ಬೆಂಗಳೂರು: ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯಸಂಸ್ಕಾರ ಮಾಡಲು ಕೆಲ ಕುಟುಂಬಸ್ಥರು ಮುಂದೆ ಬರದಿರುವ ಹಿನ್ನೆಲೆ ಅಂತಹ ಶವಗಳನ್ನು ಆಯಾ ಧರ್ಮದ ವಿಧಿವಿಧಾನದಂತೆ ಗೌರವಯುತವಾಗಿ ಅಂತ್ಯಸಂಸ್ಕಾರ ನಡೆಸಿ ಅಂತಿಮ ವಿಧಿವಿಧಾನಗಳನ್ನು ಆಯಾಯ ತಹಶೀಲ್ದಾರ್, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ನೆರವೇರಿಸುವಂತೆ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
![funeral-of-covid-dead-bodies-will-be-held-by-district-administration](https://etvbharatimages.akamaized.net/etvbharat/prod-images/kn-bng-10-revenue-depatment-order-about-ashes-dispercement-ka10032_03062021210701_0306f_1622734621_543.jpg)
ಈಗಾಗಲೇ ಕಂದಾಯ ಸಚಿವ ಆರ್. ಅಶೋಕ್ ಖುದ್ದು ನೇತೃತ್ವವಹಿಸಿ ಸುಮಾರು 500ಕ್ಕೂ ಹೆಚ್ಚು ಅಸ್ಥಿಗಳನ್ನ ಕಾವೇರಿ ನದಿ ತೀರದಲ್ಲಿ ವಿಸರ್ಜನೆ ಮಾಡಿದ್ದರು. ಈ ವೇಳೆಯೇ ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರು ಮುಂದಾಗದ ವೇಳೆ ಖುದ್ದು ಕಂದಾಯ ಇಲಾಖೆಯ ವತಿಯಿಂದಲೇ ಅಂತಿಮ ವಿಧಿ ವಿಧಾನಗಳನ್ನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.
ಅದರಂತೆ ಈಗ ಇಲಾಖೆಯ ವತಿಯಿಂದ ಅಧಿಕೃತ ಆದೇಶ ಹೊರಡಿಸಲಾಗಿದ್ದು, ಆಯಾ ಜಿಲ್ಲೆಗಳಲ್ಲಿ ಸಾಮೂಹಿಕ ಅಂತ್ಯಸಂಸ್ಕಾರಕ್ಕೆ ಹಾಗೂ ಅಂತಿಮ ವಿಧಿ ವಿಧಾನಗಳಿಗೆ ಜಿಲ್ಲಾಡಳಿತವೇ ಮುಂದಾಗಲಿದೆ ಎಂದು ತಿಳಿಸಲಾಗಿದೆ.