ಬೆಂಗಳೂರು : ಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ದ್ವಿಚಕ್ರ ವಾಹನದಲ್ಲಿ ಡಿಕ್ಕಿ ಹೊಡೆದು ಹಾನಿಗೊಳಿಸಿ ಚಾಲಕನಿಂದ ಹಣ ದೋಚಿದ್ದ ನಾಲ್ವರು ಆರೋಪಿಗಳನ್ನು ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ರಾಜಪಾಳ್ಯದ ನಿವಾಸಿ ಕೆ.ಬಿ.ವಿಷ್ಣು ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಂದೀಪ್ ಹಾಗೂ ಹರೀಶ್ ಸೇರಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ವಿಷ್ಣು ಸೆಪ್ಟೆಂಬರ್ 21ರಂದು ಹೆಂಡತಿ, ಮಕ್ಕಳೊಂದಿಗೆ ಮನೆಗೆ ತೆರಳಲು ವರ್ತೂರು ಕೋಡಿ ಸಮೀಪ ಬರುವಾಗ ಸಂದೀಪ್ ಹಾಗೂ ಮತ್ತೊಬ್ಬ ಸಹಚರ ಕುಡಿದ ಮತ್ತಿನಲ್ಲಿ ಬೈಕ್ ಚಲಾಯಿಸಿ ಹಿಂಬದಿಯಿಂದ ಕಾರಿಗೆ ಗುದ್ದಿ, ಕಾರಿನ ಬಾನೆಟ್ ಹಾಗೂ ಗ್ಲಾಸ್ಗೆ ಹಾನಿ ಮಾಡಿದ್ದರು. ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಣ ನೀಡುವಂತೆ ಒತ್ತಾಯಿಸಿದ್ದರು.
ಜೇಬಿನಲ್ಲಿದ್ದ ಪರ್ಸ್ ಕಿತ್ತುಕೊಂಡು ನೋಡಿದಾಗ ಹಣವಿಲ್ಲದಿರುವುದು ಗೊತ್ತಾಗಿದೆ. ಮತ್ತಿಬ್ಬರನ್ನು ಸ್ಥಳಕ್ಕೆ ಕರೆಯಿಸಿಕೊಂಡು ಚಾಲಕನ ಮೊಬೈಲ್ ಕಸಿದು ಬಲವಂತವಾಗಿ ಫೋನ್ ಪೇ ಮೂಲಕ 6 ಸಾವಿರ ಹಣ ಪಾವತಿಸಿಕೊಂಡು ಕಾಲ್ಕಿತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕಾರು ಚಾಲಕ ಪೋಸ್ಟ್ ಮಾಡಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ವಿಷ್ಣುವಿನಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರೆಲ್ಲರೂ ವರ್ತೂರು ಬಳಿಯ ರಾಮಗೊಂಡನಹಳ್ಳಿಯವರು. ಕುಡಿದ ಮತ್ತಿನಲ್ಲಿ ಅಪಘಾತ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ಕಂಡುಬಂದಿದೆ. ಆರೋಪಿಗಳ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ದಾಖಲಾಗಿಲ್ಲ. ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂಗಡಿ ಮಾಲೀಕನಿಗೆ 1 ಕೆಜಿ ಚಿನ್ನ ವಂಚನೆ-ಆರೋಪಿ ಸೆರೆ: ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲಿರುವ ಅಭಿಷೇಕ್ ಎಂಬವರಿಗೆ ಸೇರಿದ ಚಿನ್ನದ ಮಳಿಗೆಯಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದವನು ಮಾಲೀಕನಿಗೆ ಸುಳ್ಳು ಹೇಳಿ 1 ಕೆ.ಜಿಗೂ ಹೆಚ್ಚು ಚಿನ್ನಾಭರಣ ದೋಚಿದ್ದು, ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ರಾಜಸ್ತಾನ ಮೂಲದ ಲಾಲ್ ಸಿಂಗ್ ಎಂಬಾತ ಆರೋಪಿ. ಕಳೆದ ತಿಂಗಳು 28ರಂದು ಆಂಧ್ರದ ನಲ್ಲೂರಿನಲ್ಲಿರುವ ಮುಕೇಶ್ ಹಾಗೂ ಶುಭಂ ಗೋಲ್ಡ್ ಜ್ಯುವೆಲ್ಲರಿ ಶಾಪ್ಗಳ ಮಾಲೀಕರಿಗೆ ಚಿನ್ನಾಭರಣ ಕೊಟ್ಟು ಬರುವಂತೆ ಲಾಲ್ ಸಿಂಗ್ಗೆ ಮಾಲೀಕರು ಸೂಚಿಸಿದ್ದರು.
ಈ ಸಂದರ್ಭದಲ್ಲಿ ಯಾರೋ ಅಪರಿಚಿತರು ಗನ್ ಇಟ್ಟು ಕೈಗಳಿಗೆ ಚಾಕುವಿನಿಂದ ಹಲ್ಲೆ ಮಾಡಿ ಚಿನ್ನವಿರುವ ಬ್ಯಾಗ್ ಕಸಿದುಕೊಂಡರು ಎಂದು ಸುಳ್ಳು ಹೇಳಿ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದನು. ಇದರಿಂದ ಅನುಮಾನಗೊಂಡ ಮಾಲೀಕರು ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಇನ್ಸ್‌ಸ್ಪೆಕ್ಟರ್ ಹನುಮಂತ್ರ ಭಜಂತ್ರಿ, ಲಾಲ್ ಸಿಂಗ್ನನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದಾಗ ಅಪರಾಧ ಕೃತ್ಯದ ಬಗ್ಗೆ ಆರೋಪಿ ಸತ್ಯ ಬಾಯ್ಬಿಟ್ಟಿದ್ದನು.
ಇದನ್ನೂ ಓದಿ : ಬೆಂಗಳೂರಲ್ಲಿ ಹಾಡಹಗಲೇ ಜ್ಯುವೆಲ್ಲರಿ ಶಾಪ್ ಮಾಲೀಕನ ಮೇಲೆ ಗುಂಡಿನ ದಾಳಿ : ಒಂದು ಕೆಜಿ ಚಿನ್ನದೊಂದಿಗೆ ದರೋಡೆಕೋರರು ಪರಾರಿ!