ಬೆಂಗಳೂರು : ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಇಂದು ಮರಳಿ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ. 104 ವರ್ಷ ವಯಸ್ಸಿನ ಉತ್ಸಾಹದ ಚಿಲುಮೆಯಂತಿದ್ದ ದೊರೆಸ್ವಾಮಿಯವರು ಬಿಎಸ್ಸಿ ಪದವಿ ಮುಗಿಸಿ ಉಪನ್ಯಾಸಕರಾಗಿ ಕೂಡ ಸೇವೆ ಸಲ್ಲಿಸಿದ್ದರು.
ಓದಿ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಹೆಚ್.ಎಸ್.ದೊರೆಸ್ವಾಮಿ ಇನ್ನಿಲ್ಲ
ಗಾಂಧೀಜಿಯ ಬಗ್ಗೆ ಅಪಾರ ಗೌರವ ಹೊಂದಿದ್ದ ಅವರಿಗೆ ಗಾಂಧೀಜಿಯವರೇ ಪ್ರೇರಣೆಯಾಗಿದ್ದರು. ನಂದಿಬೆಟ್ಟದಲ್ಲಿ ಮೊದಲ ಬಾರಿಗೆ ಗಾಂಧೀಜಿಯವರನ್ನು ಕಂಡಿದ್ದರು. ಗಾಂಧಿ ಸೇವಾ ಪ್ರಶಸ್ತಿಗೆ ಭಾಜನರಾಗಿದ್ದ ಈ ದೇಶಪ್ರೇಮಿ ಕ್ವಿಟ್ ಇಂಡಿಯಾ ಚಳವಳಿಯಲ್ಲೂ ಭಾಗಿಯಾಗಿದ್ದರು.
'ದೊರೆ' ಬಾಲ್ಯದ ಇತಿಹಾಸ : ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಅವರ ಪೂರ್ಣ ಹೆಸರು ಹಾರೊಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ. ಹುಟ್ಟಿದ್ದು ಏಪ್ರಿಲ್ 10, 1918ರಲ್ಲಿ ಕನಕಪುರ ತಾಲೂಕು ಹಾರೋಹಳ್ಳಿಯಲ್ಲಿ.
ತಮ್ಮ ಚಿಕ್ಕ ವಯಸ್ಸಿನಲ್ಲೇ ಅಂದರೆ ಕೇವಲ 5 ವರ್ಷದವರಿದ್ದಾಗ ತಂದೆ-ತಾಯಿಯನ್ನು ಕಳೆದುಕೊಂಡರು. ಬಳಿಕ ತಾತ ಶ್ಯಾನುಭೋಗ ಶಾಮಣ್ಣರ ಪಾಲನೆಯಲ್ಲಿ ದೊಡ್ಡವರಾದರು.
ಬ್ರಿಟಿಷರ ಕಾಲದಲ್ಲಿ ಕನ್ನಡದ ಜನಪ್ರಿಯ ಪತ್ರಿಕೆ ಎನಿಸಿದ್ದ ಪೌರವಾಣಿಯಲ್ಲಿ ವರದಿಗಾರರಾಗಿ, ಪುಸ್ತಕ ಪ್ರಕಾಶನದಲ್ಲಿ ತಮ್ಮ ಛಾಪು ಮೂಡಿಸಿದರು. ಇನ್ನು, ವಿದ್ಯಾಭ್ಯಾಸ ಮುಗಿದ ನಂತರ ಜೂನ್ 1942ರಲ್ಲಿ ಬೆಂಗಳೂರಿನ ಪ್ರೌಢಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಿ ವೃತ್ತಿ ಆರಂಭಿಸಿದರು.
ಅದೇ ವರ್ಷ ಆಗಸ್ಟ್ ತಿಂಗಳಲ್ಲಿ ಆರಂಭವಾದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡರು. ಬ್ರಿಟಿಷರ ಆಡಳಿತಕ್ಕೆ ಧಕ್ಕೆ ತರುವ ಉದ್ದೇಶದಿಂದ ದಾಖಲೆಗಳನ್ನು ಸುಟ್ಟುಹಾಕಲೆಂದು ಪೋಸ್ಟ್ಬಾಕ್ಸ್ಗಳು ಮತ್ತು ರೆಕಾರ್ಡ್ ರೂಮ್ಗಳಲ್ಲಿ ಟೈಮ್ಬಾಂಬ್ಗಳನ್ನು ಸ್ಫೋಟಿಸಿದ್ದರು. ಕಾರ್ಮಿಕ ಚಳವಳಿಗಳಲ್ಲೂ ಸಕ್ರಿಯರಾಗಿ ಪಾಲ್ಗೊಂಡಿದ್ದರು.
ಪತ್ನಿ ಕಳೆದುಕೊಂಡ ಮೇಲೆ ಕುಗ್ಗಿ ಹೋಗಿದ್ದ ದೊರೆಸ್ವಾಮಿ : ದೊರೆಸ್ವಾಮಿಯವರ ಪತ್ನಿ ಲಲಿತಮ್ಮರನ್ನ ಯಾವುದೇ ಜಾತಕ, ಕುಲ-ಗೋತ್ರ ನೋಡದೇ 1950ರ ಡಿಸೆಂಬರ್‌ನಲ್ಲಿ ಮದುವೆ ಆಗಿದ್ದರು.
ಒಬ್ಬ ಪುತ್ರ-ಪುತ್ರಿಯನ್ನು ಹೊಂದಿದ್ದರು. ಆದರೆ, 2019 ಡಿಸೆಂಬರ್‌ನಲ್ಲಿ ಅನಾರೋಗ್ಯ ಕಾರಣಕ್ಕೆ ನಿಧನ ಹೊಂದಿದ್ದರು. ಇದೇ ವೇಳೆ ಅವರ ಮೃತ ದೇಹವನ್ನ ಕಿಮ್ಸ್‌ಗೆ ಹಸ್ತಾಂತರ ಮಾಡಲಾಯ್ತು.
ಇದಾದ ಬಳಿಕ ಉತ್ಸಾಹ ಚಿಲುಮೆಯಂತ್ತಿದ್ದ ದೊರೆಸ್ವಾಮಿ, ಪತ್ನಿ ಕಳೆದುಕೊಂಡ ಮೇಲೆ ಕುಗ್ಗಿ ಹೋಗಿದ್ದರಂತೆ. ಪತ್ನಿ ಲಲಿತಮ್ಮ ಕೂಡ ಜಯದೇವ ಆಸ್ಪತ್ರೆಯಲ್ಲೇ ಮೃತರಾಗಿದ್ದರು. ಇದೀಗ ದೊರೆಸ್ವಾಮಿಯವರು ಅದೇ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.