ಬೆಂಗಳೂರು: ಹೆಚ್ಚು ಲಾಭಾಂಶ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಪಾವತಿಸಿಕೊಂಡು ಕೋಟ್ಯಂತರ ರೂಪಾಯಿ ವಂಚಿಸಿದ್ದ ಇಬ್ಬರು ವಂಚಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರದೀಪ್ ಹಾಗೂ ವಸಂತ್ ಕುಮಾರ್ ಬಂಧಿತ ಆರೋಪಿಗಳು.
ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಮ್ಯ ಇಂಟರ್ ನ್ಯಾಷನಲ್ ಕಂಪನಿಯನ್ನು ಪ್ರದೀಪ್ ಹಾಗೂ ಪತ್ನಿ ಸೌಮ್ಯ ತೆರೆದಿದ್ದರು. ಅದೇ ಹೆಸರಿನಲ್ಲಿ ವೆಬ್ಸೈಟ್ ಸಹ ತೆರೆದಿದ್ದರು. 2021ರಿಂದ ವೆಬ್ಸೈಟ್ನಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ನೀಡುವುದಾಗಿ ಜಾಹೀರಾತು ನೀಡಿದ್ದರು. ಅಲ್ಲದೇ ಕೆಲಸ ನಮ್ಮದು ಹಣ ನಿಮ್ಮದು.. ತಿಂಗಳಿಗೆ ನಿಮ್ಮ ಹಣಕ್ಕೆ 2.5 ರಷ್ಟು ಬಡ್ಡಿ ನೀಡುವುದಾಗಿ ಜಾಹೀರಾತಿನಲ್ಲಿ ಪ್ರಕಟಿಸಿದ್ದರು. 5 ಸಾವಿರ ಹಣ ಹೂಡಿದರೆ ತಿಂಗಳಿಗೆ 2 ರಷ್ಟು ಹಾಗೂ ದೊಡ್ಡ ಮಟ್ಟದಲ್ಲಿ ಹಣ ಠೇವಣಿ ಇರಿಸಿದರೆ ಶೇ. 30 ರಷ್ಟು ಬಡ್ಡಿ ಹಣ ನೀಡುವುದಾಗಿ ಭರವಸೆ ನೀಡಿದ್ದರು. ಜಾಹೀರಾತು ಕಂಡು ಸಾರ್ವಜನಿಕರು ಹಣ ಹೂಡಿಕೆ ಮಾಡಿದ್ದರು. ಇದುವರೆಗೂ 700ಕ್ಕೂ ಹೆಚ್ಚು ಜನರಿಂದ ಸುಮಾರು 25 ಕೋಟಿ ಹಣ ಕಟ್ಟಿಸಿಕೊಂಡಿದ್ದರು ಎಂದು ಪೊಲೀಸರು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.
ಹೆಸರಿನ ಮೊದಲ ಅಕ್ಷರ ಸೇರಿಸಿ ಕಂಪನಿಗೆ ಹೆಸರಿಟ್ಟಿದ್ದ ದಂಪತಿ: ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದ ದಂಪತಿ, ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಸಂಪಾದಿಸಲು ಮುಂದಾಗಿದ್ದರು. ಅದರಂತೆ ವಂಚಕರು ಪ್ರದೀಪ್ ಹೆಸರಿನ ಪ ಹಾಗೂ ಪತ್ನಿ ಸೌಮ್ಯ ಹೆಸರಿನಲ್ಲಿ ಮ್ಯ ಎಂಬ ಅಕ್ಷರವನ್ನು ತೆಗೆದುಕೊಂಡು ಪ್ರಮ್ಯ ಇಂಟರ್ ನ್ಯಾಷನಲ್ ಕಂಪನಿ ಆರಂಭಿಸಿದ್ದರು. ಕಾನೂನುಬಾಹಿರವಾಗಿ ಕಂಪನಿ ತೆರೆದು ರಿಜಿಸ್ಟರ್ ಆಗಿರುವ ಕಂಪನಿ ಎಂದು ಸಾರ್ವಜನಿಕರನ್ನ ಯಾಮಾರಿಸಿದ್ದರು. ಹೆಚ್ಚೆಚ್ಚು ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ನೀಡುವುದಾಗಿ ಆಮಿಷವೊಡ್ಡಿದ್ದರು ಎಂಬುದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.
ಕಂಪನಿ ತೆರೆದು ಹಣ ಹೂಡಿಕೆ ಮಾಡಿಸುವಂತೆ ಸ್ನೇಹಿತ ವಸಂತಕುಮಾರ್ ಐಡಿಯಾ ನೀಡಿದ್ದ. ಅಲ್ಲದೇ ಹಲವರನ್ನು ಕರೆತಂದು ಹಣ ಹೂಡಿಕೆ ಸಹ ಮಾಡಿಸಿದ್ದ. ಕೋಣನಕುಂಟೆ ಹಾಗೂ ಜೆ.ಪಿ.ನಗರದಲ್ಲಿ ಎರಡು ಶಾಖೆಗಳನ್ನು ತೆರೆದು ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡಿದ್ದರು. ಹಣ ಕಟ್ಟಿಸಿಕೊಂಡು ವಂಚಿಸುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು, ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಸದ್ಯ ಇಬ್ಬರನ್ನು ಬಂಧಿಸಿ ಅವರಿಂದ ಚರ ಹಾಗೂ ಸ್ಥಿರಾಸ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿತೆ ಸೌಮ್ಯ ನಾಪತ್ತೆಯಾಗಿದ್ದು ಪತ್ತೆ ಕಾರ್ಯ ಚುರುಕುಗೊಳಿಸಿದ್ದಾರೆ. ಈ ಪ್ರಕರಣದ ಬಗ್ಗೆ ಪೊಲೀಸರು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ಪ್ರತಿ ನಿಮಿಷಕ್ಕೆ 84 ಸೈಬರ್ ವಂಚನೆ ಪ್ರಕರಣ ದಾಖಲು