ಬೆಂಗಳೂರು: ಇತ್ತೀಚೆಗಷ್ಟೇ ಕೊರೊನಾ ಸೋಂಕು ತಗುಲಿ ಯಾವುದೇ ಗಂಭೀರ ಸಮಸ್ಯೆಗಳಿಲ್ಲದೇ ಉತ್ತಮ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಎಚ್.ಎಸ್. ದೊರೆಸ್ವಾಮಿ(104) ಇಂದು ವಿಧಿವಶರಾಗಿದ್ದಾರೆ.
104 ವರ್ಷ ವಯಸ್ಸಿನ ದೊರೆಸ್ವಾಮಿಯವರು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಕೋವಿಡ್ ಮುಕ್ತರಾಗಿ ಮನೆಗೆ ತೆರಳಿದ್ದರು. ಆದರೆ ಮೇ 17 ರಂದು ನಿಶ್ಯಕ್ತಿ ಮತ್ತಿತರ ದೈಹಿಕ ಅಸ್ವಸ್ಥತೆಯ ಕಾರಣ ಪುನಃ ಆಸ್ಪತ್ರೆಗೆ ದಾಖಲಾಗಿದ್ದರು.
ಇಂದು ಹೃದಯಾಘಾತದಿಂದ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಳೆದ ತಿಂಗಳು ತಮ್ಮ 104ನೇ ವರ್ಷದ ಜನ್ಮದಿನ ಆಚರಿಸಿಕೊಂಡ ದೊರೆಸ್ವಾಮಿ ಅಪಾರ ಜೀವನೋತ್ಸಾಹಿ ಮತ್ತು ಅಪರಿಮಿತ ಆಶಾವಾದಿಯಾಗಿದ್ದು, ಕಳೆದ ಒಂದೆರಡು ವರ್ಷಗಳಿಂದ ಮನೆಯಿಂದ ಹೊರಗಡೆ ಹೋಗಿ ಹೋರಾಟಗಳಲ್ಲಿ ಪಾಲ್ಗೊಳ್ಳುವುದನ್ನು ಕಡಿಮೆ ಮಾಡಿದ್ದರು.
ಆದರೆ ಇದೀಗ ಹೋರಾಟದ ರಂಗದಿಂದ ಶಾಶ್ವತವಾಗಿ ಹೊರನಡೆದಿದ್ದಾರೆ. ಈ ಮೂಲಕ ಹೋರಾಟಗಾರರು, ಚಳವಳಿಗಾರರಿಗೆ, ಸಾಮಾಜಿಕ ರಂಗಕ್ಕೆ ತುಂಬಲಾರದ ನಷ್ಟವಾಗಿದೆ.
