ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ತಮ್ಮ ಜೀವನದ ಕೊನೇ ಗಳಿಗೆಯಲ್ಲೂ ದೊಡ್ಡತನ ಮೆರೆದಿದ್ದಾರೆ. ಕೋವಿಡ್ ನ ಈ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಎಷ್ಟೇ ಲಕ್ಷ ಆದ್ರೂ ಪರವಾಗಿಲ್ಲ ಆಸ್ಪತ್ರೆಯಲ್ಲಿ ಒಂದು ಐಸಿಯು ಬೆಡ್ ಕೊಡಿ ಅನ್ನೋರ ಮಧ್ಯೆ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರು ಆ ಬೆಡ್ನ್ನು ಅವಶ್ಯಕತೆ ಇರುವ ಯುವಕರಿಗೆ ಕೊಡಿ ಎಂದು ವೈದ್ಯರಿಗೆ ಹೇಳಿದ್ದರಂತೆ.
ಹೌದು, ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಸಿ ಎನ್ ಮಂಜುನಾಥ್ ಅವರು ಆಸ್ಪತ್ರೆಯಲ್ಲಿ ಐಸಿಯು ಬೆಡ್ ಕೊಡಿಸುವೆ ಎಂದು ಹೇಳಿದ್ದರಂತೆ. ಅದಕ್ಕೆ ಪ್ರತಿಕ್ರಿಯಿಸಿದ್ದ ದೊರೆಸ್ವಾಮಿ ಅವರು'ನನಗೆ ಬೆಡ್ ಅವಶ್ಯಕತೆ ಇಲ್ಲ, ಇದೇ ಬೆಡ್ನ್ನ ಯಾರಾದ್ರೂ ಅನಾರೋಗ್ಯದಿಂದ ಬಳಲುತ್ತಿರೋ ಯವಕರಿಗೆ ಕೊಡಿ' ಅಂತ ಹೇಳಿದ್ದರಂತೆ. ಈ ಮೂಲಕ ಅನಾರೋಗ್ಯದ ಸಂದರ್ಭದಲ್ಲೂ ಸಾಮಾಜಿಕ ಕಳಕಳಿಯನ್ನ ಅವರು ಮೆರೆದಿದ್ದರು.
ಓದಿ-ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ನಿಧನ.. ಸಿಎಂ-ಮಾಜಿ ಸಿಎಂ ಸಂತಾಪ
ಈ ರೀತಿ ಮಾತುಗಳನ್ನ ದೊರೆಸ್ವಾಮಿಯವರು ಆಡುವಾಗ, ಬನ್ನಿ ಸರ್ ಬೆಡ್ ಸಮಸ್ಯೆ ಇಲ್ಲ, ನಿಮಗಾಗಿ ಬೆಡ್ ವ್ಯವಸ್ಥೆ ಮಾಡಿದ್ದೇವೆ ಅಂತಾ ಖುದ್ದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್ ಅವರು ಮನವೊಲಿಸಿದ್ರಂತೆ. ಆಸ್ಪತ್ರೆಯ ಬೆಡ್ ನಲ್ಲಿ ಕೊನೆಗಳಿಗೆಯಲ್ಲೂ ಕೂಡ ಇದೇ ಮಾತನ್ನು ಅವರು ಹೇಳ್ತಾನೆ ಇದ್ರು ಅಂತಾ ನೆನೆದು ಡಾ. ಮಂಜುನಾಥ್ ಭಾವುಕರಾದ್ರು.