ಬೆಂಗಳೂರು: ಕಡಿಮೆ ಬೆಲೆಯಲ್ಲಿ ನಿವೇಶನ ಕೊಡಿಸುವುದಾಗಿ ನಂಬಿಸಿ ಹಲವು ಜನರಿಂದ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡಿದ್ದ ಬೃಂದಾವನ ಪ್ರಾಪರ್ಟೀಸ್ ಮಾಲೀಕ ದಿನೇಶ್ ಗೌಡ ಎಂಬಾತನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಹಾಸನದ ಅರಕಲಗೂಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಂದಿರುವ ಪೊಲೀಸರು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಏನಿದು ಪ್ರಕರಣ? ನಗರದ ತಾವರೆಕೆರೆ, ಮಾಗಡಿರೋಡ್, ನೆಲಮಂಗಲ ಹಾಗೂ ಕಗ್ಗಲಿಪುರ ಸೇರಿದಂತೆ ಹಲವು ಕಡೆಗಳಲ್ಲಿ ಕಡಿಮೆ ಬೆಲೆಯಲ್ಲಿ ನಿವೇಶನ ಕೊಡಿಸುವುದಾಗಿ ಹೇಳಿ ಬೃಂದಾವನ ಪ್ರಾಪರ್ಟೀಸ್ ಜನರಿಂದ 1ರಿಂದ 5 ಲಕ್ಷದವರೆಗೆ ಹಣ ಪಡೆದಿತ್ತು. ಹಣ ನೀಡಿದ ಬಳಿಕ ನಿವೇಶನ ಕೇಳಿದರೆ ನೀಡಬೇಕಾಗಿರುವ ಬಡಾವಣೆಯ ಜಾಗ ಅಭಿವೃದ್ದಿಪಡಿಸುತ್ತಿದ್ದು, ಕೆಲಸ ಮುಗಿದ ಬಳಿಕ ನೀಡಲಾಗುವುದು ಎಂದು ಭರವಸೆ ನೀಡುತ್ತಿತ್ತು.
ಹಣ ನೀಡಿ ಹಲವು ವರ್ಷಗಳಾದರೂ ನಿವೇಶನ ಕೊಡಿಸದೆ ಕಂಪನಿ ಸತಾಯಿಸುತ್ತಿತ್ತು. ಈ ನಡುವೆ ಕಂಪೆನಿ ಮುಖ್ಯಸ್ಥ ದಿನೇಶ್ ಗೌಡ ತಲೆಮರೆಸಿಕೊಂಡಿದ್ದ. ಈ ಸುದ್ದಿ ತಿಳಿದು ಹಣ ಹೂಡಿಕೆ ಮಾಡಿದವರು, ಏಕಾಏಕಿ ರಾಜಾಜಿನಗರದ ಬೃಂದಾವನ ಪ್ರಾಪರ್ಟೀಸ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ಕಂಪೆನಿ ವಿರುದ್ದ 700 ಕ್ಕೂ ಅಧಿಕ ಮಂದಿ ದೂರು ದಾಖಲಿಸಿದ್ದರು.
ಇದನ್ನೂ ಓದಿ: ಮನೆಗೆ ನುಗ್ಗಿ, ವೃದ್ಧ ದಂಪತಿ ಬೆದರಿಸಿ ದರೋಡೆ ನಡೆಸಿದ್ದ ಆರೋಪಿಗಳ ಬಂಧನ
ದೂರುಗಳ ಸುರಿಮಳೆ ಬೆನ್ನಲ್ಲೇ ನಿನ್ನೆ ಅಜ್ಞಾತ ಸ್ಥಳದಿಂದ ವಿಡಿಯೊ ಹರಿಬಿಟ್ಟಿದ್ದ ದಿನೇಶ್, ಕೊರೊನಾ ಲಾಕ್ ಡೌನ್ ಎಲ್ಲಾ ಕ್ಷೇತ್ರದವರನ್ನೂ ಹೈರಾಣಾಗಿಸಿದೆ. ಅದರಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆಯೂ ಹೊರತಾಗಿಲ್ಲ. ಕಳೆದ ಎರಡು ವರ್ಷಗಳ ಆರ್ಥಿಕ ಹಿಂಜರಿತದಿಂದಾಗಿ ನಮ್ಮ ಮಾರುಕಟ್ಟೆ ಮತ್ತು ಹಣದ ಸರಪಳಿ ಹಳಿತಪ್ಪಿದೆ. ಈ ಹಳಿ ತಪ್ಪಿರುವ ಹಣ ಮತ್ತು ಮಾರುಕಟ್ಟೆಯ ಸರಪಳಿ ಇನ್ನು ಕೆಲವೇ ದಿನಗಳಲ್ಲಿ ಸರಿಹೋಗಲಿದ್ದು, ಎಲ್ಲಾ ಹೂಡಿಕೆದಾರರಿಗೂ ಕೂಡ ನಾವು ಯಾವುದೇ ಅನ್ಯಾಯವಿಲ್ಲದ ರೀತಿಯಲ್ಲಿ ಸೈಟ್ ನೀಡುತ್ತೇವೆ ಅಥವಾ ಹಣ ಹಿಂದಿರುಗಿಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದರು.
ಇದೀಗ ಪೊಲೀಸರು ಹಾಸನದ ಅರಕಲಗೂಡಿನಲ್ಲಿ ದಿನೇಶ್ ಗೌಡನನ್ನು ಬಂಧಿಸಿದ್ದಾರೆ.