ಬೆಂಗಳೂರು: ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೂರು ಕಾಯ್ದೆಗಳ ವಿರುದ್ಧ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ನಡೆಸುತ್ತಿರುವ ದೌರ್ಜನ್ಯ ಖಂಡಿಸಿ ನಗರದ ಮೌರ್ಯ ಸರ್ಕಲ್ನಲ್ಲಿ ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ಸಮಿತಿ ವತಿಯಿಂದ ಪ್ರತಿಭಟಿಸಲಾಯಿತು.
ಕೋವಿಡ್ನಂತಹ ಸಂಕಷ್ಟದ ಸಮಯದಲ್ಲೂ ರೈತರು ದೇಶಕ್ಕೆ ಆಹಾರ ಭದ್ರತೆ ನೀಡಿದ್ದಾರೆ. ಆದರೆ ವಿವಾದಾತ್ಮಕ ಕಾಯ್ದೆಗಳನ್ನು ತಂದು ರೈತರಿಗೆ ಬಿಜೆಪಿ ಸರ್ಕಾರ ಆತಂಕ ತಂದೊಡ್ಡಿದೆ. ಪ್ರತಿಭಟನಾಕಾರರ ಮೇಲೆಯೇ ಜಲ ಫಿರಂಗಿ, ಅಶ್ರುವಾಯು ಪ್ರಯೋಗಿಸಿ ರೈತರನ್ನು ರಾಜಧಾನಿಗೆ ಪ್ರವೇಶಿಸದ ಹಾಗೆ ತಡೆಯೊಡ್ಡುವ ಮೂಲಕ ರೈತರ ಮೇಲೆ ಕೇಂದ್ರ ಸರ್ಕಾರ ದಬ್ಬಾಳಿಕೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಜಿಜಿಹಳ್ಳಿ ಬಿ.ನಾರಾಯಣಸ್ವಾಮಿ ಮಾತನಾಡಿ, ಇವತ್ತು ಇಡೀ ದೇಶಕ್ಕೆ ಅನ್ನ ಕೊಡುತ್ತಿರುವ ಅನ್ನದಾತರಿಗೆ ಆಗಿರುವ ಅನ್ಯಾಯವನ್ನು ಪ್ರಧಾನಿಗಳ ಗಮನಕ್ಕೆ ತರಲು ಆರು ಕೋಟಿ ಜನರು ಹೋಗಿರುವಾಗ ಅವರಿಗೆ ಲಾಟಿ ಏಟು, ಜಲ ಫಿರಂಗಿ ಪ್ರಯೋಗಿಸಿ ಅಮಾನುಷವಾಗಿ ನಡೆಸಿಕೊಳ್ಳುತ್ತಿದ್ದಾರೆ. ಮಳೆ, ಬಿಸಿಲು, ಹಸಿವು ಲೆಕ್ಕಿಸದೆ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ನಮ್ಮ ಬೆಂಬಲವಿದೆ.
ಇಂದು ಮಾತ್ರವಲ್ಲ ಅಧಿವೇಶನ ಆರಂಭವಾಗುವ 7ರಿಂದ 15ರವರೆಗೆ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲಿದ್ದೇವೆ. ಜೊತೆಗೆ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು.