ಬೆಂಗಳೂರು: ರಾಜ್ಯದ ಹಲವು ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳ ಖರೀದಿಯಲ್ಲಿ ವ್ಯಾಪಕ ಅವ್ಯವಹಾರ ನಡೆದಿರುವ ಬಗ್ಗೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಂಟಿ ಸದನ ಸಮಿತಿ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ.
ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ವೆಂಕಟ ರೆಡ್ಡಿ ಮುದ್ನಾಳ್ ಅವರ ಪ್ರಶ್ನೆಗೆ ಧ್ವನಿಗೂಡಿಸಿದ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್, ಅರಗ ಜ್ಞಾನೇಂದ್ರ, ಸಿದ್ದು ಸವದಿ, ಕಾಂಗ್ರೆಸ್ನ ಯು.ಟಿ.ಖಾದರ್ ಸೇರಿದಂತೆ ಹಲವು ಸದಸ್ಯರು ಶುದ್ಧ ಕುಡಿಯುವ ನೀರಿನ ಘಟಕಗಳ ಖರೀದಿಯಲ್ಲಿ ಭಾರೀ ಪ್ರಮಾಣದಲ್ಲಿ ಹಗರಣ ಆಗಿದೆ. ಮಾರುಕಟ್ಟೆಯಲ್ಲಿ 3-4 ಲಕ್ಷ ರೂ.ಗೆ ಒಂದು ಘಟಕ ಸಿಗುತ್ತಿದೆ. ಆದರೆ ಅಧಿಕಾರಿಗಳು 14ರಿಂದ 15 ಲಕ್ಷ ರೂ.ಗೆ ಖರೀದಿ ಮಾಡಿದ್ದಾರೆ. ಇದರಲ್ಲಿ ಭಾರೀ ಅವ್ಯವಹಾರ ನಡೆದಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಆಗ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಾನು ಅನೇಕ ಕಡೆ ಭೇಟಿ ಕೊಟ್ಟಾಗ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ದೂರುಗಳು ಸಹ ಬಂದಿವೆ. ಕೆಲವರು ಸರ್ಕಾರಕ್ಕೆ ಟೋಪಿ ಹಾಕಿ ಹೋಗಿದ್ದಾರೆ. ಹೀಗಾಗಿ ಇದನ್ನು ಜಂಟಿ ಸದನ ಸಮಿತಿ ಮೂಲಕ ತನಿಖೆ ಮಾಡಿಸಲಾಗುವುದು. ಎರಡು ತಿಂಗಳೊಳಗೆ ಸಮಗ್ರ ತನಿಖೆ ನಡೆಸಿ ಸದನದಲ್ಲೇ ವರದಿಯನ್ನು ಮಂಡಿಸಲಾಗುವುದು ಎಂದರು. ಯಾರು ಅವ್ಯವಹಾರ ನಡೆಸಿ ಹಣವನ್ನು ಲೂಟಿ ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲೇಬೇಕು. ಯಾವುದೇ ಕಾರಣಕ್ಕೂ ಅವರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಯಾರೇ ತಪ್ಪು ಮಾಡಿದ್ದರೂ ಕಾನೂನು ಪ್ರಕಾರ ಶಿಕ್ಷೆಯಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ : ಬದಲಾಗಲಿದೆ ಬಿಬಿಎಂಪಿ ರೂಪುರೇಷೆ: ಇನ್ಮುಂದೆ ಮೇಯರ್ ಅಧಿಕಾರವಧಿ 30 ತಿಂಗಳು
ಸಿಎಂ ಮಾತಿಗೆ ಧ್ವನಿಗೂಡಿಸಿದ ಸಚಿವ ಕೆ.ಎಸ್.ಈಶ್ವರಪ್ಪ, ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಅವ್ಯವಹಾರ ನಡೆದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ನಾನು ಇಲಾಖೆಯ ಸಚಿವನಾದಗಿನಿಂದಲೂ ಪ್ರತಿದಿನ ದೂರುಗಳು ಬರುತ್ತಿವೆ. ಸದನ ಯಾವ ರೀತಿ ಬಯಸುತ್ತದೆಯೋ ಆ ರೀತಿ ತನಿಖೆ ಮಾಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು. ಸಮೀಕ್ಷೆ ಮಾಡಲಾಗಿದೆ. ರಾಜ್ಯದಲ್ಲಿರುವ ಒಟ್ಟು 18 ಸಾವಿರ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 16,029 ಘಟಕಗಳು ಕಾರ್ಯದಲ್ಲಿವೆ. ಇದರಲ್ಲಿ ಶೇ. 70ರಷ್ಟು ಕಾರ್ಯಾಚರಣೆಯಲ್ಲಿದ್ದರೆ, ಶೇ. 20ರಷ್ಟು ಸ್ಥಗಿತಗೊಂಡಿವೆ. ಶೇ. 4ರಷ್ಟು ಸಂಪೂರ್ಣವಾಗಿ ಸ್ಥಗಿತಗೊಂಡಿವೆ ಎಂದು ತಿಳಿಸಿದರು.
ಘಟಕಗಳ ಖರೀದಿಯಲ್ಲಿ ಎಲ್ಲೆಲ್ಲಿ ಅವ್ಯವಹಾರ ನಡೆದಿದೆಯೋ ಅಂತಹ ಕಡೆ ಟೆಂಡರ್ ರದ್ದುಪಡಿಸಲಾಗಿದ್ದು, ಇದಕ್ಕೆ ಇತಿಶ್ರೀ ಹಾಡಲೇಬೇಕೆಂದು ಈಶ್ವರಪ್ಪ ಹೇಳಿದರು. ಇದಕ್ಕೂ ಮುನ್ನ ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ಇದೊಂದು ದೊಡ್ಡ ದಂಧೆಯಾಗಿದ್ದು, ಮಾರುಕಟ್ಟೆಯಲ್ಲಿ ಮೂರೂವರೆ ಲಕ್ಷಕ್ಕೆ ಸಿಕ್ಕರೆ ಅಧಿಕಾರಿಗಳು 12 ಲಕ್ಷಕ್ಕೆ ಖರೀದಿ ಮಾಡುತ್ತಾರೆ. ಇದು ದೊಡ್ಡ ಗೋಲ್‍ಮಾಲ್ ಆಗಿದೆ. ಜನರ ತೆರಿಗೆ ಹಣವನ್ನು ತಿನ್ನುವ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಇದು ಕೂಡ ದೊಡ್ಡ ಹಗಹರಣ. ಈಶ್ವರಪ್ಪನವರು ಸಚಿವರಾಗಿದ್ದಾಗ ಈ ಇಲಾಖೆಗೆ ಹೊಸ ಕಾಯಕಲ್ಪ ನೀಡಲಿದ್ದಾರೆ ಎಂಬ ನಿರೀಕ್ಷೆ ಮಾಡಲಾಗಿತ್ತು. ಆದರೆ ಅವರೇಕೋ ಮೌನವಾಗಿದ್ದಾರೆ ಎಂದು ಕಾಲೆಳೆದರು. ಹಗರಣ ನಡೆಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.