ಬೆಂಗಳೂರು: ನಗರದಲ್ಲಿ ಕೋವಿಡ್-19 ಸೋಂಕಿತೆ ಮೃತಪಟ್ಟಿದ್ದು, ಸುಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ಮೃತ ದೇಹದ ಅಂತ್ಯಸಂಸ್ಕಾರ ನಡೆಯಿತು.
ನಗರದಲ್ಲಿ ಕೊರೊನಾಕ್ಕೆ ಬಲಿಯಾದ ಐದನೇ ಪ್ರಕರಣ ಇದಾಗಿದ್ದು, ಮಧ್ಯಾಹ್ನ ಮೂರು ಗಂಟೆಗೆ ವಿದ್ಯುತ್ ಚಿತಾಗಾರಕ್ಕೆ ವಿಕ್ಟೋರಿಯಾದಿಂದ ಮೃತದೇಹ ರವಾನಿಸಲಾಗಿತ್ತು. ಈ ವೇಳೆಗಾಗಲೇ ಸುಮನಹಳ್ಳಿ ಚಿತಾಗಾರದ ಐದು ಜನ ನೌಕರರು ಪಾಲಿಕೆ ನೀಡಿರುವ ಸುರಕ್ಷತಾ ಕಿಟ್ ಧರಿಸಿ ಸಿದ್ಧರಾಗಿದ್ದರು. ಆದರೆ ವಿಪರ್ಯಾಸ ಎಂದರೆ ಸುರಕ್ಷತಾ ಕಿಟ್ನ ಗುಣಮಟ್ಟವೇ ಕಳಪೆಯಾಗಿದ್ದು, ನೌಕರರು ದೇಹವನ್ನು ಸರಿಯಾಗಿ ಮುಚ್ಚುವುದಕ್ಕೂ ಆ ಪ್ಲಾಸ್ಟಿಕ್ ಏಪ್ರಾನ್ ಸಾಲುತ್ತಿಲ್ಲ. ಜೊತೆಗೆ ಮುಖಕ್ಕೂ ಕೇವಲ ಮಾಸ್ಕ್ ಸೌಲಭ್ಯ ಮಾತ್ರ ನೀಡಲಾಗಿದೆ.
ಪಾಲಿಕೆ ಈ ವರೆಗೆ ಹನ್ನೊಂದು ವಿದ್ಯುತ್ ಚಿತಾಗಾರಗಳ ತಲಾ ನಾಲ್ಕು ಮಂದಿಗೆ ಈ ಪಿಪಿಪಿ ಕಿಟ್ ನೀಡಿದ್ದು, ಇದು ಸುರಕ್ಷತೆ ನೀಡುತ್ತಿಲ್ಲ, ಭಯಪಟ್ಟೇ ಅಂತ್ಯಸಂಸ್ಕಾರ ಮಾಡಬೇಕಾದ ಸ್ಥಿತಿ ಇದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಚಿತಾಗಾರದ ನೌಕರರೊಬ್ಬರು ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಮೃತದೇಹದ ಅಂತ್ಯಸಂಸ್ಕಾರದ ಬಳಿಕ, ಚಿತಾಗಾರವನ್ನು ಸೋಂಕು ನಿವಾರಕ ಔಷಧಿ ಸಿಂಪಡಿಸಿ ನೈರ್ಮಲ್ಯೀಕರಣಗೊಳಿಸಲಾಗಿದೆ. ಆದರೂ ನೌಕರರ ಸುರಕ್ಷತೆಗೆ ಬೇಕಾದ ಮಾಸ್ಕ್, ಗ್ಲೌಸ್, ಕಿಟ್ಗಳ ಕೊರತೆ ಇದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ವರೆಗೆ ನಗರದಲ್ಲಿ ಸಾವನ್ನಪ್ಪಿದ ಐದು ಪ್ರಕರಣಗಳಲ್ಲಿ, ಮೂವರ ಮೃತ ದೇಹವನ್ನು ಕಲ್ಪಳ್ಳಿ, ಹೆಬ್ಬಾಳ ಹಾಗೂ ಉವತ್ತು ಸುಮನಹಳ್ಳಿಯಲ್ಲಿ ಸುಡಲಾಗಿದೆ. ಆದ್ರೆ ನೌಕರರ ಆರೋಗ್ಯವನ್ನು ಮಾತ್ರ ಕಡೆಗಣೆಸಲಾಗಿದೆ ಎಂದು ದೂರು ಕೇಳಿ ಬಂದಿವೆ. ಪಾಲಿಕೆ ಇನ್ನಾದ್ರೂ ಹೆಚ್ಚಿನ ಗಮನವಹಿಸಿ ಸ್ಮಶಾನ ನೌಕರರು ತಮ್ಮ ಕೆಲಸ ನಿರ್ವಹಿಸಲು ಸೂಕ್ತ ಸುರಕ್ಷತಾ ಕಿಟ್ಗಳನ್ನು ನೀಡಬೇಕಿದೆ.