ಬೆಂಗಳೂರು : ಸ್ವಾತಂತ್ರ್ಯ ಸೇನಾನಿ ದೊರೆಸ್ವಾಮಿ ಅವರ ಅಂತ್ಯಕ್ರಿಯೆಯನ್ನ ಸಕಲ ಸರ್ಕಾರಿ ಗೌರವಗಳ ಮೂಲಕ ನೆರವೇರಿಸಲಾಗಿದೆ.
ಗಾರ್ಡ್ ಆಫ್ ಹಾನರ್ನೊಂದಿಗೆ ದೊರೆಸ್ವಾಮಿಯವರಿಗೆ ಅಂತಿಮ ನಮನಸಲ್ಲಿಸಿ, ಪಾರ್ಥಿವ ಶರೀರದ ಮೇಲೆ ರಾಷ್ಟ್ರ ಧ್ವಜ ಹಾಕಿ, 3 ಸುತ್ತು ಗುಂಡು ಹಾರಿಸಿ ಬ್ಯಾಂಡ್ ಬಾರಿಸುವ ಮೂಲಕ ಗೌರವ ಸೂಚಿಸಲಾಯಿತು.
ಬ್ರಾಹ್ಮಣರ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆದಿದ್ದು, 3 ಸುತ್ತು ಗುಂಡು ಹಾರಿಸಿದ ನಂತರ ಪಾರ್ಥಿವ ಶರೀರವನ್ನು ಚಿತೆ ಮೇಲಿಡಲಾಯಿತು. ಇನ್ನು, ದೊರೆಸ್ವಾಮಿ ಅವರ ಮಗನಿಂದ ಅಂತಿಮ ವಿಧಿ-ವಿಧಾನ ನಡೆಯಿತು.
ದೊರೆ ನೆನಪು ಮಾತ್ರ : ಸ್ವಾತಂತ್ರ್ಯ ಹೋರಾಟಗಾರ, ಶತಾಯುಸಿ ಹೆಚ್ ಎಸ್ ದೊರೆಸ್ವಾಮಿ ಇನ್ಮುಂದೆ ನೆನಪು ಮಾತ್ರ. ಕಳೆದ 15 ದಿನಗಳ ಹಿಂದೆ ಕೋವಿಡ್ ಸೋಂಕಿನಿಂದ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಇವರು, ಜಯನಗರದ ಮಗಳ ಮನೆಯಲ್ಲಿ ವಿಶ್ರಾಂತಿ ಪಡಿಯುತ್ತಿದ್ದರು.
ಕಳೆದ ರಾತ್ರಿ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಮಧ್ಯಾಹ್ನದ ವೇಳೆಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತಪಟ್ಟ ಬಳಿಕ ಕೋವಿಡ್ ತಪಾಸಣೆ ಮಾಡಿದಾಗ ಪಾಸಿಟಿವ್ ಆಗಿರೋದು ಪತ್ತೆಯಾಗಿದೆ.
ನಂತರ ನಗರ ಪೊಲೀಸ್ ಆಯುಕ್ತರು ಸಹ ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದಾರೆ. ಆ್ಯಂಬುಲೆನ್ಸ್ ನಲ್ಲಿ ಪಾರ್ಥಿವ ಶರೀರವನ್ನು ಮನೆಯ ಬಳಿಗೆ ತಂದು ಐದು ನಿಮಿಷಗಳ ಕಾಲ ಅಂತಿಮ ದರ್ಶನಕ್ಕೆ ಅವಕಾಶ ಕೊಟ್ಟು, ಕೊನೆಗೆ ಚಾಮರಾಜಪೇಟೆಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.
"ನೀವಿಲ್ಲದೇ ಅನಾಥರಾಗಿದ್ದೇವೆ"… ದೊರೆಸ್ವಾಮಿ ನಿಧನಕ್ಕೆ ಸುಮಲತಾ, ಪ್ರಕಾಶ್ ರೈ ಕಂಬನಿ
ಅಂತ್ಯಕ್ರಿಯೆ ವೇಳೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಕುಟುಂಬಸ್ಥರು ನೆರೆದಿದ್ದರೂ ಕುಟುಂಬಸ್ಥರಿಗೆ ಅವಕಾಶ ಮಾಡಿಕೊಡಲಾಗಿತ್ತು. ಕೋವಿಡ್ ಪ್ರೋಟೋಕಾಲ್ ಪ್ರಕಾರವೇ ಅಂತ್ಯಕ್ರಿಯೆ ನಡೆಸಲಾಯಿತು.
ಸ್ವಾತಂತ್ರ್ಯ ಹೋರಾಟಗಾರನ ಅಂತ್ಯಕ್ರಿಯೆಗೆ ಸಕಲ ಸಿದ್ದತೆ : ದೊರೆಸ್ವಾಮಿ ಅಮರ್ ರಹೇ ಎಂದು ಆಪ್ತರ ಘೋಷಣೆ