾಂಜಲ್ ಶಾಲಾ ದಿನಗಳಲ್ಲಿ ಶಿಕ್ಷಕರ ನೆಚ್ಚಿನ ವಿದ್ಯಾರ್ಥಿ; ಕಣ್ಣೀರಿಟ್ಟ ಶಿಕ್ಷಕಿ